Site icon Vistara News

Rishi Sunak | ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ; ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ಹರ್ಷ

CM basavaraj bommai tries to avoid escalation in rowdy issue

ಶಿಗ್ಗಾಂವಿ: ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಅವರು ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸೋಮವಾರ ಕಿತ್ತೂರು ಚೆನ್ನಮ್ಮನ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಅವರು ಈ ಬೆಳವಣಿಗೆಯನ್ನು ನಿರೀಕ್ಷೆ ಮಾಡಿರುವುದಿಲ್ಲ. ಭಾರತೀಯರು ವಿಶ್ವದಲ್ಲಿ ಎಲ್ಲ ರಂಗಗಳಲ್ಲಿ ಮುಂದಿದ್ದಾರೆ. ಹಲವು ದೇಶಗಳಲ್ಲಿ ಸಂಸದರಾಗಿಯೂ ಆಯ್ಕೆಯಾದವರಿದ್ದಾರೆ. ಇದೀಗ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿರುವುದು ಅತ್ಯಂತ ವಿಶೇಷವಾದುದು ಎಂದು ತಿಳಿಸಿದರು.

ಇದನ್ನೂ ಓದಿ | Rishi Sunak | ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್‌ ಬ್ರಿಟನ್‌ ನೂತನ ಪ್ರಧಾನಿ, ಅ.28ಕ್ಕೆ ಪದಗ್ರಹಣ

ರಾಣಿ ಚೆನ್ನಮ್ಮನ ಪ್ರೇರಣೆಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ.ಗಳವರೆಗೆ ಬೀಜಧನ ಹಾಗೂ ಸಾಲ ಸೌಲಭ್ಯ ಒದಗಿಸುವ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಈ ಯೋಜನೆಯಡಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತಿತರ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು. ಇದೇ ರೀತಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘಗಳ ಮೂಲಕ ಯುವಕರಿಗೆ ನೆರವು ನೀಡಲಾಗುವುದು. ಡಿಸೆಂಬರ್‌ನಲ್ಲಿ ಎರಡೂ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಅಧ್ಯಾದೇಶ ಜಾರಿಗೆ ಬಂದಿರುವುದು ನಿಜಕ್ಕೂ ಸಂತಸ ತಂದಿದೆ. ಈ ಸಮುದಾಯಗಳ 50 ವರ್ಷದ ಬೇಡಿಕೆ ಈಡೇರಿಸಿದಂತಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ, ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಅಂಗೀಕಾರ ಪಡೆದು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಮಾಡದ ಕೆಲಸವನ್ನು ನೀವು ಮಾಡಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾನು ನನ್ನ ಚಿಂತನೆ, ನನ್ನ ಕರ್ತವ್ಯವನ್ನಷ್ಟೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ ಎಚ್‌ಡಿಕೆ
ಬೆಂಗಳೂರು: ಬ್ರಿಟನ್ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ನಡ ನೆಲದ ನಂಟು ಹೊಂದಿರುವ ಕನ್ಸರ್ವೇಟಿವ್ ಪಕ್ಷದ ನಾಯಕರಾದ ರಿಷಿ ಸುನಕ್‌ ಅವರಿಗೆ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿ, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯಂದಿರಾಗಿರುವ ರಿಷಿ ಸುನಕ್ ಅವರ ಆಯ್ಕೆ ನನಗೆ ಅತೀವ ಸಂತಸ ತಂದಿದೆ. ಆರ್ಥಿಕ ಸಂಕಷ್ಟ ಕಾಲದಲ್ಲಿ ರಿಷಿ ಸುನಕ್ ಅವರು ಬ್ರಿಟನ್ ದೇಶದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Rishi Sunak | ಭಾರತ ಮೂಲದ ಪ್ರಧಾನಿಗೆ ಭಾರತದ ಪ್ರಧಾನಿ ಅಭಿನಂದನೆ, ರಿಷಿಗೆ ಮೋದಿ ಹೇಳಿದ್ದೇನು?

Exit mobile version