Site icon Vistara News

Dengue fever | ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ; ಇರಲಿ ಎಚ್ಚರ!

Dengue fever

ಬೆಂಗಳೂರು: ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. ಈ‌ ವರ್ಷ ರಾಜ್ಯದಲ್ಲಿ 7,317 ಡೆಂಗ್ಯೂ ಜ್ವರ (Dengue fever) ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಶಂಕಿತರನ್ನು ಗುರುತಿಸಿ ತಪಾಸಣೆ ನಡೆಸುವ ಕಾರ್ಯ ನಡೆಯುತ್ತಿದೆ.

ಈ ವರ್ಷ ಸುಮಾರು 1.48 ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರನ್ನು ಗುರುತಿಸಿ ತಪಾಸಣೆ ನಡೆಸಲಾಗಿದ್ದು, 66 ಸಾವಿರಕ್ಕೂ ಹೆಚ್ಚು ಜನರಿಗೆ ರಕ್ತ ಪರೀಕ್ಷೆ ಮಾಡಲಾಗಿದೆ. 2022ರ ಜನವರಿಯಿಂದ ಅಕ್ಟೋಬರ್‌ವರೆಗೆ 7,317 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಕಳೆದ ವರ್ಷ 7,189 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದವು. ಆ ಪೈಕಿ ಜ್ವರ ಪೀಡಿತರಲ್ಲಿ ಐವರು ಮೃತಪಟ್ಟಿದ್ದರು. ಹಾಗೆಯೇ ಬೆಂಗಳೂರು ನಗರದಲ್ಲಿ ೨೦೨೨ರ ಅಕ್ಟೋಬರ್‌ನಲ್ಲಿ 591 ಪ್ರಕರಣಗಳು ದೃಢಪಟ್ಟಿವೆ.

ಇದನ್ನೂ ಓದಿ | World stroke day | ಪಾರ್ಶ್ವವಾಯು ಬಗೆಗೆ ಇರಲಿ ಜಾಗೃತಿ: ಸಮಯ ಅಮೂಲ್ಯ

ಈ ವರ್ಷ ಯಾವ ಜಿಲ್ಲೆಯಲ್ಲಿ ಎಷ್ಟು ಡೆಂಗ್ಯೂ ಪ್ರಕರಣ?
ಬೆಂಗಳೂರು (ಬಿಬಿಎಂಪಿ) ವ್ಯಾಪ್ತಿಯಲ್ಲಿ 48,038 ಮಂದಿಯಲ್ಲಿ ಡೆಂಗ್ಯೂ ಶಂಕೆ ಇದ್ದು, ಈ ಪೈಕಿ 1,227 ಮಂದಿಯಲ್ಲಿ ದೃಢವಾಗಿದೆ. ಮೈಸೂರು ಜಿಲ್ಲೆಯಲ್ಲಿ 660 ಪ್ರಕರಣ, ಉಡುಪಿ ಜಿಲ್ಲೆಯಲ್ಲಿ 477 ಪ್ರಕರಣ, ಚಿತ್ರದುರ್ಗ ಜಿಲ್ಲೆಯಲ್ಲಿ 341 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 325 ಪ್ರಕರಣ, ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 300ಕ್ಕಿಂತ ಕಡಿಮೆ ಇದ್ದು ರಾಜ್ಯದಲ್ಲಿ ಈ ವರ್ಷ ಒಟ್ಟಾರೆ 317 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಡೆಂಗ್ಯೂ ಹೇಗೆ ಹರಡುತ್ತದೆ?
ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಆದರೆ, ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಸಿಲಿಕಾನ್ ಸಿಟಿಯಲ್ಲಿ ಚಳಿಗೆ ಮಕ್ಕಳು ತತ್ತರ
ಒಂದೆಡೆ ಚಳಿಯ ಕಾಟವಾದರೆ, ಇನ್ನೊಂದು ಕಡೆ ಮಳೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಹವಾಮಾನ ವೈಪರೀತ್ಯದಿಂದ ಜ್ವರ, ಕೆಮ್ಮು ನೆಗಡಿಯಂತಹ ಲಕ್ಷಣಗಳು ಮಕ್ಕಳಲ್ಲಿ ಹೆಚ್ಚಳವಾಗಿದೆ. ಇದರಿಂದ ನಗರದ ಆಸ್ಪತ್ರೆಗಳ ಮುಂದೆ ಜನರ ಕ್ಯೂ ಹೆಚ್ಚಾಗಿದ್ದು, ಮಕ್ಕಳ ಬಗ್ಗೆ ಎಚ್ಚರದಿಂದ ಇರುವಂತೆ ಪೋಷಕರಿಗೆ ವೈದ್ಯರು ಕಿವಿಮಾತು ಹೇಳುತ್ತಿದ್ದಾರೆ.

ಕೊರೆಯುವ ಚಳಿ ಮಕ್ಕಳ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರುತ್ತಿದೆ. ಇದರ ಜತೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮವಾಗಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗೆಯೇ ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆ ಹೆಚ್ಚಾಗಿದೆ. ಇನ್ನು ಬೆಂಗಳೂರಿನಲ್ಲಿ ನವೆಂಬರ್ 15 ರವರೆಗೂ ಮಳೆಯ ಜತೆಗೆ ಚಳಿಯೂ ಇರಲಿರುವುದರಿಂದ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ.

ಇದನ್ನೂ ಓದಿ | Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್‌ ಬರುತ್ತಾ?

Exit mobile version