Site icon Vistara News

ಸಿಎಂ ಬೊಮ್ಮಾಯಿ ಡೆಲ್ಲಿ ಟೂರ್‌ ಸಕ್ಸೆಸ್‌: ಜೆ.ಪಿ. ನಡ್ಡಾ ಅಭಯ

jp nadda in bengaluru new

ಬೆಂಗಳೂರು: ಕೊನೆಗೂ ಸಿಎಂ ಬಸವರಾಜ ಬೊಮ್ಮಾಯಿ ಗೆದ್ದಿದ್ದಾರೆ. ಬೀಸೊ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವಂತೆ, ಇತ್ತೀಚೆಗಷ್ಟೆ ವಿಧಾನ ಪರಿಷತ್‌ ಚುನಾವಣೆ ಸಮಯದಲ್ಲಿ ಆಗಿದ್ದ ಹಿನ್ನಡೆಯಿಂದ ಸದ್ಯಕ್ಕೆ ಪಾರಾಗಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸುವ ಮುನ್ನ ಎದುರಾಗಿದ್ದ ಸಂಕಷ್ಟ ನಿವಾರಿಸಿಕೊಳ್ಳಲು ದೆಹಲಿಗೆ ಮಾಡಿದ ದಂಡಯಾತ್ರೆ ಫಲ ಕೊಟ್ಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಯ ನೀಡಿ ತೆರಳಿದ್ದಾರೆ.

ಜೂನ್‌ 10ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಒಂದು ಸ್ಥಾನವನ್ನು ಗೆಲ್ಲಿಸಿಕೊಟ್ಟ ಸಂಭ್ರದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಜೂನ್‌ ೧೫ ರಂದು ಹೊರಬಂದ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಆಘಾತ ನೀಡಿತ್ತು. ವಿಧಾನ ಪರಿಷತ್‌ ಸದಸ್ಯರಾಗಿ ಬಸವರಾಜ ಹೊರಟ್ಟಿ ಆಯ್ಕೆಯಾದರು. ನಂತರ ವಾಯವ್ಯ ಪದವೀಧರ ಕ್ಷೇತ್ರದಿಂದ ಹನುಮಂತ ನಿರಾಣಿ ಗೆಲ್ಲುವ ಮುನ್ಸೂಚನೆ ಲಭಿಸಿತು. ಗುರುವಾರ ಉಳಿದ ಎಣಿಕೆ ಆರಂಭವಾದಾಗ ನಿರೀಕ್ಷೆಯಂತೆ ನಿರಾಣಿ ಜಯಿಸಿದರು. ಆದರೆ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್‌ ಶಹಾಪುರ ಸೋಲುಂಡರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಿರಿಯ ಕಾರ್ಯಕರ್ತ ಮೈ.ವಿ. ರವಿಶಂಕರ್‌ ಪ್ರಬಲ ಪೈಪೋಟಿ ನೀಡಿದರಾದರೂ, ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ವಿರುದ್ಧ ಮಂಡಿಯೂರಿದರು. ಇಬ್ಬರು ಕಟ್ಟಾ ಬಿಜೆಪಿ ಕಾರ್ಯಕರ್ತರ ಸೋಲು ಹಿನ್ನಡೆ ಎಂದೇ ಪಕ್ಷದಲ್ಲಿ ಚರ್ಚೆಯಾಯಿತು.

ಮಾರನೆಯ ದಿನವೇ ರಾಜ್ಯಕ್ಕೆ ಪ್ರಭಾರಿ ಅರುಣ್‌ ಸಿಂಗ್‌ ಆಗಮಿಸಿದರು. ಶನಿವಾರ ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿ ನಡೆಯುವ ಒಬಿಸಿ ಮೋರ್ಚಾ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಹಾಗೂ ಚಿತ್ರದುರ್ಗದಲ್ಲಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸುವವರಿದ್ದರು. ರಾಜ್ಯದಲ್ಲಿ ಆಗಾಗ ʼಸಿಎಂ ಬದಲಾವಣೆʼ ಕೂಗೆಬ್ಬಿಸುವ ಗುಂಪು ನಡ್ಡಾ ಆಗಮಿಸಿದಾಗ ರಾಜ್ಯ ನಾಯಕರು ಅವರ ಕಿವಿಗೆ ಏನನ್ನು ಹೇಳಬಹುದು ಎಂದು ಬೊಮ್ಮಾಯಿ ಊಹಿಸಿದರು. ಶುಕ್ರವಾರ ದಿಢೀರನೆ ನವದೆಹಲಿಗೆ ದೌಡಾಯಿಸಿದರು.

