ರಮೇಶ ದೊಡ್ಡಪುರ ಬೆಂಗಳೂರು
ಐವತ್ತು ವರ್ಷದ ರಾಜಕೀಯ ಅನುಭವ ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಸ್ವಾತಂತ್ರೋತ್ಸವ ಭಾಷಣವನ್ನೂ ತಮ್ಮ ರಾಜಕೀಯ ಬುನಾದಿಯನ್ನು ಗಟ್ಟಿಗೊಳಿಸಿಕೊಳ್ಳಲು, ರಾಜಕೀಯ ಸಂದೇಶಗಳನ್ನು ನೀಡಲು ಸಮರ್ಥವಾಗಿ ಬಳಸಿಕೊಂಡರು.
ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ ನಂತರ, ನೆರೆದಿದ್ದ ಸರ್ಕಾರಿ ಅಧಿಕಾರಿಗಳು, ಪೊಲೀಸರು, ಸಾರ್ವಜನಿಕರು ಹಾಗೂ ಮಕ್ಕಳನ್ನು ಉದ್ದೇಶಿಸಿ ಸುಮಾರು 45 ನಿಮಿಷ ಭಾಷಣ ಮಾಡಿದ್ದರು. ಭಾಷಣ ಆರಂಭಕ್ಕೂ ಮುನ್ನ ನೀಡಿದ್ದ 28 ಪುಟಗಳ ಮುದ್ರಿತ ಭಾಷಣದ ಕೇವಲ ಶೇ.10 ಮಾತ್ರ ಬೊಮ್ಮಾಯಿ ಭಾಷಣದಲ್ಲಿ ಪ್ರಸ್ತಾಪವಾಯಿತು. ಮುದ್ರಿತ ಭಾಷಣವನ್ನು ಪಕ್ಕಕ್ಕಿರಿಸಿ ತಮ್ಮದೇ ಶೈಲಿಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.
ನೆಹರೂ ಜಾಹಿರಾತು ವಿವಾದ
ಇತ್ತೀಚೆಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವ ನಿಮಿತ್ತ ನೀಡಿದ್ದ ಜಾಹೀರಾತಿನಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಕೈಬಿಬಿಟ್ಟಿದ್ದರ ಕುರಿತು ಪ್ರಸ್ತಾಪ ಮಾಡಿದರು.
ದೇಶದ ಮೊದಲ ಪ್ರಧಾನಿ ನೆಹರೂ, ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರನ್ನು ಪ್ರಸ್ತಾಪಿಸಿದರು. ದೇಶದ ಅಭಿವೃದ್ಧಿಗೆ ಎಲ್ಲರ ಕೊಡುಗೆ ಇದೆ, ಅದನ್ನು ಮರೆಯುವ ಮಾತೇ ಇಲ್ಲ ಎಂದರು. ಆದರೆ, ದೇಶ ವಿಭಜನೆಯ ನಂತರ ಹಸಿವು, ತುಳಿತದಿಂದ ಪ್ರಾಣಬಿಟ್ಟಿದ್ದಾರೆ. ಇದು ಅತ್ಯಂತ ದುಃಖಕರ ಸನ್ನಿವೇಷ ಎನ್ನುತ್ತ, ನೆಹರೂ ಅವರಿಂದಾಗಿ ದೇಶ ವಿಭಜನೆ ಆಯಿತು ಎನ್ನುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ನೆಹರೂ ಸೇರಿ ಎಲ್ಲ ಪ್ರಧಾನಿಗಳ ನೆನಪನ್ನೂ ಸ್ಮರಿಸಲು ಪ್ರಧಾನಮಂತ್ರಿಯವರು ಮ್ಯೂಸಿಯಂ ಮಾಡಿದ್ದಾರೆ.
