ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಅತ್ಯಂತ ಗಂಭೀರ ವ್ಯಕ್ತಿತ್ವದವರು ಎನ್ನುವುದು ಸಾಮಾನ್ಯವಾಗಿ ಅವರು ರಾಜಕೀಯ ಹಾಗೂ ಆಡಳಿತಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ್ದನ್ನು ಕೇಳಿದಾಗ ಅನ್ನಿಸುತ್ತದೆ. ಆದರೆ ನಿಜವಾಗಿ ಬಸವರಾಜ ಬೊಮ್ಮಾಯಿ ಅವರ ಮಾತಿನ, ಅವರ ಓದಿನ ಆಳ-ಅಗಲ ತಿಳಿಯಬೇಕೆಂದರೆ ರಾಜಕೀಯೇತರ ಕಾರ್ಯಕ್ರಮಕ್ಕೆ ಹೋಗಬೇಕು.
ರಾಜಕೀಯ ಕಾರ್ಯಕ್ರಮಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇರುತ್ತಾರೆ. ಹೆಚ್ಚಿನ ಬಾರಿ ಅಲ್ಲಿ ಗಂಭೀರ ವಿಚಾರಗಳೇ ಚರ್ಚೆ ಆಗುತ್ತವೆ. ಎದುರಾಳಿ ಪಕ್ಷಗಳ ಮೇಲೆ ವಾಗ್ದಾಳಿ, ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವುದು ಅನಿವಾರ್ಯ. ಇಂತಹ ಕಾರ್ಯಕ್ರಮಗಳಲ್ಲಿ ಕೇಳಿ ಬರುವ ಮಾತುಗಳು ಹೀಗಿರುತ್ತವೆ: ʻಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ನಾನೊಂದು ತೀರ, ನೀನೊಂದು ತೀರವಾಗಿದ್ದಾರೆʼ, ʻಮೊದಲು ತಮ್ಮ ಪ್ಲೇಟ್‌ನಲ್ಲಿ ಏನು ಇದೆ ಎನ್ನುವುದನ್ನು ಕಾಂಗ್ರೆಸ್‌ನವರು ನೋಡಿಕೊಳ್ಳಬೇಕುʼ, ʻಕಾಂಗ್ರೆಸ್ ನವರು ಕಾಯಂ ಆಗಿ ಪ್ರತಿಭಟನೆ ಮಾಡುವಂಥ ಪರಿಸ್ಥಿತಿ ಇದೆʼ…
ಅದೇ ರೀತಿ, ಆಡಳಿತಾತ್ಮಕ ಸಭೆಗಳಲ್ಲಿ ಬೊಮ್ಮಾಯಿ ಭಾಗವಹಿಸುತ್ತಾರೆ. ಅಲ್ಲಿ ಅಧಿಕಾರಿಗಳನ್ನು ಚುರುಕುಗೊಳಿಸುವುದೇ ಧ್ಯೇಯ. ಸರಿಯಾಗಿ ಕೆಲಸ ಮಾಡಲು ಏಕೆ ಆಗುವುದಿಲ್ಲ? ಇನ್ನೊಂದು ವಾರದೊಳಗೆ ವರದಿ ನೀಡಬೇಕು… ಈ ರೀತಿ ಸೂಚನೆ ನೀಡುವಲ್ಲೇ ಸಭೆಗಳು ಮುಕ್ತಾಯವಾಗಿಬಿಡುತ್ತವೆ.
ಆದರೆ ರಾಜಕೀಯ ಹಾಗೂ ಆಡಳಿತಾತ್ಮಕವಲ್ಲದ ಸಭೆಗಳಲ್ಲಿ ಬೊಮ್ಮಾಯಿ ಅವರೊಳಗಿನ ತತ್ವಜ್ಞಾನಿ, ಆರ್ಥಿಕ ತಜ್ಞ, ಇಂಜಿನಿಯರ್… ಎಲ್ಲರೂ ಹೊರಬರುತ್ತಾರೆ.
