ಬೆಂಗಳೂರು: ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾಗಿದ್ದ ಸಿಎಂ ಇಬ್ರಾಹಿಂ ರಾಜಿನಾಮೆಯಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಆಗಸ್ಟ್ 11ರಂದು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ವಿಧಾನಪರಿಷತ್ನಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆಯನ್ನು ಸಿಎಂ ಇಬ್ರಾಹಿಂ ಹೊಂದಿದ್ದರು. ಆದರೆ ಬಿ.ಕೆ. ಹರಿಪ್ರಸಾದ್ ಅವರನ್ನು ಪ್ರತಿಪಕ್ಷ ನಾಯಕರಾಗಿ ನೇಮಕ ಮಾಡಲಾಯಿತು. ಇದರಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು.
ಇಬ್ರಾಹಿಂ ಅವರು ವಿಧಾನಸಭೆಯಿಂದ ಆಯ್ಕೆಯಾಗಿದ್ದವರು. 2024 ರ ಜೂನ್ 17ರವರೆಗೆ ಈ ಸ್ಥಾನದ ಅವಧಿ ಇದೆ. ಅಂದರೆ ಇನ್ನೆರಡು ವರ್ಷ ಉಳಿದಿರುವ ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಿದೆ.
ಜುಲೈ 25ಕ್ಕೆ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಆಗಸ್ಟ್ 1ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನಾಮಪತ್ರ ಹಿಂಪಡೆಯಲು ಆಗಸ್ಟ್ 4 ಕೊನೆಯ ದಿನ. ಅಗತ್ಯಬಿದ್ದರೆ ಆಗಸ್ಟ್ 11ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ರಾಜ್ಯದ ಎಲ್ಲ ಶಾಸಕರೂ ಮತದಾನಕ್ಕೆ ಅರ್ಹರಾಗಿರುತ್ತಾರೆ. ಅದೇ ದಿನ ಸಂಜೆ 5 ಗಂಟೆ ನಂತರ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ನಡೆಯುವುದು ಅನುಮಾನ
ಪ್ರಕ್ರಿಯೆಯ ಪ್ರಕಾರ ಚುನಾವಣಾ ಆಯೋಗ ಘೋಷಣೆ ಮಾಡಿದೆಯಾದರೂ ಈ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಕ ಅನುಮಾನ. ರಾಜ್ಯದ ಎಲ್ಲ ಶಾಸಕರೂ ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಒಂದೇ ಸ್ಥಾನ ಇರುವುದರಿಂದ, ಇದೀಗ ಬಹುಮತ ಹೊಂದಿರುವ ಬಿಜೆಪಿ ಅಭ್ಯರ್ಥಿಯೇ ಜಯಗಳಿಸುತ್ತಾರೆ. ಈ ಚುನಾವಣೆಗೆ ವಿಪ್ ನೀಡಲಾಗುವುದು ಹಾಗೂ ಮತವನ್ನು ಪಕ್ಷದ ಏಜೆಂಟ್ಗೆ ತೋರಿಸಬೇಕಿರುವುದರಿಂದ ಅಡ್ಡಮತದಾನದ ಸಾಧ್ಯತೆಯೂ ಕಡಿಮೆ. ಸದ್ಯದಲ್ಲೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ಚುನಾವಣೆ ನಡೆಯದೆಯೇ ಘೋಷಣೆಯಾಗುವ ಸಾಧ್ಯತೆಯೇ ಹೆಚ್ಚಾಗಿದೆ.
ಇದನ್ನೂ ಓದಿ | Murmu vs Sinha | ರಾಷ್ಟ್ರಪತಿ ಚುನಾವಣೆ ಮತದಾನ ಅಂತ್ಯ; ಸಂಸತ್ತಿನಲ್ಲಿ ಶೇ.99.18 ರಷ್ಟು ಮತ ಚಲಾವಣೆ