ನವದೆಹಲಿ ಪ್ರವಾಸ ಏಕೆ ಎಂಬ ಪತ್ರಕರ್ತರ ಪ್ರಶ್ನೆಗೆ, ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮವಿದೆ, ಸಂಜೆ ಜಿಎಸ್‌ಟಿ ಮಂಡಳಿ ಸಭೆಯಿದೆ ಎಂದರು. ಆದರೆ ಅಸಲಿಗೆ ಟಿವಿ ಕಾರ್ಯಕ್ರಮವನ್ನು ಬೆಂಗಳೂರಿನಿಂದಲೇ ವರ್ಚುವಲ್‌ ಆಗಿ ಅಟೆಂಡ್‌ ಮಾಡುವ ಯೋಜನೆ ಇತ್ತು. ಇನ್ನು ಜಿಎಸ್‌ಟಿ ಸಭೆ ನಡೆದದ್ದೇ ವಿಡಿಯೋ ಕಾನ್ಫರೆನ್ಸ್‌ ಮೂಲಕ. ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ಸಭೆಗೆ ದೆಹಲಿಗೆ ಹೋಗಿ ಅಲ್ಲಿ ಕರ್ನಾಟಕ ಭವನದ ಕೊಠಡಿಯಿಂದ ಭಾಗವಹಿಸಲು ಬೆಂಗಳೂರಿನಲ್ಲಿ ನೆಟ್‌ವರ್ಕ್‌ ಸಮಸ್ಯೆ ಇತ್ತಾ ಎಂದು ಪ್ರಶ್ನೆ ಕೇಳುವಂತಾಯಿತು !. ಜಿಎಸ್‌ಟಿ ಸಚಿವರ ಗುಂಪಿಗೆ ಬೊಮ್ಮಾಯಿ ಅವರೇ ಅಧ್ಯಕ್ಷರು, ಅದಕ್ಕಾಗಿ ತೆರಳಿದ್ದಾರೆ ಎಂದು ಸರ್ಕಾರದ ಮೂಲಗಳು ಸಮಜಾಯಿಷಿ ನೀಡಿದವು. ಕೊನೆಗೆ, ಮೇಲ್ನೋಟಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿ ಮಾಡಿದರು. ಮೇಲ್ನೋಟಕ್ಕೆ ಕಾಣದಂತೆ ಯಾರ‍್ಯಾರನ್ನು ಭೇಟಿ ಮಾಡಿದರು, ಏನು ಮಾತುಕತೆ ನಡೆಸಿದರು ಎನ್ನುವುದು ಗೌಪ್ಯವಾಗಿಯೇ ಉಳಿದಿತ್ತು.

ಮೋದಿ ಕಾರ್ಯಕ್ರಮದ ಸಿದ್ಧತೆ

ದೆಹಲಿಯಿಂದ ಆಗಮಿಸಿದವರೇ ಶುಕ್ರವಾರ ಬೆಳಗ್ಗೆಯಿಂದಲೇ, ಪ್ರಧಾನಿ ಮೋದಿ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದರು. ಮೋದಿಯವರು ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾರತೀಯ ವಿಜ್ಞಾನ ಮಂದಿರ,ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿ ರೋ ಬಾಬಾಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಸಬ್‌ಅರ್ಬನ್‌ ಕಾರ್ಯಕ್ರಮ ನಡೆಯುವ ಕೊಮ್ಮಘಟ್ಟದ ಸ್ಥಳ ಪರಿಶೀಲನೆ ನಡೆಸಿದರು. 12 ಗಂಟೆಯ ವೇಳೆಗೆ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳಿ ಖುದ್ದಾಗಿ ಜೆ.ಪಿ. ನಡ್ಡಾ ಅವರನ್ನು ಸ್ವಾಗತಿಸಿದರು.

