ಬೆಂಗಳೂರು: ಕೋಮು ಸಂಘರ್ಷವನ್ನು ತಡೆಗಟ್ಟಲು ಅಗತ್ಯಬಿದ್ದರೆ ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮುನ್ಸೂಚನೆ ನೀಡಿದ್ದಾರೆ. ಸುಳ್ಯದ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಂತರ ಭುಗಿಲೆದ್ದ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಸರ್ಕಾರದ ವರ್ಷಾಚರಣೆಯನ್ನು ರದ್ದುಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಬೆಳಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬೊಮ್ಮಾಯಿ ಮಾತನಾಡಿದರು.
ಕರ್ನಾಟಕದ ಕೆಲವು ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಚರ್ಚೆ ಮಾಡುತ್ತಿದ್ದೇವೆ. ಕೋಮು ಸಂಘರ್ಷ ಕೆಡಿಸುವ ಕೆಲಸ ಇಡೀ ದೇಶದಲ್ಲಿ ಆಗುತ್ತಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳದ ಜತೆಗೆ ಕರ್ನಾಟಕದಲ್ಲೂ ನಡೆಯುತ್ತಿವೆ. ಕರ್ನಾಟಕದಲ್ಲಿದ್ದು ಸ್ಲೀಪರ್ ಸೆಲ್ ಆಗಿ ಕೆಲಸ ಮಾಡುತ್ತಿರುವವರನ್ನು ತಿಹಾರ ಜೈಲಿಗೆ ಕಳಿಸುವ ಕೆಲಸವನ್ನು ಮಾಡಿದ್ದೇವೆ. ನಮ್ಮ ಪೋಲಿಸರು ದಕ್ಷತೆಯಿಂದ ಕೆಲಸ ಮಾಡಿದ್ದಾರೆ.
ಸುಳ್ಯದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈಗಾಗಲೆ ೫ ಟೀಂ ಮಾಡಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಈಗಾಗಲೇ ಕೇರಳಕ್ಕೂ ಟೀಂ ಕಳಿಸಿಕೊಟ್ಟಿದ್ದೇವೆ. ನ್ಯಾಯ ಕೊಡುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಸಮಾಜದಲ್ಲಿ ಕೋಮು ಸಂಘರ್ಷ ಕದಡುವ ವಿಚಾರದಲ್ಲಿ ರಾಜಿ ಇಲ್ಲ. ಅದರಲ್ಲೂ ಸಂಘಟಿತ ಕ್ರೈಂ ವಿರುದ್ದ ಕಠಿಣ ಕ್ರಮ ತೆಗೆದಕೊಳ್ಳುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ಅಗತ್ಯ ಬಿದ್ದರೆ ಕರ್ನಾಟಕದಲ್ಲೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಕೈಗೊಂಡ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಹಿಂಜರಿಕೆ ಇಲ್ಲದೆ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ | By election results: ಅಖಿಲೇಶ್ ಯಾದವ್ ಅತಿ ಆತ್ಮವಿಶ್ವಾಸವನ್ನು ಕುಟ್ಟಿ ಪುಡಿ ಮಾಡಿದ ಯೋಗಿ ಬುಲ್ಡೋಜರ್!