Site icon Vistara News

BJP Karnataka: ಟಿಕೆಟ್‌ ಘೋಷಣೆ ಬೆನ್ನಲ್ಲೇ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ದೇವರ ಮೊರೆ ಹೋದ ಸಿಎಂ ಬಸವರಾಜ ಬೊಮ್ಮಾಯಿ

C M Basavaraj Bommai at India Today Interview.

ಬೆಂಗಳೂರು: ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿದ ನಂತರ ಬೆಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ತೀರ್ಥ ಕ್ಷೇತ್ರಗಳ ಯಾತ್ರೆ ಕೈಗೊಂಡಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ಪ್ರವಾಸಕ್ಕೆ ಬೊಮ್ಮಾಯಿ ತೆರಳಿದರು.

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಬೊಮ್ಮಾಯಿ, ರಾಜ್ಯದ 189 ಸ್ಥಳಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಎಲ್ಲರೂ ಬಹುಮತದಿಂದ ಆಯ್ಕೆಯಾಗಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ.

ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಒಮ್ಮತದ ಸ್ವಾಗತ ದೊರೆತಿದೆ. ಕೆಲವು ಅಸಮಧಾನಿತರ ಜೊತೆ ಮಾತಾಡುವ ಕೆಲಸ ನಡೆದಿದೆ. ಲಕ್ಷ್ಮಣ ಸವದಿ ಅವರೊಂದಿಗೆ ಮಾತಾಡಿದ್ದು, ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ತಿಳಿಸಿದ್ದೇವೆ. ಸವದಿ ಜತೆ ಭಾವನಾತ್ಮಕವಾದ ಸಂಬಂಧ ಇದೆ. ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು,
ಅವರು ಕಷ್ಟದಲ್ಲಿದ್ದಾಗ ಪಕ್ಷ ಕೈ ಹಿಡಿದಿದೆ. ಮುಂದೆಯೂ ಅವರ ಕೈ ಹಿಡಿಯುತ್ತದೆ. ಅವರ ಗೌರವ ಕಾಪಾಡಲು ಒಳ್ಳೆಯ ನಿರ್ಧಾರ ಮಾಡಲಾಗುತ್ತದೆ. ಅವರಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ ಎಂದರು.

ಬೊಮ್ಮಾಯಿ ಅವರು ಕಾಂಗ್ರೆಸ್‌ಗೆ ಸೇರುತ್ತಿದ್ದರು ಎಂಬ ಸವದಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ವಿಚಾರ ಅಪ್ರಸ್ತುತ. ನಾನು ನನ್ನ ಮನೆಯಲ್ಲಿ ಮಾತ್ರ ಕೂತಿದ್ದೆ. ನಾನು ಯಾವ ಪಕ್ಷಕ್ಕೂ ಹೋಗಿರಲಿಲ್ಲ. ನಾನು ಸ್ಥಿತಪ್ರಜ್ಞ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅನಂತ ಕುಮಾರ್ , ಸಿ.ಸಿ ಪಾಟೀಲ್, ಸವದಿ ಬಂದಿದ್ದು ನಿಜ.
ಆದರೆ ಕಾಂಗ್ರೆಸ್‌ಗೆ ನಾನು ಹೋಗುತ್ತಿರಲಿಲ್ಲ. ಮಹತ್ವಾಕಾಂಕ್ಷೆಗಳು ಇರಲಿಲ್ಲ ಎಂದರು.

ಆಕಾಂಕ್ಷಿಗಳ ಭೇಟಿ

ಟಿಕೆಟ್‌ ಘೋಷಣೆ ಆಗುತ್ತಿರುವಂತೆ ಆಕಾಂಕ್ಷಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಹೊಸಕೋಟೆಯಲ್ಲಿ ತಮ್ಮ ಬದಲಿಗೆ ಪುತ್ರನಿಗೆ ಟಿಕೆಟ್‌ ನೀಡುವಂತೆ ಕೋರಿದ್ದರೂ ತಮಗೇ ಟಿಕೆಟ್‌ ಕೊಟ್ಟಿರುವ ಬಗ್ಗೆ ಮಾತನಾಡಲು ಸಚಿವ ಎಂ.ಟಿ.ಬಿ. ನಾಗರಾಜ್‌ ಆಗಮಿಸಿದರು. ಆದರೆ ನಿಮ್ಮ ಸ್ಪರ್ಧೆ ನಿರ್ಧಾರವನ್ನು ಹೈಕಮಾಂಡ್ ನಾಯಕರು ಮಾಡಿದ್ದು. ಇದನ್ನು ಬದಲಾವಣೆ ಮಾಡೋಕೆ ಸಾಧ್ಯ ಇಲ್ಲ, ಹೋಗಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ ಎನ್ನಲಾಗಿದೆ. ಬೊಮ್ಮಾಯಿ ಮಾತಿಂದ ಬೇಸರಗೊಂಡೇ ಎಂಟಿಬಿ. ನಾಗರಾಜ್‌ ತೆರಳಿದರು.

ಮಾಧ್ಯಮಗಳ ಜತೆಗೆ ಮಾತನಾಡುವಾಗ ಸಿಎಂ ಪಕ್ಕದಲ್ಲೇ ನಿಂತಿದ್ದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಟಿಕೆಟ್ ಸಿಕ್ಕಿಲ್ಲ ಎಂದು ಹೇಳಿದರು. ಇದಕ್ಕೆ ಅಸಮಾಧಾನಗೊಂಡ ಸಿಎಂ, ಇನ್ನೂ ಅನೌನ್ಸ್ ಮಾಡಿಲ್ಲ ಅಷ್ಟೇ. ಇಲ್ಲ ಅಂತ ನೀವು ಹೇಗೆ ಡಿಸೈಡ್ ಮಾಡ್ತೀರ? ಎರಡನೇ ಪಟ್ಟಿ ಇದ್ಯಲ್ಲ? ಪಕ್ಷ ನಿರ್ಧಾರ ಮಾಡುತ್ತದೆ ಎಂದು ಗದರಿದರು.

ಇದನ್ನೂ ಓದಿ: Karnataka Election: ಅಭ್ಯರ್ಥಿಗಳ ಮೊದಲ ಪಟ್ಟಿಯೇ ಬಿಜೆಪಿ ಗೆಲುವಿಗೆ ದಿಕ್ಸೂಚಿ: ಸಿಎಂ ಬೊಮ್ಮಾಯಿ

Exit mobile version