ಒಬಿಸಿ ಮೋರ್ಚಾ ಪ್ರಶಿಕ್ಷಣ ನಡೆಯುವ ಸ್ಥಳ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ಇದೆ. ಸಾಮಾನ್ಯವಾಗಿ ವಿಮಾನ ನಿಲ್ದಾಣಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರು ಅಥವಾ ಇನ್ನಾರೊ ಪ್ರಮುಖ ನಾಯಕರು ತೆರಳಿ ಸ್ವಾಗತಿಸಿ Escort ಮಾಡಿಕೊಂಡು ಕರೆತರುವುದು ಬಿಜೆಪಿ ಸಂಪ್ರದಾಯ. ಆದರೆ ಈ ಬಾರಿ ಸಂಪ್ರದಾಯ ಮುರಿದು ಸ್ವತಃ ಸಿಎಂ ತೆರಳಿ ಸ್ವಾಗತಿಸಿ ಹೋಟೆಲ್‌ಗೆ ಕರೆತಂದರು.

ಭಾಷಣದಲ್ಲಿ ಹೊಗಳಿಕೆಯ ಸುರಿಮಳೆ

ಸಿಎಂ ಬಸವರಾಜ ಬೊಮ್ಮಾಯಿ ಕುರಿತ ಭಾವನೆಯನ್ನು ಜೆ.ಪಿ. ನಡ್ಡಾ ಮುಕ್ತವಾಗಿ ಹೊರಹಾಕಿದರು. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತ, ʼರಾಜಕೀಯ ಕಾರ್ಯಕರ್ತರು ಸದಾ ಜಾಗೃತಾವಸ್ಥೆಯಲ್ಲಿರಬೇಕು. ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ; ವಾತಾವರಣ ಹೇಗಿದೆ; ವಿಪಕ್ಷಗಳ ಬಗ್ಗೆ ಏನು ಮಾಹಿತಿ ಇದೆ ಎಂಬುದನ್ನು ಅರಿತಿರಬೇಕಾದ ಕುತೂಹಲ ಪ್ರವೃತ್ತಿ ಮತ್ತು ಜವಾಬ್ದಾರಿ ಇರಲೇಬೇಕುʼ ಎಂದ ನಡ್ಡಾ, ಬೊಮ್ಮಾಯಿ ಅವರ ಮಾತನ್ನು ಉಲ್ಲೇಖಿಸಿದರು. “ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಸಿಎಂ ಬಸವರಾಜ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರೆಂಬುದನ್ನು ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ರಾಜಕೀಯ ಕಾರ್ಯಕರ್ತರ ಜೀವನವೇ ಪಕ್ಷವಾಗಬೇಕು. ತಮ್ಮತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಅರಿತಿರಬೇಕು” ಎಂದು ಹೊಗಳಿಕೆಯ ಸುರಿಮಳೆಯನ್ನೇ ಗೈದರು.

