Site icon Vistara News

ರೋಹಿತ್‌ ʼಚಕ್ರವ್ಯೂಹʼದಲ್ಲಿ CM ಬಸವರಾಜ ಬೊಮ್ಮಾಯಿ: ಇಂದು ಕ್ಲೈಮ್ಯಾಕ್ಸ್‌?

basavaraj bommai trying to escape from controversy

ಬೆಂಗಳೂರು: ಪಠ್ಯಪುಸ್ತದ ವಿಷಯಕ್ಕಿಂತಲೂ ಹೆಚ್ಚಾಗಿ ಪಠ್ಯಪುಸ್ತಕ ಪರಿಷ್ಕರಣೆಗೆ ರಚನೆ ಮಾಡಿದ್ದ ಸಮಿತಿ ಹಾಗೂ ಅದರ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಟಿಪ್ಪು ಸುಲ್ತಾನ ಪಠ್ಯದಿಂದ ವಿವಾದ ಆರಂಭವಾದಾಗ ಧೈರ್ಯದಿಂದ ಮುನ್ನುಗ್ಗುತ್ತಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇದೀಗ ಬಸವಣ್ಣ, ರಾಷ್ಟ್ರಕವಿ ಕುವೆಂಪು ವಿಚಾರ ತಳುಕುಹಾಕಿಕೊಂಡಾಗ ಸಂಕಷ್ಟಕ್ಕೊಳಗಾಗಿದೆ.

ಅಸಲಿಗೆ ಈ ವಿವಾದ ಶುರವಾಗಿದ್ದು ಟಿಪ್ಪು ಪಠ್ಯ ಕೈಬಿಟ್ಟ ಕುರಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ರಚಿಸಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರಚಿಸಿದ್ದ ಪಠ್ಯಪುಸ್ತಕದಲ್ಲಿ ಯಜ್ಞ ಯಾಗಗಳ ಕುರಿತು ಸುಳ್ಳು ಮಾಹಿತಿ ನೀಡಲಾಗಿದೆ ಎಂಬ ಆರೋಪವಿತ್ತು. ಟಿಪ್ಪುವನ್ನು ಅನಗತ್ಯವಾಗಿ ವೈಭವೀಕರಿಸಲಾಗಿದೆ ಎಂಬುದು ಬಿಜೆಪಿ ಆರ್‌ಎಸ್‌ಎಸ್‌ ವಲಯದಲ್ಲಿದ್ದ ಆಕ್ರೋಶ.

ಈ ಸಮಸ್ಯೆಯನ್ನು ಸರಿಪಡಿಸಲು ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಯಿತು. ಅನೇಕ ತಿಂಗಳೂ ಕಾರ್ಯನಿರ್ವಹಿಸಿದ ಸಮಿತಿ ಕೇವಲ ಒಂದೆರಡು ವಿಷಯ ಬದಲಿಸಲು ಸೀಂಇತವಾಗಲಿಲ್ಲ. ಕನ್ನಡ ಹಾಗೂ ಸಮಾಜವಿಜ್ಞಾನದ ಪಠ್ಯ ಪರಿಷ್ಕರಣೆಯನ್ನೂ ಕೈಗೆತ್ತಿಕೊಂಡಿತು. ಟಿಪ್ಪು ಸುಲ್ತಾನ್‌ ಪಾಠವನ್ನು ಕೈಬಿಡಲಾಗಿದೆ ಎಂಭ ಸುದ್ದಿ ಪ್ರಾರಂಭದಲ್ಲಿ ಹರಿದಾಡಿದವು. ಇದಕ್ಕೆ ಉತ್ತರಿಸಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಸದ್ಯಕ್ಕೆ ಟಿಪ್ಪುವಿನ ಸಂಪೂರ್ಣ ಪಠ್ಯವನ್ನು ತೆಗೆಯಲು ಹೋಗಿಲ್ಲ. ಅನಗತ್ಯ ಎನ್ನಿಸಿದ, ಉತ್ಪ್ರೇಕ್ಷೆಯಿಂದ ಕೂಡಿದ ಅಂಶಗಳನ್ನು ತೆಗೆದಿದ್ದೇವೆ. ಈ ರೀತಿ ಇತರೆ ವಿಚಾರಗಳಲ್ಲೂ ಮಾಡಿದ್ದೇವೆ. ಟಿಪ್ಪುವಿನ ಕುರಿತು ಹೇಳಲಾಗುವ ʼಮೈಸೂರು ಹುಲಿʼ ಬಿರುದನ್ನೂ ತೆಗೆದಿಲ್ಲ. ಮುಂದಿನ ವಾರದಲ್ಲಿ ಪಠ್ಯದ ಕುರಿತು ಪೂರ್ಣ ಮಾಹಿತಿಯನ್ನು ನೀಡುತ್ತೇನೆ ಎಂದಿದ್ದರು.

