ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಮುಖ್ಯ ವಾಹಿನಿಗೆ ಸೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದರ ಅಭಿವೃದ್ಧಿಗೆ ನಾವು ಸಂಕಲ್ಪ ಮಾಡಿದ್ದೇವೆ. ಹೀಗಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ವರ್ಷದಿಂದ 5000 ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಇಲ್ಲಿನ ಎನ್ವಿ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವಾರು ಮಂದಿ ಅಭಿವೃದ್ಧಿಯ ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ, ನಾವು ನಿರಂತರವಾಗಿ ಕೆಲಸ ಮಾಡುವ ಮೂಲಕ ಈ ಭಾಗದ ಸಂಪೂರ್ಣ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದರು.
ಬದಲಾವಣೆಯ ಕಾಲ
ಇದೀಗ ಬದಲಾವಣೆಯ ಕಾಲ ಬಂದಿದೆ. ಜನ ಜಾಗೃತರಾಗಿದ್ದಾರೆ. ಈ ಭಾಗದಲ್ಲಿ ಎಲ್ಲ ವರ್ಗದ ಜನ ವಾಸಿಸುತ್ತಾರೆ. ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರಿಗೂ ಮನೆ, ಗ್ರಾಮಗಳಿಗೆ ರಸ್ತೆ ಸಂಪರ್ಕ, ಶಾಲೆಗಳು, ಆಸ್ಪತ್ರೆಗಳನ್ನು ಒದಗಿಸಿದಾಗ ಆರೋಗ್ಯಕರ, ವಿಶ್ವಾಸಯುತ ಜೀವನ ನಡೆಸಲು ಸಾಧ್ಯ. ನಮ್ಮ ಸರ್ಕಾರ ಈ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಂಕಲ್ಪ ಮಾಡಿದೆ. ಕಳೆದ ಸೆಪ್ಟೆಂಬರ್ 17 ರಂದು 3000 ಕೋಟಿ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದಂತೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ಒದಗಿಸಲಾಗಿದೆ. ಅನುಮೋದನೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಲು ಇಲ್ಲಿಗೆ ಬಂದಿದ್ದೇನೆ. ಇದು ಜನಪರ ಸರ್ಕಾರ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ | ಬೀದರ್-ಬಳ್ಳಾರಿ ಚತುಷ್ಪಥ ಎಕ್ಸ್ಪ್ರೆಸ್ ಹೈವೇ, ಮೂಲಸೌಕರ್ಯ ಅಭಿವೃದ್ಧಿ ಆದ್ಯತೆ: ಸಿಎಂ ಬೊಮ್ಮಾಯಿ
ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು
ಕಲ್ಯಾಣ ಕರ್ನಾಟಕದ ಉದ್ದಗಲಕ್ಕೂ 2100 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡುತ್ತಿದ್ದೇವೆ. ಕರ್ನಾಟಕ ಉದಯವಾದ ಮೇಲೆ ಇಷ್ಟು ಶಾಲಾ-ಕೊಠಡಿಗಳು ನಿರ್ಮಾಣವಾಗಿರಲಿಲ್ಲ. ರಾಜ್ಯದಲ್ಲಿ ಒಟ್ಟು 8000 ಕೊಠಡಿಗಳನ್ನು ಕಟ್ಟಲಾಗುತ್ತಿದೆ. ಮುಂದಿನ ಆಗಸ್ಟ್ 15 ರೊಳಗೆ ಶೇ. 100ರಷ್ಟು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಆದೇಶಿಸಲಾಗಿದೆ. 2500 ಅಂಗನವಾಡಿಗಳಿಗೆ ಮಂಜೂರಾತಿ ನೀಡಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ಸಶಕ್ತೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡುವ ಮೂಲಕ ಈ ಭಾಗದ ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು. ರಾಜ್ಯದ ಬೇರೆ ಭಾಗಗಳು ಅಭಿವೃದ್ಧಿ ಆಗುತ್ತಿರುವಂತೆಯೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲಾಗುವುದು. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡುವುದು ನಮ್ಮ ಘೋಷವಾಕ್ಯ ಹಾಗೂ ಗುರಿಯಾಗಿದೆ. ಈ ಭಾಗದ ಅಭಿವೃದ್ಧಿಯೊಂದಿಗೆ ಜನರನ್ನು ಪಾಲುದಾರರನ್ನಾಗಿ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಅನುದಾನ ನೀಡಿ 1000 ಗ್ರಾಮಗಳ ಸ್ತ್ರೀಶಕ್ತಿ ಸಂಘಕ್ಕೆ 1.50 ಲಕ್ಷ ರೂ. ಅನುದಾನ ನೀಡಿ ಸ್ವಯಂ ಉದ್ಯೋಗ ನೀಡಲು ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಪ್ರಥಮ ಬಾರಿಗೆ ಮಹಿಳೆಯರಿಗಾಗಿ ಜಾರಿಗೊಳಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವ ಸಂಘಗಳ ಮೂಲಕ ಪ್ರತಿ ಗ್ರಾಮದಲ್ಲಿ ಯುವಕರ ಸಂಘಟನೆ ಮಾಡಲಾಗುವುದು.
ನೀರಾವರಿ ಯೋಜನೆಯಡಿ ನಾರಾಯಣಪುರ ಬಲದಂಡೆ ಯೋಜನೆ ಅಡಿಯಲ್ಲಿ ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗ 3000 ಕೋಟಿ ರೂ. ಒದಗಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ, ಈಗ ಅದನ್ನು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದ್ದೇವೆ. 5000 ಶಿಕ್ಷಕರ ನೇಮಕಾತಿ ಯನ್ನು ಮುಂದಿನ ಮಾರ್ಚ್ ಒಳಗೆ ಮಾಡಲಾಗುವುದು. 11000 ಶಿಕ್ಷಕರ ನೇಮಕ ಮಾಡುವ ಬದ್ಧತೆ ನಮ್ಮದು. ವ್ಯವಸ್ಥೆಯಲ್ಲಿ ನಂಬಿಕೆ ಪುನರ್ ಸ್ಥಾಪನೆಗೆ ಬದ್ಧತೆಯಿಂದ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ರಾಯಚೂರಿಗೆ ಉನ್ನತ ಮಟ್ಟದ ವೈದ್ಯಕೀಯ ಸಂಸ್ಥೆ
ಕಲಬುರಗಿ ಜನ ಟೆಕ್ಸ್ಟೈಲ್ ಪಾರ್ಕ್, ರಾಯಚೂರಿನ ಜನರು ಏಮ್ಸ್ ಬಗ್ಗೆ ಕನಸು ಕಂಡಿದ್ದಾರೆ. ರಾಯಚೂರಿಗೆ ಒಂದು ಉನ್ನತ ಮಟ್ಟದ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಕಲಬುರಗಿಯಲ್ಲಿ ಸ್ಥಾಪಿಸುವ ಜಯದೇವ ಆಸ್ಪತ್ರೆಯನ್ನು ಪ್ರಧಾನಿಯವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | ಕಲ್ಯಾಣ ಕರ್ನಾಟಕದಲ್ಲಿ 2100 ಶಾಲಾ ಕೊಠಡಿ, 2500 ಅಂಗನವಾಡಿ ಕೇಂದ್ರ ಆರಂಭ: ಸಿಎಂ ಬೊಮ್ಮಾಯಿ