ಮೈಸೂರು: ಟೀಕೆ, ಅವಮಾನಗಳನ್ನು ಮೆಟ್ಟಿಲು ಮಾಡಿಕೊಂಡು, ಜನರ ಶ್ರೇಯೋಭಿವೃದ್ಧಿಗೆ ದಿನದ 24 ಗಂಟೆ ಕೆಲಸ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಜನಪರ ಸರ್ಕಾರವನ್ನು ಸ್ಥಾಪನೆ ಮಾಡಿಯೇ ತೀರುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಚಾಮರಾಜ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕ್ಷೇತ್ರದ ಶಾಸಕ ನಾಗೇಂದ್ರ ಯಾವುದಾದರೂ ಕೆಲಸ ಹಿಡಿದರೆ ಅದನ್ನು ಮಾಡುವವರೆಗೂ ಬಿಡುವುದಿಲ್ಲ. ಶಾಸಕರು ಕ್ಷೇತ್ರದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ | ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ಜಾರ್ಜ್ ಫರ್ನಾಂಡಿಸ್: ಸಿದ್ದರಾಮಯ್ಯ ಸ್ಮರಣೆ
ಎರಡು ರೀತಿ ವ್ಯಕ್ತಿತ್ವಗಳು ಇರುತ್ತವೆ. ಒಬ್ಬರು ಅರ್ಜುನ, ಇನ್ನೊಬ್ಬರು ಕರ್ಣ. ಅರ್ಜುನನಿಗೆ ಬಾಣ ಹೂಡಬೇಕಾದರೆ ಬಹಳ ಹೊಗಳಬೇಕು. ನೀನು ಶೂರ, ಧೀರ ಎಂದು ಹೊಗಳಿದಾಗ ಬಾಣ ಹೂಡುತ್ತಾನೆ. ಆದರೆ, ಕರ್ಣ ಹಾಗಲ್ಲ. ಅವನಿಗೆ ಗುರಿಯಿಲ್ಲ. ನಿನ್ನ ಕೈಯಲ್ಲಿ ಆಗುವುದಿಲ್ಲ ಎಂದು ಟೀಕೆ ಮಾಡಿದರೆ ಅವನು ಮೈ ಕೊಡವಿ ನಿಖರಾವಾಗಿ ಬಾಣ ಹೂಡುತ್ತಾನೆ. ನಾನು ಕರ್ಣನಂತೆ, ನೀವು ಎಷ್ಟು ಟೀಕೆ ಮಾಡುತ್ತೀರಿ. ಅಷ್ಟು ನನಗೆ ಶಕ್ತಿ ಬರುತ್ತದೆ. ರಾಜ್ಯದಲ್ಲಿ ನಿರಂತರ ಅಭಿವೃದ್ಧಿ ಮಾಡಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸುತ್ತೇನೆ. ನೀವು ಈಗ ಪೋಸ್ಟರ್ ಹಚ್ಚಲು ಯಾವ ಜಾಗದಲ್ಲಿ ನಿಂತಿದ್ದೀರಿ ನೀವು ಅಲ್ಲಿಯೇ ನಿಲ್ಲುವಂತೆ ಮಾಡುತ್ತೇನೆ ಎಂದರು.
ನಾವು ಮಾಡುವ ಕೆಲಸ ಇಡೀ ರಾಜ್ಯದ ಅಭಿವೃದ್ಧಿಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು. ಸ್ವಾಭಿಮಾನದ ಬದುಕು, ಸ್ವಾವಲಂಬನೆಯ ಬದುಕಿಗಾಗಿ ನಮ್ಮ ಯೋಜನೆಗಳು ಇರಬೇಕು. ಯೋಜನೆಗಳು ಕೇವಲ ಘೋಷಣೆ ಆಗಬಾರದು. ಅವುಗಳ ಅನುಷ್ಠಾನ ಆಗಬೇಕು. ಕೆಲವರು ಆ ಭಾಗ್ಯ, ಈ ಭಾಗ್ಯ ಎಂದು ದಿನಕ್ಕೊಂದು ಭಾಗ್ಯ ಕೊಟ್ಟು ರಾಜ್ಯವನ್ನು ದೌರ್ಭಾಗ್ಯಕ್ಕೆ ತಳ್ಳಿದರು. ಅದಕ್ಕಾಗಿ ಆ ಭಾಗ್ಯಗಳನ್ನು ಕೊಟ್ಟವರಿಗೆ ಜನ ಬೆಂಬಲ ಸಿಗಲಿಲ್ಲ. ಕೆಲವರನ್ನು ಕೆಲವು ಸಮಯ ಮೋಸ ಮಾಡಬಹುದು. ಎಲ್ಲರನ್ನು ಎಲ್ಲ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ, ಜನರು ಜಾಗೃತರಾಗಿದ್ದಾರೆ ಎಂದರು.
