ಬೆಂಗಳೂರು: ಕರಾವಳಿ ಭಾಗದಲ್ಲಿ ನಡೆದಿರುವ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ವಿಶೇಷ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ.ನಗರದ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಸಂಬಂಧ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಕೇರಳ ಗಡಿ ಭಾಗದಲ್ಲಿ 55 ರಸ್ತೆಗಳನ್ನು ನಿಭಾಯಿಸುವುದು, ನಿರ್ಬಂಧ ಹೇರಿಕೆ ಸೇರಿದಂತೆ ಪ್ರಮುಖ ತೀರ್ಮಾನಗಳ ಬಗ್ಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ | Praveen Nettaru | ಸೊಲ್ಯುಷನ್ ನಿಮ್ಮ ಕೈಲೇ ಇದೆ ಸರ್: ಸಿಎಂ ಮುಂದೆ ಪ್ರವೀಣ್ ಪತ್ನಿ ಬೇಸರದ ನುಡಿ
ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ
ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೊಂದು ಕೊಲೆಯ ಮಾಹಿತಿ ಬಂದಿದೆ. ಮೂರು ಕೊಲೆಯ (ಮಸೂದ್, ಪ್ರವೀಣ್ ನೆಟ್ಟಾರು, ಫಾಸಿಲ್) ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿಯೊಬ್ಬ ನಾಗರಿಕನ ಜೀವವೂ ಸರ್ಕಾರಕ್ಕೆ ಮುಖ್ಯ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮೂರು ಕೊಲೆಗಳಾಗಿರುವುದು ಜನರಲ್ಲಿ ಆತಂಕವನ್ನು ಮೂಡಿಸಿರುವುದು ಸಹಜ. ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡಲಾಗಿದೆ. ರಾಜಕೀಯ ಪ್ರೇರಣೆ ಕೂಡ ಇದರ ಹಿಂದಿದೆ. ಇವೆಲ್ಲವುಗಳನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಸರ್ಕಾರದ ಕ್ರಮಗಳು ಜನರಿಗೆ ವೇದ್ಯವಾಗಲಿದೆ
ಮಸೂದ್ ಕೊಲೆಯ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಇನ್ನೆರಡು ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಅದರ ಹಿಂದೆ ದೊಡ್ಡ ಸಂಘಟನೆಗಳಿವೆ. ಇದು ಕೇವಲ ಕೊಲೆ ಎಂದು ಪರಿಗಣಿಸಲಾಗುತ್ತಿಲ್ಲ. ಇದೊಂದು ಯೋಜನಾಬದ್ಧ ದುಷ್ಕೃತ್ಯವಾಗಿದ್ದು, ಇದರ ಹಿಂದಿರುವ ಸಮಾಜಘಾತುಕ ಸಂಘಟನೆಗಳನ್ನು ಸದೆಬಡೆಯುವ ಮಹತ್ವದ ಕೆಲಸವನ್ನು ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕ್ರಮಗಳು ಜನರಿಗೆ ವೇದ್ಯವಾಗಲಿದೆ ಎಂದರು.
ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು NIAಗೆ ವಹಿಸಿದ ರಾಜ್ಯ ಸರ್ಕಾರ: ಸಿಎಂ ಬೊಮ್ಮಾಯಿ ಘೋಷಣೆ