ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಸ್ಥಾಪನೆಯಾದಾಗ ಆರಂಭಿಸಿದ್ದ ಮೊಟ್ಟಮೊದಲ ಯೋಜನೆಯಾದ ರೈತ ವಿದ್ಯಾನಿಧಿಯನ್ನು ರಾಜ್ಯದ ನೇಕಾರರು, ಟ್ಯಾಕ್ಸಿ ಚಾಲಕರು, ಮೀನುಗಾರರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ. ಸುಳ್ಯದ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಂತರ ಭುಗಿಲೆದ್ದ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಸರ್ಕಾರದ ವರ್ಷಾಚರಣೆಯನ್ನು ರದ್ದುಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸುದ್ದಿಗೋಷ್ಠಿಯ ಪ್ರಾರಂಭದಲ್ಲೆ, ತಮ್ಮ ಸರ್ಕಾರ ರೈತ, ಮಹಿಳೆ, ಬಡವರ ಪರ ಎಂಬುದನ್ನು ಬೊಮ್ಮಾಯಿ ಸ್ಪಷ್ಟಪಡಿಸಿದರು. ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಹಣ ರವಾನೆ ಆಗಿದೆ. ಪ್ರತಿ ತಿಂಗಳು 15-20 ಸಾವಿರ ವಿದ್ಯಾರ್ಥಿಗಳಿಗೆ ರವಾನೆ ಆಗುತ್ತಿದೆ. ಸಂಧ್ಯಾಸುರಕ್ಷಾ, ವಿಧವಾ ಮಾಸಾಶನ ಸೇರಿ ಅನೇಕ ಯೋಜನೆಗಳ ಹಣವನ್ನು ಹೆಚ್ಚಳ ಮಾಡಲಾಗಿದೆ. ಕೆಳಸ್ತರದ ಜನರಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ ಎಂದರು.
ರೈತ ವಿದ್ಯಾನಿಧಿ ಯೋಜನೆಯನ್ನು ನೇಕಾರರ ಮಕ್ಕಳಿಗೆ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ, ಮೀನುಗಾರರ ಮಕ್ಕಳಿಗೆ ವಿಸ್ತರಣೆ ಮಾಡಲಾಗುತ್ತದೆ. 11-12 ಸಾವಿರ ನೇಕಾರರ ಮಕ್ಕಳಿಗೆ, 50 ಸಾವಿರ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಇದರಿಂದ ಲಾಭವಾಗುತ್ತದೆ. ಈ ಕುರಿತು ಈಗಾಗಲೆ ಆದೇಶಗಳನ್ನೂ ಹೊರಡಿಸಲಾಗಿದೆ ಎಂದು ತಿಳಿಸಿದರು.
ಗ್ರಾಮಕ್ಕೊಂದು ವಿವೇಕಾನಂದ ಸಂಘ
ಸ್ತ್ರೀಶಕ್ತಿ ಸಂಘಕ್ಕೆ ಸಾಲ ನೀಡುವ ಯೋಜನೆಗೆ ಸ್ತ್ರೀ ಸಾಮರ್ಥ್ಯ ಎಂದು ಹೆಸರಿಡಲಾಗಿದೆ. ಅದೇ ರೀತಿಯಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ತರುತ್ತಿದ್ದೇವೆ. ಇಪ್ಪತ್ತೆಂಟು ಸಾವಿರ ಗ್ರಾಮಗಳಲ್ಲಿ ತಲಾ ಒಂದು ಸ್ವಾಮಿ ವಿವೇಕಾನಂದ ಸಂಘ ಮಾಡಿ ಸ್ತ್ರೀಶಕ್ತಿ ಸಂಘದ ರೀತಿ ಉತ್ಪನ್ನಗಳನ್ನು ತಯಾರು ಮಾಡಿಸಲು ತೀರ್ಮಾನ ಮಾಡಲಾಗಿದೆ. 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಬೊಮ್ಮಾಯಿ ಘೋಷಿಸಿದ ಇನ್ನಿತರೆ ಯೋಜನೆಗಳು
-25 ಲಕ್ಷ ಎಸ್‌ಸಿಎಸ್‌ಟಿ ಕುಟುಂಬಗಳಿಗೆ75 ಯೂನಿಟ್‌ಗಳಿಗೆ ಉಚಿತ ವಿದ್ಯುತ್ ಅನುದಾನ ಬಿಡುಗಡೆ ಆರಂಭ ಇಂದಿನಿಂದ
-ಬಾಬು ಜಗಜೀವನ್‌ರಾಮ್ ಅವರ ಹೆಸರಿನಲ್ಲಿ 100 ಯುವಕರಿಗೆ ಸ್ವಯಂಉದ್ಯೋಗ
-8000 ಶಾಲಾ ಕೊಠಡಿಗಳ ನಿರ್ಮಾಣ ಮಾಡಲು, 100 ಪಿಎಚ್‌ಸಿಗಳನ್ನು ಸಿಎಚ್‌ಸಿಗಳಾಗಿ ಪರಿವರ್ತಿಸಲು ಚಾಲನೆ ನೀಡಲಾಗುತ್ತದೆ
-ಗೋ ಸಂರಕ್ಷಣೆಗೆ ಪ್ರತಿ ವರ್ಷ ಜನರು ದತ್ತು ತೆಗೆದುಕೊಳ್ಳಬಹುದು. ಈ ವೆಬ್‌ಸೈಟ್‌ಗೆ ಇಂದಿನಿಂದ ಚಾಲನೆ ನೀಡಲಾಗುತ್ತದೆ.
-ಐದು ಹೊಸ ನಗರಗಳನ್ನು ಕಟ್ಟಲು ಪ್ರಕ್ರಿಯೆ ಆರಂಭವಾಗಿದೆ
-ಆರು ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಕೊಂಡೊಯ್ಯಲು ಈಗಾಗಲೆ ಪ್ರಕ್ರಿಯೆ ಆರಂಭಿಸಲಾಗಿದೆ
ತಳ ಸಮುದಾಯಕ್ಕೆ ಟಾನಿಕ್
ಒಬಿಸಿ ಸಮುದಾಯಕ್ಕೆ ಐದು ನಗರಗಳಲ್ಲಿ 1000 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಹಾಸ್ಟೆಲ್‌ಗಳನ್ನು ಮಾಡುತ್ತಿದ್ದೇವೆ. ಮನೆ ನಿರ್ಮಾಣಕ್ಕೆ ಪರಿಹಾರ ಹಣವನ್ನು ಹೆಚ್ಚಳ ಮಾಡಿದ್ದೇವೆ. ಸ್ತ್ರೀಶಕ್ತಿ ಸಂಘದ ಬಲವರ್ಧನೆಗೆ ವಿಶೇಷ ಯೋಜನೆ ಮಾಡಿದ್ದೇವೆ. 330 ಸಾವಿರ ಸ್ತ್ರೀಶಕ್ತಿ ಸಂಘಕ್ಕೆ ಸೀಡ್‌ಮನಿ ಕೊಟ್ಟು ಸಾಲ ನಿಖರವಾಗಿ ಸಿಗುವಂತೆ ಖಾತ್ರಿ ಮಾಡುತ್ತಿದ್ದೇವೆ. ಈ ಕುರಿತೂ ವಿವಿಧ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ 5 ಲಕ್ಷ ಸ್ತ್ರೀಯರಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನೂತನ ಶಿಕ್ಷಣ ನೀತಿಯನ್ನು ಒಪ್ಪಿ ಅನುಷ್ಠಾನ ಮಾಡುತ್ತಿರುವ ರಾಜ್ಯ ನಮ್ಮದು. 750 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಹಣ ನೀಡಿದ್ದೇವೆ. 750 ಗ್ರಾಮ ಪಂಚಾಯಿತಿಗಳಿಗೆ ಹಣ ನೀಡಿದ್ದೇವೆ, ಕಳೆದ ನಾಲ್ಕು ತ್ರೈಮಾಸಿಕದಲ್ಲಿ ಅತಿ ಹೆಚ್ಚು ವಿದೇಶಿ ಹೂಡಿಕೆ ಕರ್ನಾಟಕಕ್ಕೆ ಬಂದಿದೆ ಎಂದರು.
ಆಡಳಿತಕ್ಕೆ ಚುರುಕು
ಕೇವಲ ನಾಲ್ಕು ತಿಂಗಳಲ್ಲಿ ಬಜೆಟ್‌ನ ಎಲ್ಲ ಘೋಷಣೆಗಳಿಗೆ ಸರ್ಕಾರಿ ಆದೇಶ ಮಾಡಿದ್ದೇವೆ. ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್‌ನಲ್ಲಿ ಆಗುತ್ತಿದ್ದ ಆದೇಶಗಳನ್ನು ಈಗಾಗಲೆ ಹೊರಡಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಿದ್ದರೆ, ನಮ್ಮಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಯಡಿಯೂರಪ್ಪ ಅವರ ಗುಣಗಾನ
ಸುದ್ದಿಗೋಷ್ಠಿಯ ಆರಂಭದಲ್ಲೆ, ಮಾಜಿ ಸಿಎಂ ಬಿ.ಎಸ್. ಯಡಿಯೂತಪ್ಪ ಅವರ ಗುಣಗಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಡಿದರು. ಯಡಿಯೂರಪ್ಪ ಅವರ ಅವಧಿಯಲ್ಲಿ ಕೋವಿಡ್ ನಿರ್ವಹಣೆ ಸಮರ್ಥವಾಗಿ ನಡೆಯಿತು. ಆಗ ಆರೋಗ್ಯ ಕ್ಷೇತ್ರದ ಹೊಣೆ ಹೊತ್ತಿದ್ದ ಶ್ರೀರಾಮುಲು, ಡಾ. ಸುಧಾಕರ್ ಅವರು ಸಹಕಾರ ನೀಡಿದ್ದರು ಎಂದು ನೆನೆದರು.
ಇದನ್ನೂ ಓದಿ | ಬೊಮ್ಮಾಯಿ ಆಡಳಿತಕ್ಕೆ ವರ್ಷ | ವರಿಷ್ಠರ ಮನಗೆದ್ದ ಕಾಮನ್‌ಮ್ಯಾನ್ ಸಿಎಂ