ಬೆಂಗಳೂರು: ಮಳೆ ಹಾನಿಯಿಂದಾಗಿ ಕಷ್ಟ ನಷ್ಟಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಯಾವುದೇ ಮನೆಗೆ ಸ್ವಲ್ಪ ಹಾನಿಯಾದರೂ ಕೂಡಲೆ ಹತ್ತು ಸಾವಿರ ರೂ. ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಹಾನಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ನಂತರ ಮಾಹಿತಿ ನೀಡಿದರು.
ಕಳೆದ ಮೂರ್ನಾಲ್ಕು ದಿನದಿಂದ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ಜನ ಜಾನುವಾರುಗಳಿಗೆ ತೊಂದರೆ ಆಗಿದೆ. ಈ ಬಾರಿಯ ಮಳೆಯಿಂದ ಹದಿಮೂರು ಜಿಲ್ಲೆಗಳು, ಹದಿನೇಳು ತಾಲೂಕುಗಳಲ್ಲಿ ಮಳೆ ಹಾವಳಿ ಹೆಚ್ಚಾಘಗಿದೆ. ಜೂನ್ ಒಂದರಿಂದ ಇಲ್ಲಿವರೆಗೆ ಹನ್ನೆರಡು ಜನರು ಮೃತಪಟ್ಟಿದ್ದು, ಅರವತ್ತೈದು ಜಾನುವಾರುಗಳು ಮೃತಪಟ್ಟಿವೆ.
ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಲಾಗಿದೆ. ಕಳೆದ ಬಾರಿ ಭೂ ಕುಸಿತ ಉಂಟಾಗಿರುವ ಸ್ಥಳಗಳಲ್ಲಿ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಭೂಮಿ ಸ್ವಲ್ಪ ಜರುಗಿರುವ ಕಡೆ ಟಾಸ್ಕ್ ಫೋರ್ಸ್ ರಚಿಸಿಕೊಂಡು ಸಮಸ್ಯೆಯನ್ನು ಸರಿಪಡಿಸಬೇಕು. ಮನೆ ಹಾನಿಯಾದವರಿಗೆ ಹತ್ತು ಸಾವಿರ ರೂ. ನೀಡಬೇಕು. ಸಣ್ಣ ಪ್ರಮಾಣದ ಹಾನಿಯಾದರೂ, ಮನೆಗೆ ನೀರು ನುಗ್ಗಿದೆ ಎಂದರೂ ಈ ಪರಿಹಾರ ನೀಡಬೇಕು. ನಂತರ ಎಷ್ಟು ಪ್ರಮಾಣದ ಹಾನಿ ಎಂದು ಅಂದಾಜಿಸಿ ವರದಿ ನೀಡಬೇಕು. ಹಾನಿಯ ತೀವ್ರತೆ ಆಧಾರದಲ್ಲಿ ಎ,ಬಿ, ಸಿ ಎಂದು ವರ್ಗೀಕರಿಸಿ ಪೂರ್ಣ ಪರಿಹಾರ ನೀಡಲಾಗುತ್ತದೆ.
ಇದನ್ನೂ ಓದಿ | Rain News | ನಿಲ್ಲದ ಮಳೆ ಗೋಳು, ಜಲಾವೃತ ಪ್ರದೇಶಗಳು ಸಾಲು ಸಾಲು
ಮಳೆ ನಿಂತ ಮೇಲೆ, ಬೆಳೆ ಹಾನಿ ವರದಿ ನೀಡಲು ಅಧಿಕಾರಿಗಳಿಗೆ ಹೇಳಿದ್ದೇನೆ. ಈಗಾಗಲೆ ಕೊಡಗು, ಮಂಗಳೂರಿನಲ್ಲಿ ಎನ್‌ಡಿಆರ್‌ಎಫ್ ತಂಡಗಳು, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಎಸ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ರಸ್ತೆ ಹಾನಿ ವರದಿಯನ್ನು ಕೂಡಲೆ ನೀಡಬೇಕು ಎಂದು ತಿಳಿಸಿದ್ದೇನೆ.
