Site icon Vistara News

Nanjangud Clash: ಸಿದ್ದರಾಮಯ್ಯ ಪ್ರಚಾರದ ವೇಳೆ ದಲಿತರು-ಸವರ್ಣೀಯರ ನಡುವೆ ಗಲಾಟೆ

Clashes between Dalits and savarnas during Siddaramaiah's campaign

ಮೈಸೂರು: ನಂಜನಗೂಡು ತಾಲೂಕಿನ ದಾಸನಪುರ ಗ್ರಾಮದಲ್ಲಿ (Nanjangud Clash) ಬಸವಣ್ಣನ ಪುತ್ಥಳಿ ನಿರ್ಮಾಣ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ದಲಿತರು- ಸವರ್ಣೀಯರ ನಡುವೆ ಗಲಾಟೆ ನಡೆದಿದ್ದರಿಂದ ಶನಿವಾರ ರಾತ್ರಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ದಾಸನಪುರ ಗ್ರಾಮದಲ್ಲಿ ಬಸವ ಪುತ್ಥಳಿ ನಿರ್ಮಿಸಲು ಬಸವ ಬಳಗ ಮಾಜಿ ಸಿಎಂಗೆ ಮನವಿ ಮಾಡಿದೆ. ಇದಕ್ಕೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿ, ನಾನು ಬಸವನ ಅನುಯಾಯಿ. ಅವರನ್ನು ಸರ್ಕಾರಿ ಅಧಿಕಾರಿಗಳು ಅನುಸರಿಸಲಿ ಎಂದು ಕಚೇರಿಯಲ್ಲಿ ಬಸವಣ್ಣನ‌ ಫೋಟೊ ಕಡ್ಡಾಯ ಮಾಡಿಸಿದೆ. ಗ್ರಾಮದಲ್ಲೂ ನೂರಕ್ಕೆ ನೂರು ಬಸವ ಪುತ್ಥಳಿ ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.

ಬಳಿಕ ಸಿದ್ದರಾಮಯ್ಯ ತೆರಳುತ್ತಿದ್ದಂತೆ ಪುತ್ಥಳಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನೂಕಾಟ ತಳ್ಳಾಟದೊಂದಿಗೆ ಆರಂಭವಾದ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಿದರು.

ಇದನ್ನೂ ಓದಿ | K Sudhakar: ರಂಜಾನ್‌ ಹಿನ್ನೆಲೆ ಈದ್ಗಾ ಮೈದಾನಕ್ಕೆ ತೆರಳಿದ ಸಚಿವ ಸುಧಾಕರ್‌ಗೆ ವಿರೋಧ? ಗಲಾಟೆ ನಡೆದಿದ್ದು ಏಕೆ?

ಲಿಂಗಾಯತ ಮುಖ್ಯಮಂತ್ರಿಗಳೇ ರಾಜ್ಯವನ್ನು ಹಾಳು ಮಾಡಿದ್ದು ಎಂದ ಸಿದ್ದರಾಮಯ್ಯ: ಡ್ಯಾಮೇಜ್‌ ಕಂಟ್ರೋಲ್‌ ಪ್ರಯತ್ನ ಆರಂಭ

ಮೈಸೂರು: ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಆಡಿದ ಮಾತಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪೇಚಿಗೆ ಸಿಲುಕಿದ್ದಾರೆ. ವೀರಶೈವ ಲಿಂಗಾಯತರು ಭ್ರಷ್ಟರು, ಅವರೇ ರಾಜ್ಯವನ್ನು ಹಾಳು ಮಾಡಿದರು ಎಂದಿದ್ದಾರೆ. ನಂತರ ವಿವಾದವಾಗುವುದನ್ನು ಕಂಡು ಸ್ಪಷ್ಟನೆಗೆ ಮುಂದಾಗಿದ್ದಾರೆ.

ಮೈಸೂರಿನಲ್ಲಿ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ವಾಹಿನಿಯೊಂದರ ಜತೆಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಲಿಂಗಾಯತ ಸಿಎಂ ಮಾಡಿ ಎಂದು ಕಾಂಗ್ರೆಸ್‌ಗೆ ಬಿಜೆಪಿ ಸವಾಲು ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, “ಈಗಾಗಲೆ ಇಷ್ಟು ಚೀಫ್‌ ಮಿನಿಸ್ಟರ್ಸ್‌ ಇದಾರಲ್ಲ? ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ಹಾಳು ಮಾಡಿರುವುದು ರಾಜ್ಯವನ್ನು” ಎಂದು ಹೇಳಿದ್ದರು. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ವ್ಯಾಪಕವಾಗಿ ಟೀಕಿಸಿದೆ.

