Site icon Vistara News

ಇನ್ಸ್‌ಪೆಕ್ಟರ್‌ ನಂದೀಶ್‌ ಸಾವು | ಸಚಿವ ಎಂಟಿಬಿ ಸ್ಪಷ್ಟೀಕರಣ ಕೊಡಬೇಕಾಗುತ್ತದೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಬೆಂಗಳೂರು: ಕೆ.ಆರ್‌. ಪುರಂ ಇನ್ಸ್‌ಪೆಕ್ಟರ್‌ ನಂದೀಶ್‌ ಅವರ ಸಾವಿಗೆ ʻ೬೦-೭೦ ಲಕ್ಷ ದುಡ್ಡು ಕೊಟ್ಟು ಬಂದಿದ್ದೇ ಕಾರಣʼ ಎಂಬ ಹೇಳಿಕೆಗೆ ಸಂಬಂಧಿಸಿ ಸಚಿವ ಎಂ.ಟಿ.ಬಿ ನಾಗರಾಜ್‌ ಅವರು ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಗೃಹ ಸಚಿವನ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ʻʻಸಚಿವ ಎಂ.ಟಿ.ಬಿ ನಾಗರಾಜ್ ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದರ ಬಗ್ಗೆ ನಾನು ಅವರನ್ನು ಕರೆದು ಮಾತನಾಡುತ್ತೇನೆ. ಅವರು ಕಲಬುರಗಿಯಲ್ಲಿದ್ದಾರೆ ಅಲ್ಲೇ ಕ್ಲಾರಿಫಿಕೇಶನ್ ಕೊಡಬಹುದುʼʼ ಎಂದ ಗೃಹ ಸಚಿವರು, ನಾನು ಹೋಂ ಮಿನಿಸ್ಟರ್ ಆಗಿ ಯಾವುದೇ ಅಪವಾದಗಳು ಬಾರದೇ ಇದ್ದ ಹಾಗೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.

ʻʻನಂದೀಶ್ ಸಾವು ದುರದೃಷ್ಟಕರ. ಅವರಿಗೆ ಹಾರ್ಟ್ ಅಟ್ಯಾಕ್‌ ಆಗಿ ಸಾವು ಸಂಭವಿಸಿದೆ ಎಂದು ನನಗೆ ಮಾಹಿತಿ ಸಿಕ್ಕಿದೆ. ಈಗ ಯಾವುದ್ಯಾವುಕ್ಕೋ ಲಿಂಕ್ ಮಾಡಿ ಮಾತನಾಡುವುದು ಸರಿಯಲ್ಲʼʼ ಎಂದು ಆರಗ ಹೇಳಿದರು.

ಸರಕಾರದ ಸೂಚನೆಯ ಮೇರೆಗೇ ಕ್ರಮ
ಬೆಂಗಳೂರಿನಲ್ಲಿ ಕ್ಯಾಬರೆ, ಇಸ್ಪೀಟ್ ಕ್ಲಬ್, ಕ್ಯಾಸಿನೊ ಇವೆಲ್ಲವೂ ಬಂದಾಗಬೇಕು ಎಂದು ನಾನು ಆರಂಭದಿಂದಲೂ ಕೆಲಸ ಮಾಡಿದ್ದೇನೆ. ಆದರೆ ಇತ್ತೀಚಿಗೆ ಮತ್ತೆ ಓಪನ್ ಮಾಡುವ ಪ್ರಯತ್ನ ಕೆಲವು ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ‌ ಕಮಿಷನರ್ ಅವರು ಎಲ್ಲರಿಗೂ ಸುತ್ತೋಲೆ ಕಳುಹಿಸಿ ಎಲ್ಲವನ್ನು ಬಂದ್ ಮಾಡಬೇಕು ಎಂದು ಸೂಚಿಸಿದ್ದರು.

ʻʻಅವಧಿ ಮೀರಿ ಕ್ಲಬ್‌ಗಳು ನಡೆಯುತ್ತಿದ್ದರೆ ಅದಕ್ಕೆ ಸ್ಥಳೀಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕಮಿಷನರ್‌ ಸ್ಪಷ್ಟವಾಗಿ ಹೇಳಿದ್ದರು. ಇತ್ತೀಚೆಗೆ ಅಲ್ಲಿ ರೇವ್‌ ಪಾರ್ಟಿ ನಡೆಸಲಾಗುತ್ತಿತ್ತು. ಪಾರ್ಟಿಯಲ್ಲಿ ಸುಮಾರು 20 ಜನ ಸೂಡಾನ್ ಪ್ರಜೆಗಳಿದ್ದರು. ೩೦ರಷ್ಟು ಹೆಣ್ಣು ಮಕ್ಕಳು ಕೂಡಾ ಇದ್ದರು. ಇಲ್ಲಿ ಸಿಸಿಬಿ ರೇಡ್ ಆಗಿತ್ತು. ಅದರ ಹಿನ್ನೆಲೆಯಲ್ಲಿ ಕಮಿಷನರ್ ಪ್ರತಾಪ್‌ ರೆಡ್ಡಿ ಅವರು ಸರ್ಕಲ್‌ ಇನ್ಸ್‌ಪೆಕ್ಟರ್‌ ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದರು. ಇದೇ ಮಾಹಿತಿಯನ್ನು ನನಗೂ ಕೂಡ ಕಳಿಸಿದ್ದರು. ಇದಕ್ಕೂ ಅವರ ಸಾವಿಗೂ ಯಾವುದೇ ರೀತಿಯ ಸಂಬಂಧ ಇದೆಯೋ ನನಗೆ ತಿಳಿದಿಲ್ಲʼʼ ಎಂದು ಗೃಹ ಸಚಿವರು ಹೇಳಿದರು. ನಂದೀಶ್ ಅವರಿಗೆ ಚಿಕ್ಕ ಮಕ್ಕಳಿದ್ದಾರೆ, ಅವರ ಸಾವು ನನಗೂ ಬೇಸರ ತಂದಿದೆ ಎಂದು ತಿಳಿಸಿದರು.

