ಬೆಂಗಳೂರು: ಹಾಲಿನ ಉತ್ಪನ್ನಗಳ ದರ ಹೆಚ್ಚಳ ಆದೇಶವನ್ನು ಕೆಎಂಎಫ್ ವಾಪಸ್ ಪಡೆಯುವ ಮುನ್ಸೂಚನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಈ ನಡುವೆ, ಮುಖ್ಯಮಂತ್ರಿಯ ಹಾರಿಕೆಯ ಪ್ರತಿಕ್ರಿಯೆಯನ್ನು ಪ್ರತಿಪಕ್ಷಗಳು ಟೀಕಿಸಿವೆ.
ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳಿಗೆ 5% ಜಿಎಸ್ಟಿ ವಿಧಿಸಿದ್ದರಿಂದ ಅದರ ಹೊರೆಯನ್ನು ಕೆಎಂಎಫ್ ಸಂಸ್ಥೆ ಗ್ರಾಹಕರಿಗೆ ವರ್ಗಾವಣೆ ಮಾಡಿದೆ. ನಂದಿನಿ ಉತ್ಪನ್ನಗಳಾದ ಮೊಸರು, ಮಸಾಲಾ ಮಜ್ಜಿಗೆ ಹಾಗೂ ಲಸ್ಸಿ ದರವನ್ನು ಸೋಮವಾರದಿಂದಲೇ ಹೆಚ್ಚಳ ಮಾಡಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಪಕ್ಷಗಳೂ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.
ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರ ಜನರ ಹಣವನ್ನು ಪಿಕ್ ಪಾಕೆಟ್ ಮಾಡುತ್ತಿದೆ. ತೆರಿಗೆ ಹೊರೆ ಮೂಲಕ ಎಂಟು ವರ್ಷ ಆಡಳಿತದ ಗಿಫ್ಟ್ ನೀಡಿದೆ. ಈ ಕುರಿತು ಚರ್ಚೆ ನಡೆಸಲು ಸಂಜೆ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚೆಯ ನಂತರ ತೀರ್ಮಾನ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ | GST rate hike| ಜುಲೈ 18ರಿಂದ ಹಾಲು, ಮೊಸರು, ಅಕ್ಕಿ, ಹೋಟೆಲ್ ರೂಮ್, ಆಸ್ಪತ್ರೆ ವೆಚ್ಚ ಏರಿಕೆ
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ “”ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಜಿಎಸ್ಟಿ ವಿಧಿಸಿದ್ದಾರೆ. ಜೇನುತುಪ್ಪ, ಪನ್ನೀರ್ ಮೇಲೆ ತೆರಿಗೆ ಹೆಚ್ಚಿಸಿದ್ದಾರೆ. ಸೋಲಾರ್ ವಾಟರ್ ಹೀಟರ್, ಎಲ್ಇಡಿ ಮೇಲೆಯೂ ಜಿಎಸ್ಟಿ ಹೆಚ್ಚಿಸಿದ್ದಾರೆ. ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳ ಮೇಲೆ ತೆರಿಗೆ ಹೇರಿರುವುದು ಸರಿಯಲ್ಲ. ಮೋದಿ ಸರ್ಕಾರ ಎಂಟು ವರ್ಷದಲ್ಲಿ ಸಾಧನೆ ಮಾಡಿದೆ ಎಂದು ಹೇಳುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಲೆ ಏರಿಕೆ ಕುರಿತು ಮಾತನಾಡುತ್ತಿಲ್ಲ. ಬಿಜೆಪಿಯವರು ಜನಜೀವನ ಅಸ್ತವ್ಯಸ್ತ ಮಾಡುತ್ತಿದ್ದಾರೆ. ಜನರ ರಕ್ತ ಹೀರುತ್ತಿದ್ದಾರೆ. ದೇಶವನ್ನು ಬಿಜೆಪಿಯವರು ಹಾಳುಮಾಡುತ್ತಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ “”ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ನೀಡಬೇಕಾದ ಶಾಸಕರು ಫೈವ್ ಸ್ಟಾರ್ ಹೋಟೆಲ್ನಲ್ಲಿದ್ದಾರೆ. ಹೀಗೆಯೇ ಆದರೆ ಜನಸಾಮಾನ್ಯರು ಜೀವನ ನಡೆಸುವುದು ಹೇಗೆ? ಮುಂದಿನ ದಿನಗಳಲ್ಲಿ ಮೂತ್ರ ವಿಸರ್ಜನೆಗೂ ಇವರು ತೆರಿಗೆ ವಿಧಿಸುತ್ತಾರೆ. ಆಹಾರ ಪದಾರ್ಥಗಳ ಮೇಲಿನ ತೆರಿಗೆಯನ್ನು ಹಿಂಪಡೆಯಬೇಕುʼʼ ಎಂದು ಆಗ್ರಹಿಸಿದರು.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ “”ಕೇಂದ್ರದ ತೆರಿಗೆಯು ಬಡವರು ತಿನ್ನುವ ಅನ್ನಕ್ಕೂ ಕಲ್ಲು ಹಾಕುತ್ತಿದೆ. ಮೋದಿ ಸರ್ಕಾರದಲ್ಲಿ ಬಡವರು ಬದುಕುವ ಅವಕಾಶವೇ ಇಲ್ಲ. ಬಡವರು ಬಳಸುವ ವಸ್ತುಗಳಿಗೂ ಜಿಎಸ್ಟಿ ಬರೆ ಎಳೆದಿರುವ ಮೋದಿ ಸರ್ಕಾರ ಬಡವರ ಪಾಲಿಗೆ ಪೀಡಕವಾಗಿದೆ. ಜಿಎಸ್ಟಿ ಮೂಲಕ ಸುಲಿಗೆ ಮಾಡುತ್ತಿರುವ ಮೋದಿಯವರೆ, ನಿಮ್ಮ 56 ಇಂಚಿನ ಎದೆಯಲ್ಲಿ ಬಡವರ ಬಗ್ಗೆ ಕರುಣೆಯಿಲ್ಲವೆʼʼ ಎಂದು ಪ್ರಶ್ನಿಸಿದ್ದಾರೆ.
