Site icon Vistara News

ಬಂಡವಾಳ ಹೂಡಿಕೆಗೆ ಕರ್ನಾಟಕ ಬೆಸ್ಟ್‌, ರಾಯಭಾರಿಗಳಿಗೆ ಬೊಮ್ಮಾಯಿ ಅಭಯ

ನವದೆಹಲಿ: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವಿದ್ದು, ಎಲ್ಲ ವಲಯಗಳು ಹೂಡಿಕೆ ಸ್ವೀಕರಿಸಲು ಸಕಲ ರೀತಿಯಲ್ಲೂ ಸಿದ್ಧವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಂದಿನ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ – 2022 ಜಾಗತಿಕ ಹೂಡಿಕೆದಾರರ ಸಮಾವೇಶದ ಕುರಿತು ಬುಧವಾರ ಅವರು ವಿವಿಧ ದೇಶಗಳ ರಾಯಭಾರಿಗಳೊಂದಿಗೆ ನವದೆಹಲಿಯಲ್ಲಿ ಸಂವಾದ ನಡೆಸಿದರು.

basavaraj bommayi

ಕರ್ನಾಟಕದ ಅಭಿವೃದ್ಧಿ ವೈಜ್ಞಾನಿಕವಾಗಿ ಆಗಿದೆ. ತಂತ್ರಜ್ಞಾನದ ಬದಲಾವಣೆಗಳನ್ನು ಅಳವಡಿಸಿಕೊಂಡಿದೆ. ಆದ್ದರಿಂದ ರಾಜ್ಯದ ಎಲ್ಲ ವಲಯಗಳಲ್ಲಿ ಸಹಜವಾದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಸಾಧ್ಯವಾಗಿದೆ. ಮೆಷಿನ್ ಟೂಲ್ಸ್ ಗಳನ್ನು ಉತ್ಪಾದಿಸುವ ಮೊದಲ ರಾಜ್ಯ. ದೇಶದಲ್ಲಿ ಮೊದಲ ಬಾರಿ ಏರೋಸ್ಪೇಸ್ ಘಟಕವನ್ನು ಸ್ಥಾಪಿಸಿದ ರಾಜ್ಯ ಕರ್ನಾಟಕ. ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ನಿರ್ಮಿಸಲಾದ ಸೆಟಿಲೈಟ್ ಗಳಲ್ಲಿ ಚಂದ್ರನೆಡೆಗೆ ಪ್ರಯಾಣಿಸಲಾಯಿತು. ಬಯೋ ಟೆಕ್ನಾಲಜಿ, ಫಾರ್ಮಾ ಕೈಗಾರಿಕೆಗಳು, ಐಟಿ ಕ್ಷೇತ್ರ ಗಳು ರಾಜ್ಯದಲ್ಲಿವೆ. ಅಮೆರಿಕದ ನಂತರ ಬೆಂಗಳೂರಿನ ಸಿಲಿಕಾನ್ ವ್ಯಾಲಿ ಖ್ಯಾತಿ ಗಳಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗಾಲಯಗಳು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ 400 ಸಂಶೋಧನಾ ಕೇಂದ್ರಗಳಿದ್ದು, ಅವುಗಳಲ್ಲಿ 180 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಾಗಿವೆ ಎಂದು ಬೊಮ್ಮಾಯಿ ವಿವರಿಸಿದರು.

globalization

ದಕ್ಷತೆ ಹಾಗೂ ಉತ್ಕೃಷ್ಟತೆ ಮೂಲಮಂತ್ರ
ಜಾಗತೀಕರಣದಿಂದಾಗಿ ವಿಶ್ವ ಬಹಳ ಸಣ್ಣದಾಗಿದೆ. ದಕ್ಷತೆ ಹಾಗೂ ಉತ್ಕೃಷ್ಟತೆ ಆರ್ಥಿಕ ಚಟುವಟಿಕೆಯ ಮೂಲಮಂತ್ರ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯಕರ ಸ್ಪರ್ಧೆ ಪ್ರಾರಂಭವಾಗಿದೆ. ಶ್ರೇಷ್ಠರಾದವರು ಮನ್ನಣೆ ಗಳಿಸುತ್ತಾರೆ. ಕರ್ನಾಟಕವನ್ನು ಬಹಳ ಸದೃಢವಾಗಿ, ಸಶಕ್ತವಾಗಿ ವಿಶ್ವಕ್ಕೆ ಪರಿಚಯಿಸಲಾಗುತ್ತದೆ. ರಾಜ್ಯಕ್ಕೆ ಶ್ರೀಮಂತ ಪರಂಪರೆಯೇ ಭದ್ರ ಅಡಿಪಾಯವಾಗಿದೆ. ಮೌಲ್ಯಗಳು, ಪ್ರಾಮಾಣಿಕತೆ ನಮ್ಮ ಪರಂಪರೆಯ ಭಾಗವಾಗಿದೆ. ಅತಿಥಿಗಳೇ ದೇವರು ಎಂಬುದು ಕರ್ನಾಟಕದ ಸಂಸ್ಕೃತಿ ಎಂದು ಬೊಮ್ಮಾಯಿ ವಿವರಿಸಿದರು.

capital investment

ಹೂಡಿಕೆಯಿಂದ ಪರಸ್ಪರ ಲಾಭ
ಕರ್ನಾಟಕದಲ್ಲಿ 10 ಕೃಷಿ ಹವಾಮಾನ ಪ್ರದೇಶಗಳಿವೆ. ಪಶ್ಚಿಮ ಘಟ್ಟ, ಅರಬ್ಬೀ ಸಮುದ್ರತೀರ,ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು, ಎಲ್ಲರೀತಿಯ ಕೃಷಿ ಬೆಳೆಗಳು ಇದೆ. ನೈಸರ್ಗಿಕ ಸಂಪತ್ತು ಹಾಗೂ ಕೃಷಿಕನ ಅಭಿವೃದ್ಧಿಶೀಲ ಚಿಂತನೆಯಿಂದ ಸದೃಢವಾದ ಕೃಷಿ ವಲಯ ಹಾಗೂ ಸೇವಾ ವಲಯವನ್ನು ನಿರ್ಮಿಸಲಾಗಿದೆ. ವಿಶ್ವದ ಅತ್ಯುತ್ತಮ ದೇಶಗಳ ರಾಯಭಾರಿಗಳು ಸಭೆಗೆ ಆಗಮಿಸಿದ್ದು, ಪ್ರತಿಯೊಬ್ಬರು ಯಾವುದಾದರೂ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿದವರು. ಇಂತಹ ಉತ್ಕೃಷ್ಟತೆಯ ಸಮಾಗಮಕ್ಕೆ ಅವಕಾಶವಾಗಿದೆ. ಒಟ್ಟಾಗಿ ಬೆಳೆಯುವುದರಲ್ಲಿ ಕರ್ನಾಟಕ ನಂಬಿಕೆ ಇರಿಸಿದೆ. ಕರ್ನಾಟಕದಲ್ಲಿ ಕೇವಲ ಬಂಡವಾಳ ಹೂಡುವುದರಿಂದ ಪರಸ್ಪರ ಲಾಭದಾಯಕ ಎಂದು ವಿವಿಧ ದೇಶಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಯಾರೊಂದಿಗೂ ಮೈತ್ರಿಯಿಲ್ಲ, ಯಾರನ್ನಾದರೂ ಸೋಲಿಸಬೇಕೆಂಬ ಆಸೆಯೂ ಇಲ್ಲ: ಅರವಿಂದ್‌ ಕೇಜ್ರಿವಾಲ್‌ – 

Exit mobile version