Site icon Vistara News

ಕೋಲಾರ, ಮಂಡ್ಯ ಭಾಗದಿಂದ ಬಿಜೆಪಿ ಹೆಚ್ಚು ಜನ ಬರುತ್ತಿದ್ದಾರೆ: ಅಚ್ಚರಿ ಮೂಡಿಸಿದ CM ಬೊಮ್ಮಾಯಿ

ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್‌ ಆಗಮನದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾವಭಾವದಲ್ಲಿ ಬದಲಾವಣೆ ಆಗಿದ್ದು, ಇದೀಗ ಸಾಕಷ್ಟು ಆತ್ಮವಿಶ್ವಾಸದ ನಡೆಗಳನ್ನು ಇಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಎಂಬ ಕೂಗಿನ ನಡುವೆಯೇ ಅಮಿತ್‌ ಷಾ ಪ್ರವಾಸ ಮುಗಿಸಿ ತೆರಳಿದರು. ಇನ್ನು ಸಿಎಂ ಬದಲಾವಣೆ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಂತಿರುವ ಸಿಎಂ, ಇದೀಗ ಬೇರೆ ಬೇರೆ ಪಕ್ಷಗಳಿಂದ ನಾಯಕರನ್ನು ಸೆಳೆಯುವ ಕುರಿತು ಮಾತನಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು. ಅವರು ಆರೋಗ್ಯವಂತರಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಶುಭ ಹಾರೈಸಿದರು. ಅವರ ಮಾರ್ಗದರ್ಶನ ಸರ್ಕಾರ ಮತ್ತು ರಾಜ್ಯದ ಜನತೆಗೆ ದೊರೆಯುವಂತಾಗಲಿ ಎಂದು ತಿಳಿಸಿದರು. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದಲ್ಲೆ ತೀರ್ಮಾನ: CM ಬೊಮ್ಮಾಯಿಗೆ ತಿಳಿಸಿದ ವರಿಷ್ಠರು

ರಾಜ್ಯದ ಎಲ್ಲಾ ಭಾಗದಿಂದಲೂ ಬಹಳ ಜನ ಬಿಜೆಪಿಗೆ ಬರುತ್ತಿದ್ದಾರೆ. ವಿಶೇಷವಾಗಿ ಕೋಲಾರ, ಮಂಡ್ಯದಿಂದ ಹೆಚ್ವು ಜನ ಬರುತ್ತಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಸಾರ್ವಜನಿಕರು ಹಾಗೂ ವಿಶೇಷವಾಗಿ ಯುವಕರು ಪಕ್ಷಕ್ಕೆ ಬರಲು ಒಲವು ತೋರುತ್ತಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಹೊಸ ಯುವ ನಾಯಕತ್ವ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬಿಜೆಪಿಯ ಪರವಾಗಿ ಮಂಡ್ಯದಲ್ಲಿ ಬಹಳ ದೊಡ್ಡ ಶಕ್ತಿಯ ಅಲೆ ಕಾಣುತ್ತಿದೆ ಎಂದು ಹೇಳಿದರು.

ಮಂಡ್ಯದಲ್ಲಿ ಈಗಾಗಲೆ ರಾಜಕೀಯ ಸಂಚಲನ ನಡೆಯುತ್ತಿದೆ. ಸಂಸದೆ ಸುಮಲತಾ ಅಂಬರೀಷ್‌ ಬಿಜೆಪಿಗೆ ಆಗಮಿಸುತ್ತಾರೆ ಎಂಬ ಚರ್ಚೆಯೂ ಬಲವಾಗಿದೆ. ಇದಕ್ಕೆ ಸರಿಯಾಗಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಂಸದರು ಮಂಡ್ಯದಿಂದ ಆಯ್ಕೆಯಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸಹ ಶುಕ್ರವಾರ ಹೇಳಿಕೆ ನೀಡಿದ್ದು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ.

ಇದನ್ನೂ ಓದಿ: ವಕ್ಫ್‌ ಬೋರ್ಡ್‌ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಧಾರ್ಮಿಕ ವಿವಾದದಿಂದ CM ಅಂತರ

Exit mobile version