ಚಿಕ್ಕಮಗಳೂರು: ಆತ್ಮಹತ್ಯೆ, ಕೊಲೆ, ದಂಗೆ… ಎಲ್ಲ ಪ್ರಕರಣಗಳಲ್ಲೂ ಶೀಘ್ರವಾಗಿಯೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಇಷ್ಟೆಲ್ಲ ಆದರೂ ಸಿಎಂ ಖಡಕ್ ಆಗಿಲ್ಲ ಅಂದರೆ ಏನು? ಎಂದು ಪ್ರತಿಪಕ್ಷಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( Basavaraj Bommai) ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪ್ರವಾಸದ ವೇಳೆ ಶೃಂಗೇರಿಯ ಮೆಣಸೆ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ನಾನು ಯಾವ ಪ್ರಕರಣದಲ್ಲೂ ಮೃದು ಧೋರಣೆ (Soft Corner) ತೋರಿಲ್ಲ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ (Santosh Suicide Case) ತಕ್ಷಣವೇ ಎಫ್ಐಆರ್ ಮಾಡಿ ಕೆಲಸ ಮಾಡುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಗಲಭೆಯ ಕುರಿತೂ ಕ್ರಮ ತೆಗೆದುಕೊಂಡಿದ್ದೇವೆ. ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣದಲ್ಲೂ ಕ್ರಮ ತೆಗೆದುಕೊಂಡಿದ್ದೇವೆ. ಹಣ್ಣಿನ ಅಂಗಡಿಯ ವಿಚಾರದಲ್ಲೂ ಕ್ರಮ ತೆಗೆದುಕೊಂಡಿದ್ದೇವೆ.
ಯಾವುದನ್ನೂ ವಿಳಂಬ ಮಾಡಿಲ್ಲ. ಪೊಲೀಸ್ ಮೇಲಿನ ದಾಳಿ ವಿಚಾರದಲ್ಲೂ ನಾವೇ ಕ್ರಮ ತೆಗೆದುಕೊಂಡಿದ್ದೇವೆ. ಇದಕ್ಕಿಂತ ಬೇರೆ ಇನೇನು ಬೇಕು ನಿಮಗೆ? ಹಾಗಾದರೆ ಖಡಕ್ ಸಿಎಂ ಎಂದರೆ ಏನು? ಎಂದು ಪ್ರಶ್ನಿಸಿದರು.
ಹೆಚ್ಚಿನ ಓದಿಗಾಗಿ: ವಕ್ಫ್ ಬೋರ್ಡ್ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಧಾರ್ಮಿಕ ವಿವಾದದಿಂದ CM ಅಂತರ
ಶೃಂಗೇರಿಗೆ ಮೊದಲ ಭೇಟಿ
ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬೊಮ್ಮಾಯಿ ಅವರು ಶೃಂಗೇರಿಗೆ ಭೇಟಿ ನೀಡಿದರು. ಶೃಂಗೇರಿಗೆ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ, ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀ ವಿದುಶೇಖರ ಭಾರತಿ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಕೆಲ ಹೊತ್ತು ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ ಸಿಎಂ ಜತೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಸಕ ರಾಜೇಗೌಡ ಇದ್ದರು.
ಮಹಾಕುಂಬಾಭಿಷೇಕದಲ್ಲಿ ಭಾಗಿ
ಹರಿಹರಪುರ ಶ್ರೀಮಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್ ಇವರ ವತಿಯಿಂದ ಆಯೋಜಿಸಿರುವ ಮಹಾಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು. ಸಮಾಜದಿಂದ ನಾವು ಪಡೆದ ವಿಚಾರಗಳನ್ನು ನಾವು ಸಮಾಜಕ್ಕೆ ಹಿಂದಿರುಗಿಸಬೇಕು. ಅದೇ ಸರಿಯಾದ ಲೆಕ್ಕ. ಇಂತಹ ಅತ್ಯುತ್ತಮ ಕಾರ್ಯವನ್ನು ಹರಿಹರಪುರ ಮಠ ಮಾಡುತ್ತಿದೆ. ದೈವ ಹಾಗೂ ಗುರುವಿನಲ್ಲಿ ಭಕ್ತಿ ಇದ್ದರೇನೆ ನಮ್ಮ ಜೀವನದ ಸಾರ್ಥಕತೆ ಕಾಣುತ್ತದೆ ಎಂದು ಹೇಳಿದರು.
ಆಸ್ಪತ್ರೆ ಬ್ಯಾನರ್ ಮೂಲಕ ಸ್ವಾಗತ
ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಶೃಂಗೇರಿಗೆ ಆಗಮಿಸಿದ ಬೊಮ್ಮಾಯಿ ಅವರಿಗೆ, ಸುಸಜ್ಜಿತ ಆಸ್ಪತ್ರೆ ಕುರಿತ ಬ್ಯಾನರ್ ಮೂಲಕ ಅನೇಕ ಕಡೆಗಳಲ್ಲಿ ಅಣಕವಾಡಲಾಯಿತು. ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಯಾವುದೇ ಗಂಭೀರ ಖಾಯಿಲೆಗಳಿಗೆ, ಅಪಘಾತಗಳಿಗೆ ನೂರು ಕಿ.ಮೀ.ವರೆಗೆ ಪ್ರಯಾಣಿಸಬೇಕು. ಇದಕ್ಕಾಗಿ ಅನೇಕ ದಿನಗಳಿಂದ ಹೋರಾಟ ನಡೆಸಯುತ್ತಿದೆ.
ಈ ಕುರಿತ ಬ್ಯಾನರ್‌ಗಳಲ್ಲಿ ವಿವಿಧೆಡೆ, ಸಿಎಂ ಆಗಮಿಸುವ ಮಾರ್ಗದಲ್ಲಿ ಅಳವಡಿಸಲಾಗಿತ್ತು. “ರಾಜ್ಯದ ಮುಖ್ಯಮಂತ್ರಿಳಿಗೆ ಆತ್ಮೀಯ ಸ್ವಾಗತ. ಶೃಂಗೇರಿ ಸುಸಜ್ಜಿತ ಆಸ್ಪತ್ರೆ ಕಡತವು 15 ವರ್ಷಗಳಿಂದ ಪ್ರಗತಿಯಲ್ಲಿದೆ. ನೂರು ಬೆಡ್ ಆಸ್ಪತ್ರೆ ಇಲ್ಲದ ಕಾರಣ ಕುಟುಂಬದವರಿಗೆ ಅನಾರೋಗ್ಯವಾದರೆ ನೂರು ಕಿಲೋಮೀಟರ್ ದೂರಕ್ಕೆ ಪ್ರಯಾಣಿಸಬೇಕಿದೆ. ಆದ್ಧರಿಂದ ವಾಹನದಲ್ಲಿ ನಿಧಾನವಾಗಿ ಚಲಿಸಿ” ಎಂದು ಬ್ಯಾನರ್‌ಗಳಲ್ಲಿ ಬರೆಯಲಾಗಿತ್ತು.