ಕಾರ್ಯಕ್ರಮದಲ್ಲಿ ನಡ್ಡಾ ಅವರಿಗೆ ಮುನ್ನ ಮಾತನಾಡಿದ ಬೊಮ್ಮಾಯಿ ಹಾವಭಾವದಲ್ಲೂ ಆತ್ಮವಿಶ್ವಾಸ ಹೆಚ್ಚಾಗಿದ್ದು ಕಾಣುತ್ತಿತ್ತು. ನಡ್ಡಾ ಅವರ ಹೊಗಳಿಕೆ ಇಲ್ಲಿಗೇ ಮುಗಿಯಲಿಲ್ಲ. ಬೆಂಗಳೂರಿನ ಕಾರ್ಯಕ್ರಮದ ನಂತರ ಚಿತ್ರದುರ್ಗಕ್ಕೆ ತೆರಳಿ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಬಂದಿಳಿದ ನಡ್ಡಾ ಅವರಿಗೆ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದರು. ಕಾರ್ಯಕ್ರಮದ ಇಡೀ ಭಾಷಣ ಸಂಘಟನಾತ್ಮಕವಾಗಿ ಹಾಗೂ ಒಬಿಸಿ ಸಮುದಾಯದ ಕುರಿತಾಗಿಯೇ ಇತ್ತು. ಭಾಷಣದ ಪ್ರಾರಂಭದಲ್ಲಿ ವೇದಿಕೆಯಲ್ಲಿದ್ದವರನ್ನು ಪರಿಚಯಿಸುತ್ತ “ಕರ್ನಾಟಕದ ಯಶಸ್ವೀ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ” ಎಂದು ಸಂಬೋಧಿಸಿದರು. ರಾಜ್ಯದಲ್ಲಿ ʼಅಮೃತ ಕರ್ನಾಟಕʼ ಯೋಜನೆ ಉತ್ತಮವಾಗಿ ಅನುಷ್ಠಾನವಾಗುತ್ತಿದೆ. ರಾಜ್ಯ ಬಯಲು ಶೌಚಮುಕ್ತ ರಾಜ್ಯವಾಗಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಬಣ್ಣಿಸಿದ್ದು ಬೊಮ್ಮಾಯಿ ಆತ್ಮವಿಶ್ವಾಸವನ್ನು ನೂರ್ಮಡಿ ಹಿಗ್ಗಿಸಿತು.

ಕಾರ್ಯಕ್ರಮಕ್ಕೆ ತೆರಳುವುದಕ್ಕೂ ಮುನ್ನವೇ ವಿವಿಧ ಮಠಾಧೀಶರೊಂದಿಗೆ ನಡ್ಡಾ ಅವರನ್ನು ಭೇಟಿ ಮಾಡಿಸಲಾಯಿತು. ಮುರುಘಾಮಠಕ್ಕೆ ಭೇಟಿ ನೀಡಿದ ನಡ್ಡಾ ಅವರು ಮುರುಘಾ ಶರಣರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ವಿವಿಧ ಮಠಾಧೀಶರನ್ನು ಅವರು ಭೇಟಿ ಮಾಡಿದರು.

ಮೋದಿ ಕಾರ್ಯಕ್ರಮದ ಸವಾಲು

ನಡ್ಡಾ ಅವರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿ ʼಯಶಸ್ವಿ ಮುಖ್ಯಮಂತ್ರಿʼ ಎಂಬ ಅಭಯ ಪಡೆದ ಸಿಎಂ ಬೊಮ್ಮಾಯಿ ಇದೀಗ ಪ್ರಧಾನಿ ಕಾರ್ಯಕ್ರಮಗಳನ್ನೂ ಯಶಸ್ವಿಗೊಳಿಸುವ ಪಣ ತೊಟ್ಟಿದ್ದಾರೆ. ಈಗಾಗಲೆ ಕಾರ್ಯಕ್ರಮಗಳು ನಡೆಯುವ ಸ್ಥಳಗಳ ವೀಕ್ಷಣೆ ಮಾಡಿ ಸಿದ್ಧತೆ ಪರಿಶೀಲಿಸಿದ್ದಾರೆ. ಮೈಸೂರಿನಲ್ಲಿ ನಡೆಯುವ ಯೋಗ ದಿನದ ಸಿದ್ಧತೆ ಕುರಿತಂತೆ ಈಗಾಗಲೆ ಎರಡು ಬಾರಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದಾರೆ. ಮೋದಿ ಪ್ರವಾಸವನ್ನೂ ಸಫಲವಾಗಿ ಪೂರ್ಣಗೊಳಿಸಿದರೆ ಅಷ್ಟರ ಮಟ್ಟಿಗೆ ತಮ್ಮ ಸ್ಥಾನವನ್ನು ಬೊಮ್ಮಾಯಿ ಗಟ್ಟಿಗೊಳಿಸಿಕೊಳ್ಳಲಿದ್ದಾರೆ.


Exit mobile version