ಶಿವಮೊಗ್ಗ: ವೆಂಕಟೇಶ ನಗರದಲ್ಲಿ ನಡೆದ ಅಕೌಂಟ್ಸ್ ಉದ್ಯೋಗಿ ವಿಜಯ (37) ಎಂಬವರ ಕೊಲೆ ಪ್ರಕರಣದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಹಲವು ಅಹಿತಕರ ಘಟನೆಗಳ ನಡುವೆ ಸೋಮವಾರ ರಾತ್ರಿ ವಿಜಯ ಅವರ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಜಬೀ (೨೩), ದರ್ಶನ್ (೨೧) ಮತ್ತು ಕಾರ್ತಿಕ್ (೨೧) ಎಂಬ ಮೂವರನ್ನು ಬಂಧಿಸಿದ್ದರು. ಈ ನಡುವೆ, ಜಬೀ ಎಂಬಾತ ಸ್ಥಳ ಮಹಜರು ಸಂದರ್ಭ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದು, ಆಗ ಕುಂಸಿ ಠಾಣೆಯ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ಅವರು ಆತ್ಮರಕ್ಷಣೆಗಾಗಿ ಜಬೀ ಎಂಬಾತನ ಕಾಲಿಗೆ ಗುಂಡು ಹಾರಿಸಿದರು.
ವೆಂಕಟೇಶ ನಗರದಲ್ಲಿ ನಡೆದ ಈ ಕೊಲೆಗೆ ಸಂಬಂಧಿಸಿ ಬಂಧಿತರಾದ ದುಷ್ಕರ್ಮಿಗಳಿಂದ ಹತ್ಯೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆದಿತ್ತು. ಮೊದಲ ಆರೋಪಿಯಾಗಿರುವ ಜಬೀ ಕೊಲೆ ಮಾಡಿದ ಬಳಿಕ ಚಾಕುವನ್ನು ನಗರದ ಹೋಟೆಲ್ ಹರ್ಷ ದ ಫರ್ನ್ ಸಮೀಪ ಚಾನಲ್ ಬಳಿ ಅಡಗಿಸಿಟ್ಟಿರುವುದಾಗಿ ತಿಳಿಸಿದ್ದ. ಹೀಗಾಗಿ ಆತನನ್ನು ಸ್ಥಳ ಮಹಜರು ಮತ್ತು ಚೂರಿಯನ್ನು ವಶಕ್ಕೆ ಪಡೆಯಲೆಂದು ಚಾನಲ್ ಬಳಿಗೆ ಕರೆದೊಯ್ಯಲಾಗಿತ್ತು.
ಪೊಲೀಸರು ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ, ಚಾಕು ಎಲ್ಲಿಟ್ಟಿದ್ದೀ, ತೆಗೆದು ತೋರಿಸು ಎಂದು ಹೇಳಿದಾಗ ಆತ ಅಡಗಿಸಿಟ್ಟಿದ್ದ ಚಾಕುವನ್ನು ಹೊರಗೆ ತೆಗೆದ. ಅಷ್ಟು ಮಾಡಿದ್ದಲ್ಲದೆ, ಪೊಲೀಸ್ ಸಿಬ್ಬಂದಿ ರೋಷನ್ ಅವರ ಮೇಲೆ ಅದೇ ಚಾಕುವಿನಿಂದ ಹಲ್ಲೆ ಮಾಡಿದ. ಕೂಡಲೇ ಎಚ್ಚೆತ್ತುಕೊಂಡ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಕೂಡಲೇ ಆತನ ಕಾಲಿಗೇ ಗುರಿ ಇಟ್ಟು ಗುಂಡು ಹಾರಿಸಿದರು.
ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಗುಂಡು ಜಬೀಯ ಕಾಲಿಗೆ ಬಿದ್ದಿದ್ದು, ಕೂಡಲೇ ಆತನನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗಾಗಿ ದಾಖಲಿಸಲಾಯಿತು. ಜಬೀಯಿಂದ ಹಲ್ಲೆಗೆ ಒಳಗಾದ ಪೊಲೀಸ್ ಸಿಬ್ಬಂದಿ ರೋಷನ್ ಅವರನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.
ದರೋಡೆ ಮಾಡಲು ಹೋಗಿ ಕೊಲೆಯೇ ಮಾಡಿದರು!
ಈಗ ಬಂಧಿತರಾಗಿರುವ ಜಬೀ, ಕೀರ್ತನ್ ಮತ್ತು ದರ್ಶನ್ ಒಂಟಿಯಾಗಿ ಹೋಗುವ ವ್ಯಕ್ತಿಗಳನ್ನು ತಡೆದು ದರೋಡೆ ಮಾಡುವುದನ್ನೇ ವೃತ್ತಿಯಾಗಿ ಮಾಡಿಕೊಂಡವರಾಗಿದ್ದು, ವಿಜಯ್ ಅವರ ಕೊಲೆಯೂ ಇದೇ ಕಾರಣಕ್ಕಾಗಿ ನಡೆದಿದೆ ಎಂದು ತಿಳಿದುಬಂದಿದೆ. ವಿಜಯ ಅವರ ಕುತ್ತಿಗೆಯಲ್ಲಿದ್ದ ಚೈನನ್ನು ಕಿತ್ತುಕೊಳ್ಳುವುದಕ್ಕಾಗಿ ಪ್ರಯತ್ನಿಸಿದ್ದಾರೆ. ಈ ವೇಳೆ ಜಟಾಪಟಿ ನಡೆದು ಕೊಲೆ ಮಾಡಿದ್ದರು ಎನ್ನಲಾಗಿದೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ.
ಹಲವು ಪ್ರಕರಣಗಳಲ್ಲಿ ಭಾಗಿ
ಬಂಧಿತರ ಕೊಲೆಗಡುಕರು ಹಲವು ಸುಲಿಗೆ ದರೋಡೆ, ಕೊಲೆ ಯತ್ನ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾದವರು ಎಂದು ಎಸ್‌ಪಿ ಮಿಥುನ್ ತಿಳಿಸಿದ್ದಾರೆ.
ಮೊದಲ ಆರೋಪಿಯಾಗಿರುವ ಜಬೀ ಮೇಲೆ ಈ ಹಿಂದೆ ಸುಲಿಗೆ, ಡರೋಡೆ, ಕೊಲೆಯತ್ನ, ಗಾಂಜಾ ಮತ್ತು ಇತರೆ ಪ್ರಕರಣಗಳು ಸೇರಿ ಒಟ್ಟು 11 ಪ್ರಕರಣಗಳಿವೆ. ದರ್ಶನ್ ಮೇಲೆ ಈ ಹಿಂದೆ ಸುಲಿಗೆ, ಡರೋಡೆ, ಮತ್ತು ಇತರೆ ಪ್ರಕರಣಗಳು ಸೇರಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಕಾರ್ತಿಕ್ ಅಲಿಯಾಸ್ ಕಟ್ಟೆ ಕಾರ್ತಿಕ್ ಮೇಲೆ ಈ ಹಿಂದೆ 3 ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿಯನ್ನು ದಸ್ತಗಿರಿ ಮಾಡಲು ಬಾಕಿ ಇದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ | Murder | ಶಿವಮೊಗ್ಗದಲ್ಲಿ ಉದ್ವಿಗ್ನತೆ ನಡುವೆಯೇ ನಡೆಯಿತು ಆಸ್ಪತ್ರೆಯ ಅಕೌಂಟ್ಸ್ ಸಿಬ್ಬಂದಿ ಕೊಲೆ