ಆನಂತರದಲ್ಲಿ ಇಡೀ ಚರ್ಚೆ ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೆವಾರ್‌ ಕುರಿತು ಹೊರಳಿತು. ಹೆಡಗೆವಾರ್‌ ಅವರ ಬಗ್ಗೆ ಪಾಠ ಇದೆ ಎಂದು ಪ್ರಾರಂಭದಲ್ಲಿ ಹೇಳಲಾಯಿತು. ನಂತರ, ಅದು ಹೆಡಗೆವಾರ್‌ ಕುರಿತ ಪಾಠವಲ್ಲ, ಆದರ್ಶ ವ್ಯಕ್ತಿಗಳ ಕುರಿತು ಹೆಡಗೆವಾರ್‌ ಮಾಡಿರುವ ಭಾಷಣ ಎಂದು ತಿಳಿಯಿತು. ಇಷ್ಟಕ್ಕೆ ತಣ್ಣಗಾಗದ ವಿವಾದ, ಹೆಡಗೆವಾರ್‌ ಭಾಷಣದಲ್ಲಿದ್ದ ಭಗವಾಧ್ವಜವನ್ನು ಕೇವಲ ಧ್ವಜ ಎಂದು ಸಮಿತಿ ಬದಲಾಯಿಸಿ ಮೋಸ ಮಾಡುತ್ತಿದೆ ಎನ್ನಲಾಯಿತು.

ಇದನ್ನೂ ಓದಿ | ʼವಿವಾದದ ಚಕ್ರತೀರ್ಥʼದಲ್ಲಿ ಪಠ್ಯಪುಸ್ತಕ : ಹೊಸ ಪಠ್ಯವನ್ನು ತಡೆಹಿಡಿಯಲು ಹಂಪನಾ ಆಗ್ರಹ

ಇಷ್ಟೆಲ್ಲ ಸಮಯದಲ್ಲಿ ಸರ್ಕಾರವು ಬಲವಾದ ಸಮರ್ಥನೆ ಮಾಡಿಕೊಳ್ಳುತ್ತಿತ್ತು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಅತ್ಯಂತ ಸಮರ್ಥವಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದರು. ಆರ್‌ಎಸ್‌ಎಸ್‌ ಸಂಸ್ಥಾಪಕರ ಪಾಠ ಸೇರಿಸಿದರೆ ತಪ್ಪೇನು? ಎನ್ನುತ್ತಿದ್ದರು. ಬಿಜೆಪಿಯ ಅನೇಕ ಸಚಿವರು, ಕೇಂದ್ರದ ನಾಯಕರೂ ಇದಕ್ಕೆ ದನಿಗೂಡಿಸುತ್ತಿದ್ದರು. ಆದರೆ ಇಡೀ ವಿವಾದ ರಾಷ್ಟರ್ಕವಿ ಕುವೆಂಪು ಕಡೆಗೆ ತಿರುಗಿತು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ 2017ರಲ್ಲಿ ಮಾಡಿದ್ದ ಫೇಸ್‌ಬುಕ್‌ ಪೋಸ್ಟ್‌ ಇದೀಗ ಐದು ವರ್ಷದ ನಂತರ ಕಾಡಲಾರಂಭಿಸಿತು. ನಾಡಗೀತೆಯನ್ನು ತಿರುಚಿ ವ್ಯಂಗ್ಯವಾಗಿ ಬರೆದಿದ್ದ ಸಾಲುಗಳನ್ನು ಚಕ್ರತೀರ್ಥ ಷೇರ್‌ ಮಾಡಿದ್ದರು. ಇದು ವಾಟ್ಸ್‌ಅಪ್‌ನಿಂ ಬಂದ ಸಂದೇಶ ಎಂದೂ ಅದರಲ್ಲಿ ನಮೂದಿಸಿದ್ದರು. ಆದರೆ ಈಗ ವಿವಾದಕ್ಕೆ ಅಷ್ಟು ಸಾಕಾಗಿತ್ತು. ಪಠ್ಯಪುಸ್ತಲದಲ್ಲಿ ಕುವೆಂಪು ಅವರ ಪರಿಚಯವನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ ಎಂಬ ಆರೋಪಕ್ಕೆ ರೋಹಿತ್‌ ಚಕ್ರತೀರ್ಥ ಅವರ ಫೇಸ್‌ಬುಕ್‌ ಪೋಸ್ಟ್‌ ತಳುಕು ಹಾಕಿಕೊಂಡಿತು.