ಇಲ್ಲಿ ಯಾರನ್ನೂ ಮರೆಯುವ ಪ್ರಶ್ನೆ ಇಲ್ಲ. ಪ್ರಧಾನಿಗಳು ಮಾತ್ರವಲ್ಲ, ಅನೇಕ ಮಹನೀಯರು ಕೊಡುಗೆ ಕೊಟ್ಟಿದ್ದಾರೆ ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ಸ್ವಾತಂತ್ರ್ಯ ದಿನದ ಜತೆಗೆ ಜನೋತ್ಸವ ಆಚರಣೆ ಆಗುತ್ತಿರಲಿಲ್ಲ. ಇಂದು ಅಂಬೇಡ್ಕರ್ ಅವರನ್ನು ಮರೆಯಲಾಗುತ್ತಿದೆ, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಮರೆಯಲಾಗುತ್ತಿದೆ, ಅಬ್ದುಲ್ ಗಫೂರ್ ಖಾನ್ ಅವರನ್ನು ಮರೆಯಲಾಗುತ್ತಿದೆ. ಅವರನ್ನು ನಾವು ಮರೆಯಬಾರದು ಎನ್ನುತ್ತ, ನೆಹರೂ ಅವರು ಮಾತ್ರವಲ್ಲದೆ, ಸ್ಮರಿಸಬೇಕಾದ ಇನ್ನೂ ಅನೇಕ ಮಹನೀಯರಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲು ಕಿತ್ತೂರಿನ ಹೋರಾಟವನ್ನು ನೆನಪಿಸಿದ ಬೊಮ್ಮಾಯಿ, ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಕರೆಯುತ್ತೇವೆ, ಅದಕ್ಕೂ ಮುನ್ನ 1920ರಲ್ಲೇ ನಮ್ಮ ಕಿತ್ತೂರು ಚೆನ್ನಮ್ಮ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಒಂದು ಸಣ್ಣ ಸಂಸ್ಥಾನ ಸಹ ಬೃಹತ್ ಬ್ರಿಟಿಷ್ ಸೈನ್ಯವನ್ನು ಸೋಲಿಸಬಹುದು ಎಂದು ತೋರಿಸಿಕೊಟ್ಟರು ಎಂದರು. ನಂತರ ನೇತಾಜಿ ಸುಭಾಷ್‌ಚಂದ್ರ ಬೋಸ್‌ರನ್ನು ನೆನೆದರು. ಸುಭಾಷ್‌ಚಂದ್ರ ಬೋಸ್, ನಾಡಿನ ಹೆಮ್ಮೆಯ ಪುತ್ರ. ಇದೆಲ್ಲದರ ನಡುವೆ, ಅಹಿಂಸಾ ಮಾರ್ಗದ ಮೂಲಕವೂ ಸ್ವಾತಂತ್ರ್ಯ ಗಳಿಸಬಹುದು ಎಂದು ತೋರಿಸಿಕೊಟ್ಟವರು ಮಹಾತ್ಮಾ ಗಾಂಧೀಜಿ. ಅವರ ನೇತ್ರತ್ವದಲ್ಲಿ ರೈತರು, ಕೂಲಿಕಾರ್ಮಿಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಎಂದರು.
ಜಲಿಯನ್‌ವಾಲಾ ಬಾಗ್, ಭಗತ್ ಸಿಂಗ್, ಚಂದ್ರಶೇಖರ ಆಜಾದರ ಜತೆಗೆ ಲೋಕಮಾನ್ಯ ತಿಲಕ್, ವೀರ ಸಾವರ್ಕರ್, ಝಾನ್ಸಿ ರಾಣಿಯರ ಹೋರಾಟವನ್ನು ಸಿಎಂ ಬಸವರಾಜ ಬೊಮ್ಮಾಯಿ ನೆನೆದರು. ಆದರೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಅಪ್ಪಿತಪ್ಪಿಯೂ ನೆಹರೂ ಹೆಸರನ್ನು ಹೇಳಲಿಲ್ಲ.
