ನವದೆಹಲಿ: ರಾಜ್ಯದಲ್ಲಿ ಸಂಪುಟ ಬದಲಾವಣೆ ಸೇರಿ ಅನೇಕ ವಿಚಾರಗಳು ಚರ್ಚೆಯಾಗುತ್ತಿರುವ ಬೆನ್ನಲ್ಲೆ ತುರ್ತು ಪ್ರವಾಸದಲ್ಲಿ ನವದೆಹಲಿಗೆ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ.
ಭೇಟಿಗೆ ಅವಕಾಶ ನೀಡಿದ್ದ ಅಮಿತ್ ಷಾ, ಅಂತಿಮ ಕ್ಷಣದಲ್ಲಿ ಬೇರೆ ಕಾರ್ಯದ ನಿಮಿತ್ತ ತೆರಳಿದ್ದಾರೆ. ಕೊನೆಗೆ, ಮುಖಾಮುಖಿ ಭೇಟಿ ಮಡಲಾಗದೆ, ದೆಹಲಿಯಲ್ಲಿದ್ದುಕೊಂಡೆ ಅಮಿತ್ ಷಾ ಜತೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳ ಕುರಿತು ಸಿಎಂ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ | ಯತ್ನಾಳ್ ಬಿಜೆಪಿ ಹೈಕಮಾಂಡಾ? ಅವರು ಅಮಿತ್ ಷಾ ಲೆವೆಲ್ಲಿಗಿದ್ದಾರ? ಎಂದು ಪ್ರಶ್ನಿಸಿದ ಬಿ.ಸಿ. ಪಾಟೀಲ್
ರಾಜ್ಯದಲ್ಲಿ ಜೂನ್ ಮೂರರಂದು ಒಟ್ಟು ಏಳು ವಿಧಾನ ಪರಿಷತ್ ಸ್ಥಾನಗಳಿಗೆ ವಿಧಾನ ಪರಿಷತ್‌ನಿಂದ ಚುನಾವಣೆ ನಡೆಯುತ್ತಿದೆ. ಇದರಲ್ಲಿ ನಾಲ್ಕು ಸ್ಥಾನಗಳು ಬಿಜೆಪಿಗೆ ಲಭಿಸುತ್ತವೆ. ಈ ಸ್ಥಾಣಗಳಿಗೆ ಸುಮಾರು ಇಪ್ಪತ್ತು ಹೆಸರುಗಳನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಆಯ್ಕೆ ಮಾಡಿದೆ. ಇಷ್ಟೂ ಹೆಸರನ್ನು ಕೇಂದ್ರ ಬಿಜೆಪಿಗೆ ರವಾನೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರ ಹೆಸರೂ ಇದೆ.
ರಾಜ್ಯದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರ 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ತರಾತುರಿಯಲ್ಲಿ ವಿಧಾನಪರಿಷತ್‌ಗೆ ಆಯ್ಕೆ ಮಾಡಲು ಮುಂದಾಗಲಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ಕೈಗೊಳ್ಳುತ್ತಿರುವ ಈ ನಡೆ ಅಚ್ಚರಿ ಮೂಡಿಸಿದೆ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಈ ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ. ಮುಖ್ಯವಾಗಿ ಇದೇ ವಿಚಾರ ಚರ್ಚೆ ನಡೆಸಲು ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಗೆ ಪ್ರಯಾಣಿಸಿದ್ದರು.
ಇತರೆ ಹೆಸರುಗಳಿಗಿಂತಲೂ ಮುಖ್ಯವಾಗಿ ವಿಜಯೇಂದ್ರ ಹೆಸರು ಯಾವುದೇ ಕಾರಣಕ್ಕೂ ಕೈತಪ್ಪಬಾರದು ಎಂದು, ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಏಪ್ರಿಲ್ 1ರಂದು ಸಿದ್ಧಗಂಗೆಯಲ್ಲಿ ನಡೆದಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಯಲ್ಲಿ ಅಮಿತ್ ಷಾ ಭಾಗವಹಿಸಿದ್ದರು. ಈ ವೇಳೆ ಸಂಪೂರ್ಣ ಸಮಾವೇಶದ ಉಸ್ತುವಾರಿಯನ್ನು ವಿಜಯೇಂದ್ರ ವಹಿಸಿದ್ದರು. ವಿಜಯೇಂದ್ರ ಅವರನ್ನು ಅಮಿತ್ ಷಾ ವೇದಿಕೆಯಿಂದಲೇ ಮುಕ್ತಕಂಠದಿಂದ ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಷಾ ಅವರನ್ನೇ ಭೇಟಿ ಮಾಡಿ ವಿಜಯೇಂದ್ರ ಅವರ ಕುರಿತು ಬೊಮ್ಮಾಯಿ ಮಾತನಾಡುವ ಇಚ್ಛೆ ಹೊಂದಿದ್ದರು. ಆದರೆ, ಮುಖಾಮುಖಿ ಭೇಟಿಗೆ ನಿಗದಿಪಡಿಸಿದ್ದ ಸಭೆಯನ್ನು ಅಮಿತ್ ಷಾ ರದ್ದುಪಡಿಸಿರುವುದನ್ನು ಕಂಡರೆ ಈ ಕುರಿತು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.
ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಅಮಿತ್ ಶಾ ಅವರ ಸೂಚನೆಯಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತನಾಡಿ ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗೆ ಕಳುಹಿಸಲಾಗಿರುವ ಪಟ್ಟಿಯ ಬಗ್ಗೆ ವಿವರಗಳನ್ನು ನೀಡಲಾಗಿದೆ. ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮೇ 24 ಕಡೇ ದಿನಾಂಕ. ತುರ್ತಾಗಿ ನಿರ್ಣಯಗಳನ್ನು ಕೈಗೊಳ್ಳಬೇಕಿದೆ. ರಾಜ್ಯಸಭೆ ಚುನಾವಣೆಗೆ 31 ರವರೆಗೆ ಸಮಯಾವಕಾಶವಿದೆ. ಕೋರ್ ಕಮಿಟಿ ಚರ್ಚೆಯ ನಿರ್ಣಯಗಳ ಬಗ್ಗೆ ಅರುಣ್ ಸಿಂಗ್ ಅವರಿಗೆ ತಿಳಿಸಲಾಗಿದೆ. ಆದಷ್ಟು ಬೇಗನೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆಯಾಗಿಲ್ಲ. ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಅರುಣ್ ಸಿಂಗ್ ಜತೆ ಸಭೆ ನಡೆಸಿದ ಕೂಡಲೆ ಬೆಂಗಳೂರಿನತ್ತ ಸಿಎಂ ಹೊರಟಿದ್ದಾರೆ. ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ವಿವಿಧೆಡೆ ಪ್ರವಾಸ, ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ | ಬಿ.ವೈ ವಿಜಯೇಂದ್ರಗೆ ಪರಿಷತ್ ಟಿಕೆಟ್ ಪಕ್ಕಾ