“”ಹಾಲು, ಮೊಸರು ಮಜ್ಜಿಗೆಗೂ ಸಾಲದೆಂಬಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಮೇಲೂ ಜಿಎಸ್ಟಿ ವಕ್ರದೃಷ್ಟಿ ಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ಹಗಲು ದರೋಡೆ ಮಾಡಲು ಜಿಎಸ್ಟಿ ಒಂದು ಅಸ್ತ್ರವಷ್ಟೆ. ಇದೇನಾ ಮೋದಿಯವರ ಅಚ್ಛೇದಿನ್? ಮೋದಿಯವರೆ, ಬಡವರು ತಿನ್ನುವ ಅನ್ನಕ್ಕೂ ತೆರಿಗೆ ಹಾಕುವ ನಿಮ್ಮ ಸರ್ಕಾರ ಅದ್ಯಾವ ಸೀಮೆಯ ಬಡವರ ಪರ ಸರ್ಕಾರʼʼ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಹಿಂಪಡೆಯಲು ಅವಕಾಶವಿದೆ
ಹಾಲಿನ ಉತ್ಪನ್ನಗಳ ದರ ಹೆಚ್ಚಳ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ “”ಬ್ರಾಂಡೆಡ್ ಹಾಗೂ ಪ್ಯಾಕೇಜ್ಡ್ ಹಾಲು, ಮೊಸರು ಮಾರುವವವರಿಗೆ ಮಾತ್ರ 5% ಜಿಎಸ್ಟಿ ಹಾಕಲಾಗಿದೆ. ಈ ತೆರಿಗೆಯನ್ನು ನಂತರ ಹಿಂಪಡೆಯಬಹುದು. ಮರುಪಾವತಿ ಇರುವುದರಿಂದ ಈ ತೆರಿಗೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವ ಅಗತ್ಯವಿಲ್ಲ. ಈಗಿನ ದರ ಏರಿಸಬೇಕಿಲ್ಲ. ಈ ಬಗ್ಗೆ ಗಮನಹರಿಸಲಾಗುವುದು. ಗ್ರಾಹಕರಿಗೆ ತೆರಿಗೆ ಹೊರೆ ದಾಟಿಸಬಾರದು. ಇದನ್ನು ಜಿಎಸ್ಟಿ ಮಂಡಳಿಯಲ್ಲಿ ಚರ್ಚಿಸಿ, ಸೂಚನೆ ನೀಡಲಾಗುವುದುʼʼ ಎಂದರು.
ಸಿಎಂ ಮಾತಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ “”ಮೊದಲು ಜಿಎಸ್ಟಿ ಕೊಡಬೇಕಂತೆ, ಆಮೇಲೆ ಕ್ಲೇಮ್ ಮಾಡಬೇಕಂತೆ. ಹಾಗಾದರೆ ಜಿಎಸ್ಟಿ ಏಕೆ ಹಾಕಬೇಕು? ಜಿಎಸ್ಟಿ ಬರುವ ಮುನ್ನ ರಾಜ್ಯಗಳು 14% ಬೆಳವಣಿಗೆ ಆಗುತ್ತಿದ್ದವು. ಈಗ 6% ಆಗಿದೆ. ಈಗ ಆಗಿರುವ 8% ನಷ್ಟವನ್ನು ಭರಿಸಿಕೊಡುವವರು ಯಾರುʼʼ ಎಂದು ತಿರುಗೇಟು ನೀಡಿದ್ದಾರೆ.
ದರ ಇಳಿಕೆ ಬಗ್ಗೆ ಸದ್ಯದಲ್ಲೆ ನಿರ್ಧಾರ
ಜಿಎಸ್ಟಿ ದರ ಇಳಿಕೆ ಮಾಡುವ ಕುರಿತು ಸದ್ಯದಲ್ಲೆ ತೀರ್ಮಾನ ಮಾಡಲಾಗುತ್ತದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ. ಸೋಮವಾರದಿಂದ ದರ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದರ ಏರಿಕೆ ಆಗಿದೆ. ದರ ಇಳಿಕೆ ಮಾಡುವ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸರ್ಕಾರದಿಂದ ಮಾಹಿತಿ ಬಂದ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ | GST rate hike| ಜುಲೈ 18ರಿಂದ ಎಲ್ಲ ಹೋಟೆಲ್ ರೂಮ್ ಬಾಡಿಗೆ ದುಬಾರಿ