ʻʻನಮ್ಮ ಪೊಲೀಸ್ ಅಧಿಕಾರಿಗಳು ಟ್ರಾನ್ಸ್‌ಫರ್‌ಗೆ ದುಡ್ಡು ಕೊಟ್ಟು ಬಂದು ಬಳಿಕ ಹಣ ದುಡಿಯೋಕೆ ಹೋದರೆ ಇಡೀ ವ್ಯವಸ್ಥೆ ಗಬ್ಬೆದ್ದು ಹೋಗಲಿದೆ. ಇದಕ್ಕೆ ಯಾವತ್ತೂ ಅವಕಾಶ ಕೊಡುವುದಿಲ್ಲ. ನಾನು ಬಿಗಿಯಾಗಿ ನಿಂತು ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಅನವಶ್ಯಕವಾಗಿ ಅಪಪ್ರಚಾರ ಮಾಡಬಾರದು. ಸತ್ಯ ಏನು ಅನ್ನೋದನ್ನು ತಿಳಿದುಕೊಳ್ಳಬೇಕುʼʼ ಎಂದ ಅವರು, ಇಡೀ ಪ್ರಕರಣದ ವಿಚಾರಣೆ ಆಗಲಿದೆ. ಹಿರಿಯ ಅಧಿಕಾರಿಗಳಿಂದ ಸ್ಷಷ್ಟನೆ ಪಡೆಯಲು ಕಮಿಷನರ್‌ಗೆ ಸೂಚಿಸುತ್ತೇನೆ ಎಂದರು.

ಕರ್ನಾಟಕದ ಕ್ರೈಂ ನಿಯಂತ್ರಣಕ್ಕೆ ಶಾ ಮೆಚ್ಚುಗೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಚಿಂತನ ಶಿಬಿರದಲ್ಲಿ ಕರ್ನಾಟಕದ ಅಪರಾಧ ನಿಯಂತ್ರಣ ತಂತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು ಎಂದು ಸಚಿವರು ತಿಳಿಸಿದರು.

ʻʻದೇಶದ ಅಂತರಿಕ ಭದ್ರತೆಯ ಬಗ್ಗೆ ಬಹಳ ಗಂಭೀರವಾಗಿ ಚರ್ಚೆಯಾಗಿದೆ. ವಿಶೇಷವಾಗಿ ಸೈಬರ್ ಕ್ರೈಂ, ಗಡಿಗಳಲ್ಲಿ ನಡೆಯುವ ಚಟುವಟಿಕೆಗಳು, ಮಾದಕ ವಸ್ತು ಸರಬರಾಜು ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಈ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯಾವ ಯಾವ ರಾಜ್ಯ ಏನು ಮಾಡಿದೆ ಎಂಬುದು ಕುರಿತಾಗಿ ಮಾಹಿತಿ ಪಡೆದರು. ವಿಶೇಷವಾಗಿ ಕರ್ನಾಟಕದ ಕ್ರಮಗಳು ಉಲ್ಲೇಖ ಆಗಿದೆʼʼ ಎಂದು ಹೇಳಿದರು.

ʻʻಕರ್ನಾಟಕದಲ್ಲಿ ಕನ್ವಿಕ್ಷನ್ ರೇಟ್ ಹೆಚ್ಚಳ ಮಾಡಲು ಕರ್ನಾಟಕದಲ್ಲಿ ಸೀನ್ ಆಫ್ ಕ್ರೈಂ ಆಫೀಸರ್ (SOCO) ಆಗಿ 206 ಜನರನ್ನು ನೇಮಕ ಮಾಡಿದ್ದೆವು. ಹೆಚ್ಚು ಕಡಿಮೆ ಒಂದು ತಾಲೂಕಿನಲ್ಲಿ ಒಬ್ಬರು ಇಂಥ ಅಧಿಕಾರಿಗಳು ಇರುತ್ತಾರೆ. ಈ ವಿಚಾರ ಸಭೆಯಲ್ಲಿ ಗೃಹ ಸಚಿವರ ಗಮನ ಸೆಳೆಯಿತು. ಸಚಿವರು ಎರಡು ಮೂರು ಬಾರಿ ಭಾಷಣದಲ್ಲಿ ಇದರ ಉಲ್ಲೇಖ ಮಾಡಿದರು. ಕರ್ನಾಟಕದ ಕ್ರಮವನ್ನು ಇಡೀ ದೇಶಕ್ಕೆ ಅಳವಡಿಸುವ ಬಗ್ಗೆ ಮಾತನಾಡಿದರುʼʼ ಎಂದು ಗೃಹ ಸಚಿವರು ಹೇಳಿದರು.

Exit mobile version