Site icon Vistara News

Rain News | ಬೆಂಗಳೂರು-ಮೈಸೂರು ಹೆದ್ದಾರಿ ಕಾಲುವೆಗಳು ಮುಚ್ಚಿದ್ದಕ್ಕೆ ಪ್ರವಾಹ; ಸಿಎಂ ಬೊಮ್ಮಾಯಿ

Rain News

ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದ ಹಲವೆಡೆ ಕಾಲುವೆಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಮಳೆಯಿಂದ (Rain News) ಪ್ರವಾಹ ಸ್ಥಿತಿ ಉಂಟಾಗಿ ಮಾರ್ಗ ಜಲಾವೃತವಾಗಿದೆ. ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಮನಗರ ಹಾಗೂ ಚನ್ನಪಟ್ಟಣದ ಮಳೆ ಹಾನಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹೆದ್ದಾರಿ ಬಳಿಯ ಕಾಲುವೆಗಳನ್ನು ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲು ತಿಳಿಸಿದ್ದೇನೆ. ಒಂದು ವೇಳೆ ಅವರು ತೆರವುಗೊಳಿಸದಿದ್ದಲ್ಲಿ ಅವರಿಗಾಗಿ ಕಾಯದೆ ರಾಜ್ಯ ಸರ್ಕಾರದಿಂದಲೇ ಕಾಲುವೆಗಳನ್ನು ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು ಹಳ್ಳಿಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ವಿಶೇಷವಾಗಿ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದ ಜಮೀನು, ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಹೀಗಾಗಿ ಮಳೆಹಾನಿ ಪರಿಹಾರ ಕ್ರಮ ಕೈಗೊಳ್ಳಲು ರಾಮನಗರ, ಮಂಡ್ಯ, ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | RAIN NEWS: ಬೆಂಗಳೂರು-ಮೈಸೂರು ರೋಡ್‌ಗೆ ನುಗ್ಗಿದ ನೀರು, ಸಂಚರಿಸಬೇಡಿ ಎಂದು ಮನವಿ ಮಾಡಿದ ಎಚ್‌ಡಿಕೆ

ರಾಮನಗರದಲ್ಲಿ ದೊಡ್ಡ ಕೆರೆ ಏರಿ ಒಡೆದು ಅಪಾರ ನಷ್ಟವಾಗಿದೆ. ಮಾಗಡಿಯಲ್ಲೂ ಸಹ ಕಳೆದ ಬಾರಿ ನಷ್ಟ ಆಗಿ
ಒಟ್ಟು 2,220 ಮನೆಗಳಿಗೆ ಹಾನಿಯಾಗಿತ್ತು. ಚನ್ನಪಟ್ಟಣದಲ್ಲಿ ಒಂದು, ರಾಮನಗರದಲ್ಲಿ ಒಂದು ಪ್ರಾಣಹಾನಿಯಾಗಿದೆ. 600 ಎಕರೆ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟವಾಗಿದೆ. ಮಳೆಯಿಂದ ಬಿದ್ದಿರುವ ಮನೆಗಳಿಗೆ ತಕ್ಷಣ 1 ಲಕ್ಷ ರೂಪಾಯಿ ಹಾಗೂ ಒಟ್ಟಾರೆ 5 ಲಕ್ಷ ರೂ. ಪರಿಹಾರವನ್ನು ಹಂತ ಹಂತವಾಗಿ ನೀಡಲಾಗುವುದು ಎಂದ ಸಿಎಂ, ಭಕ್ಷಿ ಕೆರೆಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿಎಂ ಮಳೆಹಾನಿ ಪ್ರದೇಶಗಳ ವೀಕ್ಷಣೆ ವೇಳೆ ಕಂದಾಯ ಸಚಿವ ಆರ್. ಅಶೋಕ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತಿತರರು ಇದ್ದರು.