ಇದನ್ನೂ ಓದಿ | Gehlot VS Pilot | ಪೈಲಟ್ ಸಿಎಂ ಆದರೆ 70% ಶಾಸಕರ ರಾಜೀನಾಮೆ? ರಾಜಸ್ಥಾನದಲ್ಲಿ ನಾಟಕೀಯ ಬೆಳವಣಿಗೆ
ರಾಜಕಾರಣದಲ್ಲಿ ಎರಡು ವಿಧಗಳಿವೆ. ಒಂದು ಪೀಪಲ್ಸ್ ಪಾಲಿಟಿಕ್ಸ್, ಜನರ ಒಳಿತಿಗಾಗಿ ಮಾಡುವುದು. ಇನ್ನೊಂದು ಪವರ್ ಪಾಲಿಟಿಕ್ಸ್, ಕೇವಲ ಅಧಿಕಾರಕ್ಕಾಗಿ ಕೆಲಸ ಮಾಡುವುದು. ಪ್ರತಿಪಕ್ಷದಲ್ಲಿದ್ದಾಗ ಮಾಡಿದ ಹೋರಾಟಕ್ಕೆ ಅಧಿಕಾರ ಬಂದಾಗ ಶಾಸಕರು ಮೈಮುರಿದು ಕೆಲಸ ಮಾಡಬೇಕು ಎಂದ ಅವರು, 14 ಲಕ್ಷ ರೈತರ ಮಕ್ಕಳಿಗೆ ನಾವು 600 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನವನ್ನು ಕೊಡುತ್ತಿದ್ದೇವೆ. ಕಾರ್ಮಿಕರು, ಮೀನುಗಾರರು, ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಕೊಟ್ಟಿದ್ದೇವೆ. ಈ ರೀತಿಯ ಯೋಜನೆಗಳನ್ನು ಇದುವರೆಗೆ ಯಾಕೆ ನೀವು ಮಾಡಲಿಲ್ಲ. ನಾವು ಎಲ್ಲ ವರ್ಗದ ಜನರಿಗೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದರು.
ಮೈಸೂರಿನಲ್ಲಿ ಪ್ರತಿಯೊಂದು ವಾರ್ಡ್‌ನಲ್ಲಿ ಎರಡು ಸ್ತ್ರೀ ಶಕ್ತಿ ಸಂಘ, ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವಕರ ಸಂಘ ಮಾಡುತ್ತೇವೆ. ಪ್ರತಿ ಸಂಘಕ್ಕೆ ಐದು ಲಕ್ಷ ರೂ. ಕೊಡುವ ಯೋಜನೆಯನ್ನು ಪ್ರತಿಯೊಂದು ವಾರ್ಡ್‌ನಲ್ಲಿ ಮಾಡುತ್ತಿದ್ದೇವೆ. ಯವಕರು ಮತ್ತು ಮಹಿಳೆಯರಿಗೆ ಕೆಲಸ ಸಿಗಬೇಕು. ಎಲ್ಲ ವರ್ಗದ ಜನರ ಅಭಿವೃದ್ಧಿ ಆದಾಗ ರಾಜ್ಯ ಶ್ರೀಮಂತವಾಗುತ್ತದೆ ಎಂದು ಹೇಳಿದರು.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಮತ್ತಿತರರು ಇದ್ದರು.
ಇದನ್ನೂ ಓದಿ | 108 ತಾಂತ್ರಿಕ ಸಮಸ್ಯೆ | ರಾಜ್ಯದ ಜನರ ಕ್ಷಮೆ ಯಾಚಿಸಿದ ಆರೋಗ್ಯ ಸಚಿವ ಸುಧಾಕರ್