ಉಡುಪಿ: ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸ ಮಾಡಿದ್ದು, ಮಳೆ ಹಾನಿಯ ಬಗ್ಗೆ ಮೂರು ಜಿಲ್ಲೆಗಳ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ. ನೆರೆ ಹಾನಿ ಪರಿಹಾರ ಕಾರ್ಯಕ್ಕೆ ಮೊದಲ ಹಂತದಲ್ಲಿ ತುರ್ತಾಗಿ 500 ಕೋಟಿ ರೂಪಾಯಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು. ಎಲ್ಲ ಜಿಲ್ಲೆಗಳಿಂದ ಮಳೆ ಹಾನಿ ಸಮಗ್ರ ವರದಿ ಬಂದ ನಂತರ ನೆರೆ ಎದುರಿಸಲು ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿ ಕಟ್ಟಡದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿ, ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ರಾಜ್ಯದಲ್ಲಿ ಸುರಿದಿದೆ. ಜುಲೈನಲ್ಲೇ ಮಳೆ ಪ್ರಮಾಣ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ 32 ಜೀವಹಾನಿ ಆಗಿದ್ದು, ಸುಮಾರು 300 ಜನರ ರಕ್ಷಣೆ ಮಾಡಲಾಗಿದೆ. ಮಳೆ ಹಾನಿ ಪರಿಹಾರ ಕಾರ್ಯಕ್ಕೆ 4 ಎನ್‌ಡಿಆರ್‌ಫ್, ಎಸ್‌ಡಿಆರ್‌ಎಫ್ ತಂಡಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಲು ವಿಪತ್ತು ನಿರ್ವಹಣಾ ಖಾತೆಯಲ್ಲಿರುವ ಹಣವನ್ನು ಬಳಸಿಕೊಳ್ಳಬೇಕು. ಆಹಾರ ಸಾಮಗ್ರಿಯನ್ನು ನೆರೆಪೀಡಿತ ಮನೆಗಳಿಗೆ ತಲುಪಿಸಬೇಕು. ಕಾಳಜಿ ಕೇಂದ್ರಕ್ಕೆ ಬಾರದ ಸಂತ್ರಸ್ತರು ಉಳಿದುಕೊಂಡಿರುವ ಸಂಬಂಧಿಕರ ಮನೆಗೆ ರೇಷನ್ ತಲುಪಿಸಬೇಕು. ಸೇತುವೆ ಮತ್ತು ರಸ್ತೆಗಳ ದುರಸ್ತಿ ತಕ್ಷಣ ಆಗಬೇಕು, ಮಳೆ ನಿಂತ ಕೂಡಲೇ ಡಾಂಬರೀಕರಣ ಮತ್ತು ಕಾಂಕ್ರೀಟೀಕರಣ ಮಾಡಬೇಕು ಎಂದು ಮೂರು ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ | Chief Minister Tour | ಕೊಡಗಿನಲ್ಲಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಿಸಿದ ಸಿಎಂ ಬೊಮ್ಮಾಯಿ
ಭೂಕಂಪನ, ಭೂಕುಸಿತ ಬಗ್ಗೆ ಅಮೃತ ವಿಶ್ವವಿದ್ಯಾಲಯ ತಜ್ಞರ ತಂಡ ಅಧ್ಯಯನ ಮಾಡಲಿದೆ. ವರದಿ ಬಂದ ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಿದ್ಧವಿದೆ. ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ಖರ್ಚಾಗಿದೆ. ಕೇರಳ ಮಾದರಿಯಲ್ಲಿ ಒಂದು ಕಿಲೋಮೀಟರ್ ಕಡಲಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು. ಈ ಬಗ್ಗೆ ವರದಿ ಬಂದ ನಂತರ ಶಾಶ್ವತ ಪರಿಹಾರ ಕ್ರಮ ಅನುಷ್ಠಾನಕ್ಕೆ ತೀರ್ಮಾನ ಮಾಡಲಾಗುವುದು. ಜಿಲ್ಲಾಮಟ್ಟದಲ್ಲೇ ತಕ್ಷಣ ಕಡಲ್ಕೊರೆತ ತಡೆಗೆ ಕ್ರಮಕ್ಕೆ ಸೂಚಿಸಲಾಗಿದೆ, ಮುಂದಿನ ವಾರ ಉತ್ತರ ಕನ್ನಡ, ಬೆಳಗಾವಿ, ಉತ್ತರ ಕರ್ನಾಟಕ ಭಾಗದ ಪ್ರವಾಸ ಮಾಡಿ ಮಳೆ ಹಾನಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಸಚಿವರಾದ ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ | Chief Minister Tour | ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದು