ಬೆಂಗಳೂರು: ರಾಜ್ಯದೆಲ್ಲೆಡೆ ಬುಧವಾರ ದೀಪಾವಳಿ ಹಬ್ಬದ ಭಾಗವಾಗಿ ಗೋಪೂಜೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಸರ್ಕಾರದ ವತಿಯಿಂದಲೇ ಪೂಜೆ ನಡೆಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನಕಪುರ ರಸ್ತೆಯ ಇಂಟರ್ ನ್ಯಾಶನಲ್ ಆರ್ಟ್ ಆಫ್ ಲಿವಿಂಗ್ ಸೆಂಟರ್ ನಲ್ಲಿ ಏರ್ಪಡಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ದೀಪಾವಳಿ ಹಬ್ಬಕ್ಕೆ ಚಾಲನೆ ನೀಡಿದ ಅವರು ಗೋಪೂಜೆಯನ್ನೂ ನೆರವೇರಿಸಿದರು. ಗೋಪೂಜೆ ನೆರವೇರಿಸಿದ ಅವರು ಗೋಗ್ರಾಸವನ್ನೂ ನೀಡಿದರು. ಹಸಿರು ಹುಲ್ಲನ್ನೂ ತಿನ್ನಿಸಿ ಪ್ರೀತಿ ತೋರಿದರು. ಗೋವುಗಳ ಹಣೆಗೆ ಮುತ್ತಿಟ್ಟರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕನ್ನಡದ ಎಲಿಮೆಂಟ್ ಆ್ಯಪ್ ಅನ್ನು ಉದ್ಘಾಟಿಸಿದರು.
ಕೊಪ್ಪಳದಲ್ಲಿ: ಸರ್ಕಾರದ ಆದೇಶದಂತೆ ಕೊಪ್ಪಳ ಜಿಲ್ಲೆಯ ದೇವಸ್ಥಾನಗಳಲ್ಲಿ ಗೋಪೂಜೆ ನಡೆಯಿತು. ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆವರಣಕ್ಕೆ ಗೋವುಗಳನ್ನು ತಂದು ಅವುಗಳಿಗೆ ಆಹಾರ ಧಾನ್ಯ ತಿನ್ನಿಸಿ ಪೂಜೆ ಮಾಡಲಾಯಿತು.