ಬೊಮ್ಮಾಯಿ ಅವರು ನವೋದ್ಯಮ ಕಾರ್ಯಕ್ರಮದಲ್ಲಿಯೂ ಮಾನವ ಜೀವವಿಕಾಸದ ಬಗ್ಗೆ ಮಾತನಾಡಬಲ್ಲರು. ನವೋದ್ಯಮ ಹಾಗೂ ತತ್ವಜ್ಞಾನವನ್ನು ಒಟ್ಟಿಗೆ ಸೇರಿಸಬಲ್ಲರು. “ನವೋದ್ಯಮ ಪ್ರಪಂಚದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಯಾವುದೇ ರಂಗದಲ್ಲಿ ಯೂನಿಕಾರ್ನ್‍ಗಳು ಬರಬಹುದಾಗಿದೆ. ಅವಶ್ಯಕತೆಯೇ ಆವಿಷ್ಕಾರದ ಜೀವಾಳ. ಆವಿಷ್ಕಾರದ ಹಸಿವು ನಮ್ಮಲ್ಲಿರಬೇಕು. ಮನುಷ್ಯ ಬೆಳೆದಂತೆ ಅಗತ್ಯತೆಗಳು ಬೆಳೆದಿದ್ದು, ನಾಗರಿಕತೆಯೂ ಬೆಳೆದಿದೆ. ಆಧುನಿಕತೆಯ ನಾಗರಿಕತೆಗೆ ಒಗ್ಗಿಕೊಂಡಿರುವ ಜನರು ಡಿಜಿಟಲೀಕರಣವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುತ್ತಿದ್ದಾರೆ. ನಮ್ಮಲ್ಲೇನಿದೆ ಎಂಬುದು ನಾಗರಿಕತೆ , ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕೃತಿ. ಮಾನವೀಯ ಸ್ಪಂದನೆ ಹಾಗೂ ಸಾಮಾಜಿಕ ಕಳಕಳಿಯಂತಹ ಮೌಲ್ಯಗಳನ್ನು ಸ್ಟಾರ್ಟ್‍ಅಪ್‍ಗಳು ಹೊಂದಿರಬೇಕು”.
ಪರಿಸರ ಸಂರಕ್ಷಣೆ ಮಾಡಬೇಕು ಎಂಬ ಸಾಮಾನ್ಯ ಕ್ಲೀಷೆಯಿಂದ ಮೇಲೆದ್ದು ಬೊಮ್ಮಾಯಿ ಮಾತನಾಡಬಲ್ಲರು. “ಮಾನವನ ಜೀವನಶೈಲಿಯಿಂದ ಪರಿಸರ ಅಸಮತೋಲನವಾಗುತ್ತಿದೆ. ಭೂಮಿಯನ್ನು ಉಳಿಸದಿದ್ದರೆ, ಮಾನವಕುಲದ ಉಳಿಯುವಿಕೆಯೇ ಅಸಾಧ್ಯ. ಕೇವಲ ಹವಾಮಾನ ಬದಲಾವಣೆಯಿಂದ ವಿಕೋಪಗಳು ಆಗುತ್ತಿಲ್ಲ. ಅದು ನಮ್ಮ ಜೀವನಶೈಲಿಯಿಂದಲೂ ಹಾಳಾಗುತ್ತಿದೆ. ಮಾನವ ನಿರ್ಮಿತ ವಿಕೋಪಗಳನ್ನು ತಡೆಗಟ್ಟಲು ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ವಿಕೋಪಗಳು ಘಟಿಸುವುದನ್ನು ಸನ್ನದ್ಧತೆಯಿಂದ ತಡೆಯಬಹುದು” ಎನ್ನುತ್ತಾರೆ.
