Site icon Vistara News

ಬೊಮ್ಮಾಯಿ ಆಡಳಿತಕ್ಕೆ ವರ್ಷ| ಮುಖ್ಯಮಂತ್ರಿ ಬೆರಳ ತುದಿಯಲ್ಲೇ ನೀರಾವರಿ ಮಾಹಿತಿ!

Bommai

ಬೆಂಗಳೂರು: ಕರ್ನಾಟಕ ರಾಜ್ಯದ ಭೌಗೋಳಿಕತೆಯ ಕಾರಣಕ್ಕೆ ಸುತ್ತಮುತ್ತಲಿನ ಎಲ್ಲ ರಾಜ್ಯಗಳ ಜತೆಗೆ ನೀರಿನ ಹಂಚಿಕೆ ನಡೆದಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ ಜತೆಗೆ ನೀರಿನ ಹಂಚಿಕೆ, ಬೇಡಿಕೆ ಅನೇಕ ದಶಕಗಳಿಂದ ನಡೆಯುತ್ತಿದೆ. ಇವುಗಳಲ್ಲಿ ಅನೇಕ ಯೋಜನೆಗಳು ವಿವಾದಗಳೂ ಆಗಿವೆ. ಇಂಥ ಕಗ್ಗಂಟಿನ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರ “ನೀರಾವರಿ ಪರಿಣತಿʼ ಉಪಯೋಗಕ್ಕೆ ಬರುತ್ತಿದೆ.

ನೆರೆ ರಾಜ್ಯಗಳೊಂದಿಗೆ ನೀರಿನ ಹಂಚಿಕೆ ಒಂದೆಡೆಯಾದರೆ, ರಾಜ್ಯದೊಳಗೆ ಬೃಹತ್‌ ನೀರಾವರಿ ಯೋಜನೆಗಳ ಪೂರ್ಣಗೊಳ್ಳುವಿಕೆ ಇನ್ನೊಂದು ಸವಾಲು. ಕೃಷಿಯನ್ನು ನೀರಾವರಿಯಾಗಿಸಿದರೆ ಅದರಿಂದ ರೈತರ ಬಾಳು ಹಸನಾಗುತ್ತದೆ, ರಾಜ್ಯ ಶ್ರೀಮಂತವಾಗುತ್ತದೆ. ಕರ್ನಾಟಕದ ನೀರಾವರಿ ಮಟ್ಟಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜ್ಞಾನ ಅಪಾರವಾದದ್ದು. ಕೇವಲ ರಾಜಕಾರಣಿಯಾಗಷ್ಟೆ ಅಲ್ಲದೆ ಒಬ್ಬ ನೀರಾವರಿ ಯೋಜನೆಗಳ ತಜ್ಞನಾಗಿ, ಕಾನೂನು ತಜ್ಞನಾಗುವಷ್ಟರ ಮಟ್ಟಿಗೆ ಪರಿಣತಿಯನ್ನು ಅವರು ಪಡೆದಿದ್ದಾರೆ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಬೊಮ್ಮಾಯಿ, ತಾವು ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ ಭಾರತದಲ್ಲೇ ಮೊದಲ ಶೇ.೧೦೦ ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತಂದಿದ್ದರು.

ಇದನ್ನೂ ಓದಿ | ಕೇರಳ ರಿಜಿಸ್ಟ್ರೇಷನ್‌ ಬೈಕ್‌ನಲ್ಲಿ ಬಂದಿದ್ದ 3 ದುಷ್ಕರ್ಮಿಗಳಿಂದ ಪ್ರವೀಣ್‌ ನೆಟ್ಟಾರು ಹತ್ಯೆ

ನೀರಾವರಿ ವಿಚಾರದಲ್ಲಿ ಬೊಮ್ಮಾಯಿ ಅವರ ಮಾತಿನಲ್ಲಿ ಸ್ಪಷ್ಟತೆ ಇರುತ್ತದೆ. “ನೀರಾವರಿ ವಿಚಾರದಲ್ಲಿ ಕರ್ನಾಟಕ ಮಧ್ಯಸ್ಥರದ ರಾಜ್ಯವಾಗಿದೆ. ಹೀಗಾಗಿ ನಮ್ಮ ಮೇಲಿರುವ ಮತ್ತು ಕೆಳಗಿರುವ ರಾಜ್ಯಗಳು ಆಗಾಗ ಜಲವಿವಾದ ತಗಾದೆ ತೆಗೆಯುತ್ತವೆ” ಎಂದು ಸಮಸ್ಯೆಯ ಮೂಲವನ್ನು ಬೊಮ್ಮಾಯಿ ವಿವರಿಸುತ್ತಾರೆ.

“ಕೃಷ್ಣಾ ನದಿಗೆ ಸಂಬಂಧಪಟ್ಟಂತೆ ಮೊದಲನೇ ಆದೇಶ ಬಚಾವತ್ ಆದೇಶ, ಎರಡನೇ ಅದೇಶ ಬ್ರಿಜೇಶ್ ಮಿಶ್ರಾ ಆದೇಶ. ಇವೆರಡೂ ಆದೇಶಗಳ ಅಧಿಸೂಚನೆಯಾಗಬೇಕಿದ್ದು, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಅದರ ಜತೆಗೆ ಮಹದಾಯಿ ನದಿಯ ಆದೇಶ ಬಂದರೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮೂರು ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಕರಾರು ತೆಗೆದಿರುವುದರಿಂದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ” ಎಂದು ಕಾನೂನಿನ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ವಿವರಿಸಬಲ್ಲವರು ಬೊಮ್ಮಾಯಿ.

ಉತ್ತರ ಕರ್ನಾಟಕ ಮಾತ್ರವಲ್ಲ, ದಕ್ಷಿಣದ, ವಿಶೇಷವಾಗಿ ಕಾವೇರಿ ವಿಚಾರದಲ್ಲೂ ಅವರದ್ದು ಆಳವಾದ ಅಧ್ಯಯನವಿದೆ. ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ನೀರಾವರಿ ವಿಚಾರದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿರುವಾಗ ಸ್ವತಃ ವಕೀಲರೇ ಬೊಮ್ಮಾಯಿ ಅವರನ್ನು ಸಂಪರ್ಕಿಸುತ್ತಿದ್ದರು. ನೀರಾವರಿ ಪ್ರದೇಶಗಳಲ್ಲಿನ ವಾಸ್ತವ ಸಂಗತಿಗಳು, ಕಾನೂನು ತೊಡಕುಗಳ ಮಾಹಿತಿಯನ್ನು ಪಡೆದು ನಂತರ ನ್ಯಾಯಾಲಯದಲ್ಲಿ ರಾಜ್ಯದ ಪರ ವಾದ ಮಾಡುತ್ತಿದ್ದರು. ಆ ಬಳಿಕ ಗೃಹ ಸಚಿವರಾಗಿ ಅವರು ಕಾನೂನು ಮತ್ತು ಶಿಸ್ತಿನ ಕುರಿತೂ ಅಪಾರ ಹಿಡಿತ ಹೊಂದಿದರು.

ಇದನ್ನೂ ಓದಿ | Praveen Nettaru | ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲು, ಪಕ್ಷದ ಜನೋತ್ಸವ ಕಾರ್ಯಕ್ರಮ ರದ್ದು

Exit mobile version