ಮಳೆ ಗಾಳಿಗೆ ಬಿದ್ದಿರುವ ಎಲೆಕ್ಟ್ರಿಕ್ ಕಂಬಗಳನ್ನು ಕೂಡಲೆ ಬದಲಿಸಬೇಕು ಎಂದು ಆದೇಶಿಸಿದ್ದೇನೆ. ಕಡಲ ಕೊರೆತಕ್ಕೆ ಎರಡು ರೀತಿಯ ಪರಿಹಾರ ನೀಡಲಾಗಿದೆ. ತಾತ್ಕಾಲಿಕವಾಗಿ ಪರಿಹಾರ ನೀಡುವುದು ಒಂದೆಡೆಯಾದರೆ ಹಾಗೂ ಶಾಶ್ವತ ಪರಿಹಾರಕ್ಕೆ ಪ್ರಸ್ತಾವನೆ ಕಳಿಸಿ ಎಂದು ಕೇಳಿದ್ದೇವೆ. ಕಡಲ ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಹೊಸ ತಂತ್ರಜ್ಞಾನದಲ್ಲಿ ಕಂಡುಕೊಳ್ಳುತ್ತೇವೆ. ಕಂದಾಯ, ಪೊಲೀಸ್, ಶಿಕ್ಷಣ, ಆರ್‌ಡಿಪಿಆರ್ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಾಕಷ್ಟು ಹಣ ಇದೆ
ಸದ್ಯದ ಪರಿಹಾರಕ್ಕಾಗಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ 732 ಕೋಟಿ ರೂ. ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಇನ್ನೂ ರೆಡ್ ಅಲರ್ಟ್, ಕೆಲವೆಡೆ ಆರೆಂಜ್ ಅಲರ್ಟ್ ಇದೆ. ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಅಂದಾಜಿದೆ. ಇನ್ನೂ ನಷ್ಟದ ಅಂದಾಜು ಮಾಡಿಲ್ಲ. ಬೆಳೆ, ಮನೆ ಹಾಗೂ ಮೂಲಸೌಕರ್ಯ ನಷ್ಟವನ್ನು ಮೂರ್ನಾಲ್ಕು ದಿನದಲ್ಲಿ ಅಂದಾಜು ಮಾಡುತ್ತೇವೆ ಎಂದರು. ಈ ಹಿಂದೆ ಪ್ರವಾಹ ಸಂದರ್ಭದಲ್ಲಿ ಹಾನಿಗೀಡಾದ ಮನೆಗಳಿಗೆ ಪರಿಹಾರವನ್ನು ಸ್ಥಗಿರಗೊಳಿಸುವುದಿಲ್ಲ. ಮನೆಗಳು ನಿರ್ಮಾಣವಾದಂತೆ ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದರು,
ನೆರೆ ಹಾವಳಿ ಎಚ್ಚರಿಕೆ
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ಕೊಯ್ನಾ ಹಾಗೂ ಇನ್ನಿತರ ಡ್ಯಾಂಗಳಲ್ಲಿ ಇನ್ನೂ ಪೂರ್ಣ ನೀರು ಬಂದಿಲ್ಲ. ನಮ್ಮ ರಾಜ್ಯದ ಘಟಪ್ರಭಾ, ಮಲಪ್ರಭಾ, ನವಿಲು ತೀರ್ಥದಲ್ಲಿ ಇನ್ನೂ ಅರ್ಧ ಭಾಗ ಮಾತ್ರ ನೀರು ತುಂಬಿದೆ. ಡ್ಯಾಂ ಇಂಜಿಯರ್ ನಡುವೆ ಸಮನ್ವಯ ಇರಬೇಕು ಎಂದು ಸೂಚಿಸಲಾಗಿದೆ. ಎರಡೂ ರಾಜ್ಯಗಳ ನೀರಾವರಿ ಕಾರ್ಯದರ್ಶಿಗಳು ನಿರಂತರ ಸಂಪರ್ಕದಲ್ಲಿದ್ದಾರೆ, ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಮಳೆಗೆ ಸಂಪೂರ್ಣ ಮನೆ ಹಾನಿಯಾದರೆ ₹5 ಲಕ್ಷ, ಭಾಗಶಃ ಹಾನಿಯಾದರೆ ₹50 ಸಾವಿರ ಪರಿಹಾರ: ಸಚಿವ ಆರ್.ಅಶೋಕ್