ಮೂಲತಃ ರಾಜಕಾರಣಿಯಾಗಿದ್ದರೂ ಮಾಧ್ಯಮ ಕ್ಷೇತ್ರವನ್ನೂ ಅತ್ಯಂತ ಹತ್ತಿರದಿಂದ ಕಂಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾಧ್ಯಮಗಳ ಕುರಿತು ಹೊಸ ಹೊಳಹನ್ನು ನೀಡಬಲ್ಲರು. ಜುಲೈ 23ರಂದು ʻವಿಸ್ತಾರ ನ್ಯೂಸ್ʼ ಲೋಗೊ ಹಾಗೂ ವೆಬ್‌ಸೈಟ್ ಅನಾವರಣದಲ್ಲಿ ಮಾತನಾಡಿದ ಬೊಮ್ಮಾಯಿ, “ಮಾಧ್ಯಮ ಉದ್ಯಮವಾಗಿ ಬೆಳೆಯುತ್ತಿದ್ದರೆ, ಪತ್ರಿಕೋದ್ಯಮ ಜನಪರ ದನಿಯಾಗಿ ಬೆಳೆಯುತ್ತದೆ. ವಾಹಿನಿಗಳು ಸುದ್ದಿಗಳನ್ನು ವಿಶ್ಲೇಷಣೆ ಮಾಡುತ್ತವೆ. ಆದರೆ ಮಾಧ್ಯಮಗಳನ್ನು ಜನರು ವಿಶ್ಲೇಷಣೆ ಮಾಡುತ್ತಾರೆ. ಆದ್ದರಿಂದ ಸುದ್ದಿಗಳು ಪಾರದರ್ಶಕವಾಗಿ, ಸತ್ಯನಿಷ್ಟುರವಾಗಿ ಇರಬೇಕಾಗುತ್ತದೆ” ಎಂದಿದ್ದರು.
ಇದನ್ನೂ ಓದಿ | ವಿಸ್ತಾರ TOP 10 NEWS | ನೆಟ್ಟಾರುವಿನಲ್ಲಿ ಹರಿದ ನೆತ್ತರು, ಸರ್ಕಾರದ ವಿರುದ್ಧ ಆಕ್ರೋಶ ಇನ್ನಿತರ ಪ್ರಮುಖ ಸುದ್ದಿಗಳಿವು
ವಿದ್ಯಾರ್ಥಿಗಳೇನಾದರೂ ಕಾರ್ಯಕ್ರಮದಲ್ಲಿದ್ದರೆ ಬಸವರಾಜ ಬೊಮ್ಮಾಯಿ ಅವರು ಮೋಟಿವೇಷನಲ್ ಸ್ಪೀಕರ್ ಕೂಡ ಆಗಬಲ್ಲರು. “ಯಶಸ್ಸಿಗಿಂತ ಸಾಧನೆ ಮುಖ್ಯ. ನಿಮ್ಮ ಯಶಸ್ಸು ಇನ್ನಷ್ಟು ವ್ಯಕ್ತಿಗಳ ಸಾಧನೆಗೆ ಕಾರಣವಾಗುವುದು ನಿಜವಾದ ಸಾಧನೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇವತ್ತಿನ ಕ್ಷಣವನ್ನು ಸಾರ್ಥಕತೆಯಿಂದ ಬದುಕಿದರೆ ನಾವು ಇಲ್ಲದಿರುವಾಗಲೂ ಜನ ನಮ್ಮನ್ನು ನೆನೆಸುತ್ತಾರೆ” ಎಂದು ಸ್ಫೂರ್ತಿ ತುಂಬುತ್ತಾರೆ.