ಕುವೆಂಪು ಅವರ ಪರಿಚಯವನ್ನು ಬರಗೂರು ರಾಂಚಂದ್ರಪ್ಪ ಸಮಿತಿಯೇ ಮಾಡಿದ್ದು ಎಂದು ಬಿ.ಸಿ. ನಾಗೇಶ್‌, ರೋಹಿತ್‌ ಚಕ್ರತೀರ್ಥ ಹೇಳಿದ್ದು ಯಾರಿಗೂ ಕೇಳಲೇ ಇಲ್ಲ. ಹಿರಿಯ ಸಾಹಿತಿ ಹಂಪನಾ ಸೇರಿ ಸಾಲುಸಾಲಾಗಿ ಅನೇಕರು ಸರ್ಕಾರದ ವಿವಿಧ ಸಮಿತಿಗಳಿಗೆ ರಾಜೀನಾಮೆ ನೀಡುವುದರ ಮೂಲಕ ʼಹುದ್ದೆ ವಾಪ್ಸಿʼ ಅಭಿಯಾನ ಆರಂಭಿಸಿದರು. ರೋಹಿತ್‌ ಚಕ್ರತೀರ್ಥ ತಲೆದಂಡಕ್ಕೆ ಒತ್ತಾಯಿಸಿದರು. ನಾಡಗೀತೆ, ಕುವೆಂಪು ವಿಚಾರ ಬಂದ ಕೂಡಲೆ ರಾಜ್ಯದ ಒಕ್ಕಲಿಗ ಸಂಘಟನೆಗಳು ಮೇಲೆದ್ದವು. ಕರ್ನಾಟಕ ರಕ್ಷಣಾ ವೇದಿಕೆ ಸಹ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದವು. ಇದರ ಬೆನ್ನಿಗೇ ಆದಿಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದರು. ಆಗ ಇಡೀ ಪ್ರಕರಣ ಹೊಸ ತಿರುವು ಪಡೆಯಿತು.

ನಾಡಗೀತೆ ಹಾಗೂ ಕುವೆಂಪು ಅವರಿಗೆ ಅವಮಾನ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿಯವರು ಪತ್ರ ಬರೆದದ್ದು ನೇರವಾಗಿ ಸಿಎಂ ಬೊಮ್ಮಾಯಿ ಅವರಿಗೇ ತಟ್ಟಿತು. ಈ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಿರ್ಮಲಾನಂದನಾಥ ಸ್ವಾಮೀಜಿಯವರ ಪತ್ರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಶೀಘ್ರದಲ್ಲೆ ನಿರ್ಧಾರ ಮಾಡುತ್ತೇನೆ ಎಂದಿದ್ದರು.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಅನೇಕ ಹೊತ್ತು ಚರ್ಚೆಗೆ ಬಂದಿದೆ. ನಿರ್ಮಲಾನಂದನಾಥ ಸ್ವಾಮೀಜಿಯವರ ಪತ್ರಕ್ಕೆ ನಾವು ಕ್ರಮ ಕೈಗೊಳ್ಳದೆ ಇದ್ದರೆ ತಪ್ಪು ಸಂದೇಶ ಹೋಗುತ್ತದೆ. ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಚುನಾವಣೆ ವೇಳೆ ಕಷ್ಟವಾಗುತ್ತದೆ ಎಂದು ಅನೇಕ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ರೋಹಿತ್‌ ಚಕ್ರತೀರ್ಥ ಅವರ ರಾಜೀನಾಮೆ ಪಡೆದರೆ ಸಂಘ ಪರಿವಾರದ ವಲಯದಲ್ಲಿ ಸಂಕಷ್ಟ ಎದುರಾಗುತ್ತದೆ. ಹೀಗಾಗಿ ಏನು ಮಾಡಬೇಕೆಂದು ಚರ್ಚೆ ನಡೆದಿದೆ.

ಇದಕ್ಕೆ ಪರಿಹಾರವಾಗಿ, ಸ್ವತಃ ತಾವೇ ಸ್ವಾಮೀಜಿಯವರನ್ನು ಭೇಟಿ ಮಾಡಿ ಮನವೊಲಿಕೆ ಮಾಡುತ್ತೇನೆ ಎಂದು ಸಚಿವ ನಾಗೇಶ್‌ ಹೊಣೆ ಹೊತ್ತಿದ್ದರು. ಅಂದೇ ಬೆಂಗಳೂರಿನ ವಿಜಯನಗರದ ಶಾಖಾ ಮಠಕ್ಕೆ ತೆರಳಿದ ನಾಗೇಶ್‌ ಸ್ವಾಮೀಜಿಯವರಿಗೆ ಪಠ್ಯಪುಸ್ತಕದಲ್ಲಾದ ಬದಲಾವಣೆಯನ್ನು ವಿವರಿಸಿದರು. ಜತೆಗೆ, ರೋಹಿತ್‌ ಚಕ್ರತೀರ್ಥ ವಿರುದ್ಧ ಸಿದ್ದರಾಮಯ್ಯ ಸರ್ಕಾರದಲ್ಲಿ ದಾಖಲಾಗಿದ್ದ ಪ್ರಕರಣ, ಅದಕ್ಕೆ ಬಿ, ರಿಪೋರ್ಟ್‌ ಸಲ್ಲಿಕೆಯಾಗಿದ್ದನ್ನೂ ವಿವರಿಸಿದ್ದಾರೆ.