ಬೊಮ್ಮಾಯಿಗೆ ಸೀಮಿತವಾಗಿ ಹೇಳಿದ್ದೆ

ಈ ವಿಚಾರ ಎಲ್ಲೆಡೆ ಹಬ್ಬುತ್ತಿರುವಂತೆ ಮತ್ತೆ ಮಾಧ್ಯಮಗಳಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ, ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ನಾನು ಬಸವರಾಜ ಬೊಮ್ಮಾಯಿ ಅವರಿಗೆ ಸೀಮಿತವಾಗಿ ಭ್ರಷ್ಟ ಎಂದು ಹೇಳಿದ್ದೆ, ಲಿಂಗಾಯತರು ಭ್ರಷ್ಟರು ಎಂದು ಎಲ್ಲಿಯೂ ಹೇಳಿಲ್ಲ. ಇದನ್ನು ವರದಿ ಮಾಡಿರುವುದು ಸರಿಯಾಗಿಲ್ಲ. ಲಿಂಗಾಯತರಲ್ಲಿ ಬಹಳಷ್ಟು ಮಂದಿ ಮುಖ್ಯಮಂತ್ರಿಗಳು ಅತ್ಯಂತ ಪ್ರಾಮಾಣಿಕರಿದ್ದರು. ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ.ಎಚ್ ಪಟೇಲರು ಇವರೆಲ್ಲ ಪ್ರಾಮಾಣಿಕರಾಗಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟರಿದ್ದಾರೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Tipu Sultan: ಸಿಎಂ ಆದರೆ ಮತ್ತೆ ಟಿಪ್ಪು ಜಯಂತಿ ಆಚರಿಸ್ತೀರ? ಎಂಬ ಪ್ರಶ್ನೆಗೆ ಜಾಣ ಉತ್ತರ ಕೊಟ್ಟ ಸಿದ್ದರಾಮಯ್ಯ

ಬಿಜೆಪಿಯವರು ನನ್ನ ಹೇಳಿಕೆಯನ್ನು ಕಟ್ ಮಾಡಿ ಸೇರಿಸಿ, ತಮಗೆ ಬೇಕಾದಂತೆ ತಿರುಚಿ ಚುನಾವಣೆ ಸಂದರ್ಭವಿರುವುದರಿಂದ ಅದರ ಲಾಭ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಲಿಂಗಾಯತ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ಹಿಂದೆ ಬಹಳ ಜನ ಲಿಂಗಾಯತರು ಪ್ರಾಮಾಣಿಕ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದರು ಆದರೆ ಬೊಮ್ಮಾಯಿ ಮಾತ್ರ ಭ್ರಷ್ಟರಾಗಿದ್ದಾರೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ಆಕ್ರೋಶ

ಭ್ರಷ್ಟಾಚಾರದ ಸಿಎಂ ಎಂದು ಟೀಕಿಸಿದ್ದ ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಅವರು, ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯನವರೇ ಕರ್ನಾಟಕ ಕಂಡಂತಹ ಭ್ರಷ್ಟ ಸರ್ಕಾರ ನಿಮ್ಮದು. 2013-18 ರವರೆಗೆ ಭ್ರಷ್ಟ ಸರ್ಕಾರ ನಡೆಸಿದವರು ನೀವು. ಬಿಡಿಎದಲ್ಲಿ ರಿಡೂ ಭ್ರಷ್ಟಾಚಾರ, ಸಣ್ಣ ಹಾಗೂ ಬೃಹತ್ ನಿರಾವರಿ, ಎಸ್ಸಿ ಎಸ್ಟಿ ಮಕ್ಕಳಿಗೆ ನೀಡುವ ಹಾಸಿಗೆ ದಿಂಬಿನಲ್ಲಿಯೂ ಬಿಡಲಿಲ್ಲ. ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ‌ಮಾಡಿದ ಖ್ಯಾತಿ ನಿಮ್ಮದು. ಎಸಿಬಿ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದಿರಿ, ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಗಳನ್ನು ರಕ್ಷಣೆ ಮಾಡಿದ್ದೀರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಅಧಿಕಾರ ಇಲ್ಲ. ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ ಎಂದು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

Exit mobile version