ಬೆಳಗಾವಿ: ಹೃದಯಾಘಾತದಿಂದ ನಿಧನರಾಗಿದ್ದ ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ (47) ಅವರ ಅಂತ್ಯಕ್ರಿಯೆಯನ್ನು ಹುಟ್ಟೂರು ರಾಮದುರ್ಗದ ತೇರ್ ಬಜಾರ್‌ನ ಲಿಂಗಾಯತ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ನೆರವೇರಿಸಲಾಯಿತು.
ಗುರುಲಿಂಗ ಸ್ವಾಮಿ ಸೋಮವಾರ (ಆ.22) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು. ನಾಗರಭಾವಿಯಲ್ಲಿರುವ ಮನೆಯ ಬಳಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಕಂಬನಿ ಮಿಡಿದಿದ್ದ ಸಿಎಂ
ಬೆಂಗಳೂರಿನಲ್ಲಿ ಸೋಮವಾರ ಗುರುಲಿಂಗಸ್ವಾಮಿ ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದರು. ತಮ್ಮ ಬಹು ವರ್ಷಗಳ ಕಿರಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದರು. ಸೋಮವಾರ ಸಂಜೆಯೇ ಗುರುಲಿಂಗಸ್ವಾಮಿಗಳ ಹುಟ್ಟೂರಿಗೆ ಆ್ಯಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರ ರವಾನಿಸಲಾಯಿತು. ಮಗನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬೆಳಗಾವಿ ಎಸ್‌ಪಿ
ರಾಮದುರ್ಗ ಪಟ್ಟಣದ ತೇರ್ ಬಜಾರ್‌ನಲ್ಲಿರುವ ಗುರುಲಿಂಗಸ್ವಾಮಿ ಮನೆಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಗುರುಲಿಂಗ ಸ್ವಾಮಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಎಸ್‌ಪಿ ಸಂಜೀವ್ ಪಾಟೀಲರಿಗೆ ಡಿವೈಎಸ್‌ಪಿ ರಾಮನಗೌಡ ಹಟ್ಟಿ ಉಪಸ್ಥಿತರಿದ್ದರು.
ಅಂತಿಮ ಯಾತ್ರೆ ಮೂಲಕ ವಿದಾಯ
ಬೆಳಗ್ಗೆ 11.30 ಕ್ಕೆ ತೇರ್ ಬಜಾರ್ ಮನೆಯಿಂದ ರಾಮದುರ್ಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಸಲಾಯಿತು. ಬಳಿಕ ಲಿಂಗಾಯತ ರುದ್ರಭೂಮಿಯಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಾಸಕ ಮಹಾದೇವಪ್ಪ ಯಾದವಾಡ, ಮುಳ್ಳೂರು ಗ್ರಾಮದ ಚಂದ್ರಶೇಖರ ಸ್ವಾಮೀಜಿ ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದರು.
ಇದನ್ನೂ ಓದಿ | ಮಾನವೀಯತೆ, ಸಹೃದಯತೆ ತುಂಬಿದ ಅಪರೂಪದ ಪತ್ರಕರ್ತ ಗುರುಲಿಂಗಸ್ವಾಮಿ: ಹರಿಪ್ರಕಾಶ್ ಕೋಣೆಮನೆ ಕಂಬನಿ