ಪುಸ್ತಕಗಳನ್ನು ಓದುವ ಅಭ್ಯಾಸ ಹೊಂದಿರುವ ಬೊಮ್ಮಾಯಿ, ವ್ಯಾಪಾರ ಹಾಗೂ ಅಧ್ಯಾತ್ಮವನ್ನು ಒಟ್ಟಿಗೆ ನೋಡಬಲ್ಲರು. ಈ ಬಗ್ಗೆ ಅನೇಕ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ. “ಅಧ್ಯಾತ್ಮ ಹಾಗೂ ವ್ಯಾಪಾರ ಎನ್ನುವುದನ್ನು ಪ್ರತ್ಯೇಕವಾಗಿ ನೋಡಲಾಗುತ್ತದೆ. ಆದರೆ ಇವೆರಡನ್ನೂ ಒಟ್ಟಿಗೆ ನೋಡುವುದು ಉತ್ತಮ. ವ್ಯಾಪಾರ ಎಂದರೆ ಲಾಭ. ಅಧ್ಯಾತ್ಮ ಎಂದರೆ ನೈತಿಕತೆ. ವ್ಯಾಪಾರದಲ್ಲಿ ಅಧ್ಯಾತ್ಮವನ್ನು ನೋಡಬೇಕು. ಅಂದರೆ ನೈತಿಕತೆಯನ್ನು ಉಳಿಸಿಕೊಂಡು ವ್ಯಾಪಾರ ಮಾಡಬೇಕು. ಅಧ್ಯಾತ್ಮದಲ್ಲಿ ವ್ಯಾಪಾರವನ್ನು ಬೆಸೆಯಬೇಕು. ಅಂದರೆ ಅಧ್ಯಾತ್ಮವನ್ನು ಆಚರಿಸುವುದರಿಂದ ವೈಯಕ್ತಿಕವಾಗಿ, ಸಮಾಜಕ್ಕೆ ಏನು ಲಾಭವಾಗುತ್ತದೆ ಎಂದು ಮನಗಾಣಬೇಕು. ಆಗ ಇಡೀ ಸಮಾಜ ಸುಂದರವಾಗುತ್ತದೆ” ಎಂದು ಎರಡು ವಿಭಿನ್ನ ಧ್ರುವಗಳನ್ನು ಒಟ್ಟಿಗೆ ಬೆಸೆಯಬಲ್ಲರು ಸಿಎಂ ಬಸವರಾಜ ಬೊಮ್ಮಾಯಿ.
ತಮ್ಮ ಇಂಜಿನಿಯರಿಂಗ್ ಹಿನ್ನೆಲೆಯನ್ನು ಆಗಿಂದಾಗ ನೆನಪಿಸಿಕೊಳ್ಳುವಂತೆ ಅನೇಕ ವಿಚಾರಗಳನ್ನೂ ಬೊಮ್ಮಾಯಿ ಉದಾಹರಿಸುತ್ತಾರೆ. ಅಣು, ವಿಘಟನೆಯಂತಹ ಮೂಲ ವಿಜ್ಞಾನದ ವಿಚಾರಗಳನ್ನೂ ಸಾಮಾನ್ಯ ಕಾರ್ಯಕ್ರಮಗಳಲ್ಲಿ ಲೀಲಾಜಾಲವಾಗಿ ಸಂವಹನ ಮಾಡಬಲ್ಲರು. ತಾವು ಕೇವಲ ರಾಜಕಾರಣಿಯಲ್ಲ, ಒಬ್ಬ ಓದುಗ, ಒಬ್ಬ ನೋಡುಗ, ಬಿಟ್ವೀನ್ ದಿ ಲೈನ್ ಒಳನೋಟ ನೀಡಲು ಸಮರ್ಥ ಎನ್ನುವುದನ್ನು ರಾಜಕೀಯೇತರ ಕಾರ್ಯಕ್ರಮಗಳಲ್ಲಿ ತೋರುತ್ತಲೇ ಇರುತ್ತಾರೆ.
ಇದನ್ನೂ ಓದಿ | Praveen Nettaru | ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲು, ಪಕ್ಷದ ಜನೋತ್ಸವ ಕಾರ್ಯಕ್ರಮ ರದ್ದು