ಮಳೆ ಸಂತ್ರಸ್ತರಿಗೆ ಸಾಂತ್ವನ
ರಾಮನಗರದಲ್ಲಿ ಭಕ್ಷಿ ಹಾಗೂ ಕ್ಷೇತ್ರಹಳ್ಳಿ ಕೆರೆಗಳು ಒಡೆದು ಹುಣಸನಹಳ್ಳಿ ರಸ್ತೆಯಲ್ಲಿ ನೀರು ನುಗ್ಗಿ ಮನೆಗಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಕೂಡಲೇ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ನೀರು ನುಗ್ಗಿ ರೇಷ್ಮೆ ನೂಲು ತೆಗೆಯುವ ಘಟಕಗಳ ಹಾನಿಯಾದ ಸ್ಥಳ ಪರಿಶೀಲಿಸಿದರು. ಬಳಿಕ ರಾಮನಗರದ ಟಿಪ್ಪು ನಗರ, ರೆಹಮಾನಿ ನಗರಕ್ಕೆ ತೆರಳಿದಾಗ ಮಳೆಯಿಂದ ರೇಷ್ಮೆ ಬೆಳೆ ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಬಸವನಪುರ ಗ್ರಾಮದಲ್ಲಿ ಹೆದ್ದಾರಿಯಿಂದ ನೀರು ನುಗ್ಗಿ ಹಾನಿಗೊಂಡ ಪ್ರದೇಶಗಳನ್ನು ಸಹ ಮುಖ್ಯಮಂತ್ರಿ ಬೊಮ್ಮಾಯಿ ವೀಕ್ಷಿಸಿದರು.

ಅಲ್ಲಿಂದ ಚನ್ನಪಟ್ಟಣದ ಶೇರ್ವಾ ಹೋಟೆಲ್, ತಟ್ಟೇಕೆರೆ, ಗಾಂಧಿನಗರ ಕಾಲನಿ, ಬೀಡಿ ಕಾಲನಿ ಹಾಗೂ ತಿಟ್ಟಮಾರನಹಳ್ಳಿಯಲ್ಲಿ ಮಳೆಹಾನಿಯನ್ನು ಸಿಎಂ ವೀಕ್ಷಣೆ ಮಾಡಿದರು. ಚನ್ನಪಟ್ಟಣ ತಾಲೂಕಿನ ಕೂಲೂರು ಗಾಂಧಿಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ “ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಮನೆಗೆ ನೀರು ನುಗ್ಗಿದೆ” ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಕೂಡಲೇ ಈ ಬಗ್ಗೆ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದರು.

ಕಾಮತ್ ಹೋಟೆಲ್‌ನಲ್ಲಿ ಕಾಫಿ, ತಿಂಡಿ ಸವಿದ ಸಿಎಂ
ರಾಮನಗರ ಜಿಲ್ಲೆಯ ವಿವಿಧೆಡೆ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ಹಿನ್ನೆಲೆಯಲ್ಲಿ ಸುಸ್ತಾದ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಮನಗರದ ಕಾಮತ್ ಹೋಟೆಲ್‌ನಲ್ಲಿ ಕಾಫಿ, ತಿಂಡಿ ಸವಿದರು. ಈ ವೇಳೆ ಸಿಎಂಗೆ ಕಂದಾಯ ಸಚಿವ ಆರ್.ಅಶೋಕ್, ಸಚಿವ ಅಶ್ವತ್ಥನಾರಾಯಣ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು. ತಿಂಡಿ ಸವಿದ ಬಳಿಕ ಸಿಎಂ ಬೆಂಗಳೂರಿಗೆ ವಾಪಸಾದರು. ಜಿಲ್ಲೆಗೆ ಮಳೆ ಹಾನಿ ವೀಕ್ಷಣೆಗೆ ಹೆಲಿಕಾಪ್ಟರ್‌ನಲ್ಲಿ ಬಂದ ಸಿಎಂ ಬೊಮ್ಮಾಯಿ, ಬಳಿಕ ರಸ್ತೆ ಮಾರ್ಗದ ಮೂಲಕ ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು.

ಇದನ್ನೂ ಓದಿ | Rain News | ಹಾವೇರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜನರ ಪರದಾಟ; ಸಂಪರ್ಕ ಕಡಿತ

Exit mobile version