ಮೈಸೂರು/ಮಂಡ್ಯ: ಹಳೆ ಮೈಸೂರು ಭಾಗದ ಜನರ ಜೀವನಾಡಿ ಕೃಷ್ಣರಾಜಸಾಗರ (ಕೆ.ಆರ್.ಎಸ್) ಹಾಗೂ ಕಬಿನಿ ಜಲಾಶಯ ಈ ಬಾರಿ ವಾಡಿಕೆಗಿಂತ ಮೊದಲೇ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪತ್ನಿ ಚನ್ನಮ್ಮ ಅವರು ಸಂಪ್ರದಾಯದಂತೆ ಬುಧವಾರ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿದರು.
ಮೊದಲಿಗೆ ಕಬಿನಿ ಜಲಾಶಯಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ದಂಪತಿ, ಅಭಿಜಿನ್ ಮುಹೂರ್ತದ ಕನ್ಯಾ ಲಗ್ನದಲ್ಲಿ ಕಪಿಲಾ ನದಿಗೆ ಪುಷ್ಪಾರ್ಚನೆ ಮಾಡಿ ಬಾಗಿನ ಸಮರ್ಪಿಸಿದರು. ಬಳಿಕ ಅಲ್ಲಿಂದ ಕೆಆರ್‌ಎಸ್ ಜಲಾಶಯಕ್ಕೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ವೃಶ್ಚಿಕ ಲಗ್ನದಲ್ಲಿ ಬಾಗಿನ ಸಲ್ಲಿಸಿದರು.
ಬಾಗಿನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಾದ್ಯಂತ ಉತ್ತಮ ಮಳೆಯಾಗಿ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಕಬಿನಿ, ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ್ದೇನೆ. ಆಷಾಢ ಮಾಸದಲ್ಲಿ ಡ್ಯಾಂಗಳು ತುಂಬಿರುವುದು ವಿಶೇಷವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದರು.
ಇದನ್ನೂ ಓದಿ | ಈ ಬಾರಿ ಸಾಂಪ್ರದಾಯಿಕ, ಅದ್ಧೂರಿ ದಸರಾ; ಸಿಎಂ ಬಸವರಾಜ ಬೊಮ್ಮಾಯಿ
ಕಬಿನಿ ಜಲಾಶಯದ ಉದ್ಯಾನವನ ನಿರ್ಮಾಣ ವಿಷಯ ಗೊಂದಲದಲ್ಲಿದೆ. ಆದಷ್ಟು ಬೇಗ ಕಬಿನಿ ಜಲಾಶಯ ಉದ್ಯಾನವನ ಕಾಮಗಾರಿಯನ್ನು ಆರಂಭಿಸಲಾಗುತ್ತದೆ. ನಂಜುಂಡಪ್ಪ ವರದಿಯಲ್ಲಿ ಎಚ್.ಡಿ. ಕೋಟೆ ತಾಲೂಕು ಹಿಂದುಳಿದ ತಾಲೂಕು ಎಂದು ಇದೆ. ಹೀಗಾಗಿ ತಾಲೂಕಿನಲ್ಲಿ ಶಾಲಾ ಕಟ್ಟಡ ಹಾಗೂ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಳೆಯಿಂದ ಹಾಳಾದ ರಸ್ತೆಗಳ ಅಭಿವೃದ್ಧಿಗೆ ಹಾಗೂ ಹಾನಿಗೊಂಡ ಮನೆಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದರು.
ಕಾವೇರಿ ಜಲಾನಯನ ಪ್ರದೇಶದ ನಾಲೆಗಳ ಅಭಿವೃದ್ಧಿಗೆ ಜಲ ಸಂಪನ್ಮೂಲ ಸಚಿವನಾಗಿದ್ದಾಗ ಸೂಚಿಸಿದ್ದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ 8,800 ಕಿ.ಮೀ. ನಾಲೆ ಇದ್ದು, 2,500 ಕಿ.ಮೀ. ನಾಲೆ ಅಭಿವೃದ್ಧಿ ಆಗಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ 102 ಕಿ.ಮೀ. ನಾಲೆ ಅಭಿವೃದ್ಧಿ ಮಾಡಿದ್ದೇವೆ ಎಂದರು.
ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರೆಸುವ ಜತೆಗೆ ಶೀಘ್ರ ಪುನರಾರಂಭ ಮಾಡುವ ಬಗ್ಗೆ ತೀರ್ಮಾನ ಪ್ರಕಟಿಸಿದರು. ಮುಂದಿನ ವರ್ಷದ ಒಳಗಾಗಿ ಕೆ.ಆರ್.ಎಸ್ ಜಲಾಶಯದ ಎಲ್ಲ 61 ಗೇಟ್‌ಗಳನ್ನು ಬದಲಿಸಲಾಗುವುದು. ಆಗ ಹಬ್ಬದೋಪಾದಿ ಕಾರ್ಯಕ್ರಮ ಅಚರಿಸೋಣವೆಂದು ಭರವಸೆ ನೀಡಿದರು.
ಇದನ್ನೂ ಓದಿ | ಕೇಂದ್ರ ಸರ್ಕಾರ ಜಿಎಸ್‌ಟಿ ನಷ್ಟವನ್ನು ಭರಿಸುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