ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ ನಿಷೇಧಿಸಿ ಶುಕ್ರವಾರ ಸಂಜೆ ಹೊರಡಿಸಿದ ಆದೇಶದ ಕುರಿತು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ತಿಳಿದಿರಲಿಲ್ಲ. ಈ ಮಾತನ್ನು ಸ್ವತಃ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ ನಿಷೇಧಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಸಂಜೆ ಆದೇಶಿಸಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಸಾಮಾಜಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಜೆಡಿಎಸ್, ಕಾಂಗ್ರೆಸ್ ಹಾಗೂ ಇನ್ನಿತರೆ ರಾಜಕೀಯ ಪಕ್ಷಗಳೂ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದವು. ಇದೆಲ್ಲದರಿಂದ ಒತ್ತಡಕ್ಕೊಳಗಾದ ಸರ್ಕಾರ, ತಡರಾತ್ರಿ ಆದೇಶ ಹೊರಡಿಸಿ, ಫೋಟೊ, ವಿಡಿಯೊ ನಿಷೇಧ ಆದೇಶವನ್ನು ರದ್ದುಪಡಿಸಿತು.
ಇದನ್ನೂ ಓದಿ | ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ, ಫೋಟೊ ನಿಷೇಧದ ವಿವಾದಾತ್ಮಕ ಆದೇಶ ವಾಪಸ್
ಆದೇಶ ಮಾಡಿದ್ದು ಗೊತ್ತಿರಲಿಲ್ಲ
ಆದೇಶ ಹೊರಡಿಸಿದ್ದು, ರಾತ್ರೋರಾತ್ರಿ ಹಿಂಪಡೆದಿದ್ದರ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಬೆಳಗ್ಗೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಕೆಲ ಹೆಣ್ಣುಮಕ್ಕಳ ಫೋಟೊ ತೆಗೆದು ತೊಂದರೆ ಆಗುತ್ತಿತ್ತು. ಈ ಕುರಿತು ಅನೇಕ ದಿನಗಳಿಂದಲೂ ಸರ್ಕಾರಿ ನೌಕರರು ಮನವಿ ಮಾಡುತ್ತಿದ್ದರು. ಅವರು ಹೇಳುವುದರಲ್ಲೂ ಅರ್ಥ ಇದೆ. ಆದರೆ ನಿಷೇಧದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಪ್ರತಿಪಕ್ಷಗಳು ಹೇಳುವಂತೆ ಇಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ. ಯಾವುದೇ ನಿರ್ಬಂಧ ಬೇಡ ಎಂದು ಹೇಳಲಾಗಿದೆ, ಈ ಹಿಂದಿನಂತೆಯೇ ನಿಯಮ ಇರಲಿ ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳಿಗೆ ಸಿಎಂ ಕ್ಲಾಸ್
ಶುಕ್ರವಾರ ದಿನಪೂರ್ತಿ ಬಿಜೆಪಿ ಚಿಂತನ ಸಭೆ ಹಾಗೂ ಮಳೆ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲೆ ಇದ್ದದ್ದರಿಂದ ಇತ್ತ ವಿಧಾನಸೌಧದಲ್ಲಿ ಅಧಿಕಾರಿಗಳು ಆದೇಶ ಮಾಡಿದ್ದು ಸಿಎಂ ಗಮನಕ್ಕೆ ಬಂದಿಲ್ಲ. ಆದೇಶದ ಕುರಿತು ವಿವಾದ ಭುಗಿಲೇಳುತ್ತಿದ್ದಂತೆಯೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೆ ವಿಧಾನಸೌಧಕ್ಕೆ ತೆರಳಿವಂತೆ ತಿಳಿಸಿ, ಆದೇಶವನ್ನು ಹೊರಡಿಸಲು ಸೂಚಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ಹೇಳಿವೆ.
ಇದನ್ನೂ ಓದಿ | ಸರ್ಕಾರಿ ನೌಕರರ ʼಕರ್ನಾಟಕ ಆರೋಗ್ಯ ಸಂಜೀವಿನಿʼ ಜಾರಿಗೆ ಪ್ರತ್ಯೇಕ ಸೆಲ್