ಇದಕ್ಕೆ ಬೆನ್ನ ಹಿಂದೆಯೇ ರೋಹಿತ್‌ ಚಕ್ರತೀರ್ಥ ಸಹ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು. ಅನವಶ್ಯಕವಾಗಿ ತಮ್ಮ ತೇಜೋವಧೆ ಮಾಡಬಾರದು ಎಂದು ವಿನಂತಿ ಮಾಡಿದರು. ನನ್ನನ್ನು ಕುವೆಂಪು ವಿರೋಧಿ ಎಂಬ ರೀತಿಯಲ್ಲಿ
ನಾಡಿನಾದ್ಯಂತ ಬಿಂಬಿಸಲು ನೋಡುತ್ತಿರುವುದು ನನಗಂತೂ ಮನಸ್ಸಿಗೆ ಘಾಸಿಯನ್ನು ಮಾಡಿದೆ. ನನ್ನ ಕನ್ನಡಪ್ರೀತಿ,
ಕುವೆಂಪು ಪ್ರೀತಿ ಪ್ರಶ್ನಾತೀತವಾಗಿದೆ. ಯಾರೋ ಬರೆದ ಸಾಲುಗಳನ್ನು, ಅವು ಬೇರೆಯವರದು ಎಂದು ನಾನೇ ಸ್ವತಃ
ಉಲ್ಲೇಖಿಸಿದ್ದ ಹೊರತಾಗಿಯೂ, ನನ್ನದೇ ಎಂಬಂತೆ ಬಿಂಬಿಸಿ ನನ್ನ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕೆಲಸವನ್ನು
ಮಾಡುತ್ತಿರುವವರ ಬಗ್ಗೆ ನನಗೆ ಅಪಾರ ದುಃಖ, ಬೇಸರಗಳಿವೆ ಎಂದರು.

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ನಾಗೇಶ್‌ ಅವರು ವರದಿ ನೀಡುವುದಾಗಿ ಹೇಳಿದ್ದಾರೆ. ಅವರು ಯಾವ ಸಮರ್ಥನೆ ನೀಡುತ್ತಾರೆ ಎಂಬುದರ ಆಧಾರದಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದರು. ಬುಧವಾರ ಉಡುಪಿಯಲ್ಲಿಯೂ ಇದೇ ಮಾತನ್ನು ಬೊಮ್ಮಾಯಿ ಹೇಳಿದ್ದು, ತೀರ್ಮಾನ ಕೈಗೊಳ್ಳಲು ಹೆಣಗಾಡುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸಿದೆ.

ಚುನಾವಣಾ ಸಮಯದಲ್ಲಿ ಎದುರಾದ ಈ ಸಂಕಷ್ಟದಿಂದ ಹೊರಬಂದರೆ ಸಾಕು ಎಂಬಂತಾಗಿದೆ ಸಿಎಂ ಬೊಮ್ಮಾಯಿ ಅವರಿಗೆ. ರೋಹಿತ್‌ ಚಕ್ರತೀರ್ಥ ಅವರು ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಚಕ್ರತೀರ್ಥ ಅವರನ್ನು ವಜಾ ಮಾಡಿದರೆ ಸಂಘಪರಿವಾರದ ವಿರೋಧ, ವಜಾ ಮಾಡದಿದ್ದರೆ ಆದಿಚುಂಚನಗಿರಿ ಪೀಠಕ್ಕೆ ಅಗೌರವ ಆರೋಪ. ರೋಹಿತ್‌ ಚಕ್ರತೀರ್ಥ ಅವರ ಕುರಿತು ಸುತ್ತಿಕೊಂಡಿರುವ ಚಕ್ರವ್ಯೂಹದಿಂದ ಬೊಮ್ಮಾಯಿ ಹೇಗೆ ಹೊರಬರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ | ʼಹುದ್ದೆ ವಾಪ್ಸಿʼ ಅಭಿಯಾನ: ರೋಹಿತ್‌ ಚಕ್ರತೀರ್ಥ ತಲೆದಂಡಕ್ಕಾಗಿ ಸಾಲುಸಾಲು ರಾಜೀನಾಮೆ

Exit mobile version