ಸಾವರ್ಕರ್ ಸ್ಮರಣೆ
ಎಲ್ಲಕ್ಕಿಂತಲೂ ಮುಖ್ಯವಾಗಿ, ಇತ್ತೀಚೆಗೆ ಶಿವಮೊಗ್ಗದಲ್ಲಿ ವಿವಾದವಾಗಿದ್ದ ಸಾವರ್ಕರ್ ಹೆಸರನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಮೂಲಕ, ವೀರ ಸಾವರ್ಕರರನ್ನು ಸ್ಮರಿಸುವುದರಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶ ನೀಡಿದರು, ನಿರೀಕ್ಷೆಯಂತೆಯೇ ಟಿಪ್ಪು ಸುಲ್ತಾನ್ ಹೆಸರನ್ನು ಭಾಷಣದ ಯಾವುದೇ ಭಾಗದಲ್ಲಿ ಪ್ರಸ್ತಾಪ ಮಾಡಲಿಲ್ಲ. ಈ ಮೂಲಕ, ಹಿಂದುತ್ವ ವಿಚಾರಗಳಿಗೆ ಬೊಮ್ಮಾಯಿ ಒತ್ತು ನೀಡುವುದಿಲ್ಲ ಎಂದು ಪಕ್ಷದಲ್ಲಿರುವ ಸಣ್ಣ ಅಪಸ್ವರವನ್ನು ತಣ್ಣಗಾಗಿಸಲು ಪ್ರಯತ್ನ ಮಾಡಿದರು.
ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ
ರಾಜಕೀಯವಾಗಿಯೂ ಚಾಣಾಕ್ಷತನ ಮೆರೆದ ಬೊಮ್ಮಾಯಿ, ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸಲು ಮರೆಯಲಿಲ್ಲ. ಪ್ರಧಾನಿಯವರ ಕನಸಾದ ಐದು ಟ್ರಿಲಿಯನ್ ಆರ್ಥಿಕತೆಗೆ ಕರ್ನಾಟಕ ಒಂದು ಟ್ರಿಲಿಯನ್ ಕೊಡುಗೆ ನೀಡಲಿದೆ ಎಂದರು, ಪ್ರಧಾನಿಯವರು ಕರೆ ನೀಡಿರುವ ಅಮೃತ ಕಾಲವನ್ನು ನೆನೆದರು, ತಮ್ಮ ಲಿಖಿತ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ನೆನೆಯುವ ಮೂಲಕವೇ ಮುಕ್ತಾಯಗೊಳಿಸಿದರು.
ವಿಶೇಷವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸಿ, ಅವರ ನೇತೃತ್ವದಲ್ಲಿ ಕೋವಿಡ್ ಸವಾಲನ್ನು ಸಮರ್ಥವಾಗಿ ಎದುರಿಸಿದೆವು ಎಂದರು. ಈ ಮೂಲಕ, ತಮ್ಮ ಸರ್ಕಾರ ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ, ಯಡಿಯೂರಪ್ಪ ಈಗಲೂ ಚಾಲ್ತಿಯಲ್ಲಿರುವ ನಾಣ್ಯ ಎಂದು ಸೂಚ್ಯವಾಗಿ ತಿಳಿಸಿದರು.
ತಮ್ಮ ಸರ್ಕಾರ ಸುಸೂತ್ರವಾಗಿ ನಡೆಯಬೇಕೆಂದರೆ ಕೇಂದ್ರದಲ್ಲಿ ಮೋದಿ ಬಲ, ರಾಜ್ಯದಲ್ಲಿ ಯಡಿಯೂರಪ್ಪ ಬಲ ಅವಶ್ಯಕ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡೇ ಭಾಷಣವನ್ನು ರೂಪಿಸಿದಂತಿತ್ತು. ಒಟ್ಟಿನಲ್ಲಿ, ಅಮೃತ ಸ್ವಾತಂತ್ರ್ಯ ದಿನದ ಭಾಷಣವನ್ನು, ತಮ್ಮ ಸರ್ಕಾರದ ಹಾದಿಯನ್ನು ಸುಗಮಗೊಳಿಸಲು, ರಾಜಕೀಯ ವಿರೋಧಿಗಳಿಗೆ ಸಂದೇಶ ನೀಡಲು ಯಶಸ್ವಿಯಾದರು.
ಇದನ್ನೂ ಓದಿ | Independence day | ನಾನು ಆರೆಸ್ಸೆಸ್ ಕೈಗೊಂಬೆ ಅಲ್ಲ, ಅದರ ದೇಶಭಕ್ತಿಗೆ ತಲೆಬಾಗಿದ್ದು ನಿಜ ಅಂದ್ರು ಬೊಮ್ಮಾಯಿ