ಬೆಂಗಳೂರು: ಆರೋಗ್ಯ ವ್ಯವಸ್ಥೆ ದುಬಾರಿಯಾಗಿರುವ ಇಂದಿನ ಸನ್ನಿವೇಶದಲ್ಲಿ ಸಾಮಾನ್ಯ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ 438 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ನವ ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಮಾಡಿರುವ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ಈ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದ್ದು, ʻನಮ್ಮ ಕ್ಲಿನಿಕ್ʼ ಎಂದು ನಾಮಕರಣ ಮಾಡಲಾಗುತ್ತಿದೆ. ನವ ದೆಹಲಿಯ ಆಮ್ ಆದ್ಮಿ ಸರ್ಕಾರಕ್ಕೆ ಪ್ರಸಿದ್ಧಿಯನ್ನು ತಂದುಕೊಟ್ಟ ಯೋಜನೆ ಎನ್ನಲಾಗುವ ಮೊಹಲ್ಲಾ ಕ್ಲಿನಿಕ್‌ಗಳನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಜಾರಿಗೊಳಿಸಲು ರಾಜ್ಯ ಸರ್ಜಾರ ಉತ್ಸುಕವಾಗಿದೆ.
ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜನರು ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ ಜ್ವರ, ಚಳಿ, ಶೀತ, ನೆಗಡಿ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಿಗಳಿಗೆ ಹೊರರೋಗಿ ಚಿಕಿತ್ಸೆ(ಒಪಿಡಿ) ದೊರೆಯಲಿವೆ. ರಕ್ತ, ಮೂತ್ರ ಪರೀಕ್ಷೆ ಸೇರಿ ಸಾಮಾನ್ಯ ಪ್ರಯೋಗಾಲಯ ಸೇವೆಗಳು, ಕೆಲವು ಉಚಿತ ಔಷಧ ವಿತರಣೆ, ಮಧುಮೇಹ, ರಕ್ತದೊತ್ತಡದಂತಹ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ರೋಗಿಗಳನ್ನು ಮೇಲ್ಮಟ್ಟದ ಆರೋಗ್ಯ ಸಂಸ್ಥೆಗಳಿಗೆ ಶಿಫಾರಸು ಮಾಡುವುದು. ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಯೋಜನೆ ಜಾರಿ ಆರಂಭವಾಗುತ್ತದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ | ಪಂಜಾಬ್ ಆಮ್ ಆದ್ಮಿ ಸರ್ಕಾರದ ಮೊದಲ ಬಜೆಟ್ ಮಂಡನೆ; ರೈತರು, ವಿದ್ಯಾರ್ಥಿಗಳಿಗೆ ಬಂಪರ್
ನಗರವಾಸಿಗಳೇ ಟಾರ್ಗೆಟ್
ರಾಜ್ಯದಲ್ಲಿ ಈಗಾಗಲೆ ಪ್ರತಿ 50 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇದನ್ನು ಪ್ರತಿ 10 ಸಾವಿರ ಜನಸಂಖ್ಯೆಗೆ ಏರಿಕೆ ಮಾಡಬೇಕೆಂಬ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಹೆಚ್ಚಿನ ಆರೋಗ್ಯ ಕೇಮದ್ರಗಳು ಗ್ರಾಮೀಣಪ್ರದೇಶಗಳಲ್ಲಿವೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸ್ಲಂ, ಕಾರ್ಮಿಕರು ವಾಸಿಸುವ ಸ್ಥಳಗಳ ಸುತ್ತಮತ್ತ ʻನಮ್ಮ ಕ್ಲಿನಿಕ್ʼ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಈ ಕುರಿತು ರಾಜ್ಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.
ನಗರ ಪ್ರದೇಶದಲ್ಲಿರುವ ಬಡತನದ ಬಗ್ಗೆ ಇತ್ತೀಚೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೂ ನಗರ ಬಡತನ ನಿರ್ಮೂಲನೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮಾದರಿಯಲ್ಲಿ ನಗರದಲ್ಲಿರುವ ಕೆಳ ಮಧ್ಯಮ ವರ್ಗ ಹಾಗೂ ಬಡತನದ ರೇಖೆಗಿಂತ ಕೆಳಗಿರುವವರ ಆರೋಗ್ಯ ಸಂರಕ್ಷಣೆಗೆ ಈ ಯೋಜನೆ ಘೋಷಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ವಾರ್ಡ್‌ಗೆ ಒಂದು ಕ್ಲಿನಿಕ್
ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ ನಂತರ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ 243 ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಇಲ್ಲಿವರೆಗೆ ಬಿಬಿಎಂಪಿಯಲ್ಲಿ 198 ವಾರ್ಡ್‌ಗಳಿದ್ದು, ಇದೀಗ ಹೊಸದಾಗಿ ವಾರ್ಡ್ ಮರುವಿಗಡಣೆಯಲ್ಲಿ 243ಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗಾಗಿ ವಾರ್ಡ್‌ಗೆ ಒಂದರಂತೆ ನಮ್ಮ ಕ್ಲಿನಿಕ್ ಘೋಷಣೆ ಮಾಡಲಾಗಿತ್ತು. ಈಗಾಗಲೆ ಬಿಬಿಎಂಪಿ ವತಿಯಿಂದ ಕಟ್ಟಡಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ರಾಜ್ಯ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಗಾಗಿ 15ನೇ ಹಣಕಾಸು ಆಯೋಗದ ಅನುದಾನವನ್ನು ಬಳಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. 155. 77 ಕೋಟಿ ರೂ. ವೆಚ್ಚದಲ್ಲಿ 438 ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತದೆ. ಅಂದರೆ ಪ್ರತಿ ಕ್ಲಿನಿಕ್‌ಗೆ ಸರಾಸರಿ 35 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಪ್ರತಿ ಕ್ಲಿನಿಕ್‌ನಲ್ಲಿ ಪಾಳಿಯ ಆಧಾರದಲ್ಲಿ ಆರು ಸಿಬ್ಬಂದಿ ಇರಲಿದ್ದು, ಕೆಲವು ಪ್ರಾಥಮಿಕ ಪರೀಕ್ಷಾ ಉಪಕರಣಗಳನ್ನು ಖರೀದಿಸಲು ಹಾಗೂ ನಿರ್ವಹಿಸಲು ಈ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಪಂಜಾಬ್‌ನಲ್ಲೂ ಆರಂಭ
ನವ ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್ ಪ್ರಯೋಗ ಸಫಲವಾದ ನಂತರ ಇತ್ತೀಚೆಗೆ ಪಂಜಾಬ್‌ನಲ್ಲೂ ಜಾರಿಗೆ ನಿರ್ಧಾರ ಮಾಡಲಾಗಿದೆ. ಈತ್ತೀಚೆಗೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಸರ್ಕಾರ ತನ್ನ ಮೊದಲ ಬಜೆಟ್‌ನಲ್ಲಿ ಇದನ್ನು ಘೋಷಣೆ ಮಾಡಿತ್ತು. ಅದಕ್ಕಾಗಿ 77ಕೋಟಿ ರೂಪಾಯಿ ಮೀಸಲಾಗಿಟ್ಟಿದ್ದು, ಈ ವರ್ಷ ಒಟ್ಟು ೧೧೭ ಕ್ಲಿನಿಕ್‌ಗಳು ಸ್ಥಾಪನೆಯಾಗಲಿವೆ. ಅದರಲ್ಲಿ 75 ಆಗಸ್ಟ್‌ನಿಂದ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿತ್ತು.