Site icon Vistara News

ಕೊಪ್ಪಳದಲ್ಲಿ ಗುಂಪುಗಳ ಮಾರಾಮಾರಿ‌: 25ಕ್ಕೂ ಅಧಿಕ ಜನ ಪೊಲೀಸರ ವಶಕ್ಕೆ

ಗುಂಪುಗಳ ಮಾರಾಮಾರಿ‌

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ (ಆ.11) ಮುಂಜಾನೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಪ್ರಾಣ ಕಳೆದುಕೊಂಡಿದ್ದ ಪ್ರಕರಣ ಸಂಬಂಧ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ 25ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡು ಗುಂಪಿನವರಿಂದ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲುಗೊಂಡಿದೆ. ಖಾದರಭಾಷಾ ಹಾಗೂ ಹಂಪಮ್ಮ ಎಂಬುವರಿಂದ ಒಟ್ಟು 58 ಜನರ ವಿರುದ್ಧ ದೂರು ದಾಖಲುಗೊಂಡಿದೆ. ಮೃತ ಭಾಷಾವಲಿ ಮಾಳಗದ್ದಿ ಸಹೋದರ ಖಾದರ ಭಾಷಾರಿಂದ 28 ಜನರ ವಿರುದ್ದ ದೂರು ದಾಖಲಾಗಿದೆ. ಮೃತ ಯಂಕಪ್ಪನ ಪತ್ನಿ ಹಂಪ್ಪಮ್ಮ‌ ಎಂಬುವರಿಂದ 30 ಜನರ ವಿರುದ್ಧ ದೂರು ದಾಖಲಾಗಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ 143,147,148,323,324,504,507 ಕಲಂ‌ ಅಡಿಯಲ್ಲಿ ಕೇಸ್ ದಾಖಲುಗೊಂಡಿದೆ.

ಇದನ್ನೂ ಓದಿ | ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ಮಾರಾಮಾರಿ; ಇಬ್ಬರ ಸಾವು, 144 ಸೆಕ್ಷನ್ ಜಾರಿ

25 ಜನರನ್ನು ವಶಕ್ಕೆ ಪಡೆದ ಪೊಲೀಸರು

ಗಲಾಟೆಗೆ ಸಂಬಂಧಿಸಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ 25 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇರುವ ಸ್ಥಿತಿ ನಿರ್ಮಾಣವಾಗಿದ್ದು, ಒಟ್ಟು 58 ಜನರ ವಿರುದ್ಧ ಪ್ರಕರಣ ದಾಖಲಾಗಿದೆ . ಇನ್ನಷ್ಟು ಜನರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಈ ಕುರಿತು ಬಳ್ಳಾರಿ ವಲಯ ಐಜಿಪಿ ಮನೀಷ್ ಕರ್ಬೇಕರ್ ಮಾತನಾಡಿ ʻʻಪ್ರಕರಣಕ್ಕೆ ಸಂಬಂಧಿಸಿದಂತೆ
ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಈ ಘಟನೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದೆ. ಗ್ರಾಮದಲ್ಲಿದ್ದ ಉದ್ವಿಗ್ನ ಸ್ಥಿತಿ ಈಗ ನಿಯಂತ್ರಣದಲ್ಲಿದೆ. ಗುರುವಾರವೇ ಮೃತರಿಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಗ್ರಾಮದಲ್ಲಿ ಯಾರೂ ಭಯ ಪಡುವುದು ಬೇಡ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹುಲಿಹೈದರದಲ್ಲಿ ಪೊಲೀಸ್ ಠಾಣೆ ಆರಂಭಿಸುವ ಪ್ರಸ್ತಾವನೆ ಇಲ್ಲ. ಮುಂದಿನ ದಿನಗಳಲ್ಲಿ ಅವಶ್ಯವಿದ್ದರೆ ಪೊಲೀಸ್ ಉಪಠಾಣೆ ಆರಂಭಿಸಲಾಗುವುದುʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂಗೆ ಪತ್ರ ಬರೆದಿದ್ದ ಬಿಜೆಪಿ ಕಾರ್ಯಕರ್ತ

ಕಳೆದ ವರ್ಷವಷ್ಟೇ ಹುಲಿಹೈದರ ಗ್ರಾಮದಲ್ಲಿ ಉಪ ಪೊಲೀಸ್ ಠಾಣೆ ಮಂಜೂರು ಮಾಡಲು ಸಿಎಂಗೆ ಬಿಜೆಪಿ ಕಾರ್ಯಕರ್ತ ಹನುಮೇಶ್ ಹುಳಕಿಹಾಳ ಪತ್ರ ಬರೆದಿದ್ದರು ಎನ್ನಲಾಗಿದೆ. ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಠಾಣೆಗೆ ಈ ಹಿಂದೆಯೇ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಕಾನೂನಿನ ಭಯವಿಲ್ಲದಂತಾಗಿದೆ. ಜತೆಗೆ ಮಹಿಳೆಯರು ಓಡಾಡುವ ಹಾಗಿಲ್ಲ. ಕುಡಿದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹೀಗಾಗಿ ಹುಲಿಹೈದರ್ ಗ್ರಾಮದಲ್ಲಿ ಉಪ ಪೊಲೀಸ್ ಠಾಣೆ ಮಂಜೂರು ಮಾಡಲು ಮುಖ್ಯಮಂತ್ರಿಗಳಿಗೆ ಹನಮೇಶ್ ಪತ್ರ ಬರೆದಿದ್ದರು ಎನ್ನಲಾಗಿದೆ.

ಏನಿದು ಪ್ರಕರಣ ?

ಬಾಷಾವಲಿ ಅಂಗಡಿಗೆ ಹೋದಾಗ ಗಲಾಟೆಯಾಗಿದ್ದೇ ಗಲಬೆಗೆ ಕಾರಣ ಎಂದು ತಿಳಿದು ಬಂದಿದೆ. ಅಂಗಡಿಗೆ ಹೋದಾಗ ಮಾತಿನ ಚಕಮಕಿಯಾಗಿ ಗಲಾಟೆಯಾಗಿತ್ತು. ಎರಡು ಗುಂಪುಗಳು ಕತ್ತಿ, ದೊಣ್ಣೆ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಇಬ್ಬರಿಗೆ ತಲೆಗೆ ತೀವ್ರವಾಗಿ ಏಟು ಬಿದ್ದ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬರ ತಲೆಗೆ ತೀವ್ರ ಗಾಯಗಳಾಗಿವೆ. ದೇಹ ಮತ್ತು ಮುಖದ ಮೇಲೆ ಕತ್ತಿಯಿಂದ ಹೊಡೆದಂತೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ | ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ, ಇಬ್ಬರು ದಾರುಣ ಮೃತ್ಯು

Exit mobile version