ಯಾದಗಿರಿ: ಬಿ.ಕೆ. ಹರಿಪ್ರಸಾದ್ ಅವರನ್ನು ಸಿಎಂ ಮಾಡುವಂತೆ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ (Pranavananda Swamiji) ಅವರು ಪುನರುಚ್ಚರಿಸಿದ್ದಾರೆ. ಬಿ.ಕೆ. ಹರಿಪ್ರಸಾದ್‌ರನ್ನು (BK hariprasad) ಸಿಎಂ ಅಥವಾ ಡಿಸಿಎಂ ಮಾಡುವಂತೆ ಒತ್ತಾಯ ಮಾಡಿರುವ ಅವರು, ಈಡಿಗ ಸಮುದಾಯವು ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಿದ್ದರೆ ಬಿ.ಕೆ.ಹರಿಪ್ರಸಾದ್ ಅವರನ್ನೇ ಸಿಎಂ (CM Post) ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರ ಹಿಂದೆ ಹಿಂದುಳಿದ ಸಮಾಜ ಇದೆ, ಹರಿಪ್ರಸಾದ್ ಅವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತೇನೆ. ಸಿಎಂ, ಡಿಸಿಎಂ ಸ್ಥಾನ ಬದಲಾದರೆ ಬಿ.ಕೆ.ಹರಿಪ್ರಸಾದ್ ಅವರಿಗೆ ಸಿಎಂ ಸ್ಥಾನ ನೀಡಬೇಕು. ಇಲ್ಲದಿದ್ದರೆ ಡಿಸಿಎಂ ಆಗಿ ತೆಗೆದುಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದರೆ ಹರಿಪ್ರಸಾದ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Actor Darshan: ದರ್ಶನ್ ವಿರುದ್ಧ ಪರೋಕ್ಷವಾಗಿ ಕೌಂಟರ್ ಕೊಟ್ಟ ನಟ ಜಗ್ಗೇಶ್!
ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನ ಮಾಡಬಾರದು. ಅಪಮಾನ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ಮಠಕ್ಕೆ ಕಾಲಿಡಬೇಡಿ. ನೀವು ಮಾಡಿದ್ದೆಲ್ಲಾ ಸರಿ ಅಂತ ಒಪ್ಪಿಕೊಳ್ಳೋಕೆ ಸಮುದಾಯದ ಸ್ವಾಮೀಜಿಗಳು ಸಿದ್ಧರಿಲ್ಲ. ನೀವು ಧೈರ್ಯವಾಗಿ ಹೇಳಿ ಮಠಕ್ಕೆ ಕಾಲಿಡಲ್ಲ ಅಂತ, ಆಗ ನಾವು ರಾಜಕೀಯಕ್ಕೆ ಬರಲ್ಲ ಎಂದು ಸವಾಲು ಹಾಕಿದರು.
ಚಂದ್ರಶೇಖರ ಸ್ವಾಮೀಜಿಗಳು ಹೇಳಿದಾಗ ಎಲ್ಲರೂ ಸ್ವಾಗತ ಮಾಡಿದರು. ಡಿ.ಕೆ.ಸುರೇಶ್, ಬಾಲಕೃಷ್ಣ ಹಾಗೂ ಚಲುವರಾಯಸ್ವಾಮಿ ಸ್ವಾಗತ ಮಾಡಿದರು. ಒಂದು ಕಡೆ ಸ್ವಾಗತ ಮಾಡೋದು, ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡಿ ಅಂತ ಹೇಳೋದು. ಇದು ಡಿ.ಕೆ.ಶಿವಕುಮಾರ ಅವರ ರಾಜಕೀಯ ಗಿಮಿಕ್, ನಮಗೆ ನೋವಾಗಿದ್ದಕ್ಕೆ ನಾವು ಹೇಳುತ್ತಿದ್ದೇವೆ. ನಮಗೆ ಯಾರು ಡಿಸಿಎಂ ಸ್ಥಾನ ಕೊಟ್ಟಿಲ್ಲ, ಈಗಾಗಲೇ ಡಿಕೆಶಿ ಡಿಸಿಎಂ ಇದ್ದಾರೆ. ಜೊತೆಗೆ ಒಕ್ಕಲಿಗ ಸಮುದಾಯದ ಸಚಿವರು ಇದ್ದಾರೆ. ಚಂದ್ರಶೇಖರ ಸ್ವಾಮೀಜಿಯವರು ಅವರ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಡಿ.ಕೆ.ಶಿವಕುಮಾರ ಅವರದ್ದು ರಾಜಕೀಯ ಗಿಮಿಕ್‌ನ ಭಾಗ ಎಂದು ಕಿಡಿಕಾರಿದರು.
ಯಾರು ಬೇಕಾದ್ರು ಅಭಿಪ್ರಾಯ ಹೇಳಬಹುದು ಎಂದ ಜಮೀರ್ ಅಹ್ಮದ್
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಮಂಡ್ಯದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಯಾರು ಬೇಕಾದರೂ ಅವರ ಅಭಿಪ್ರಾಯ ಹೇಳಬಹುದು. ಆದರೆ ನಿರ್ಧಾರ ಮಾಡುವುದು ಪಕ್ಷದ ಹೈ ಕಮಾಂಡ್. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿ ಇದ್ದಾಗ ಆ ಬಗ್ಗೆ ಚರ್ಚೆ ಮಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ | Pradeep Eshwar: ವಿಪಕ್ಷ ನಾಯಕರು ಸಿದ್ದರಾಮಯ್ಯ ಬಳಿ ಕೋಚಿಂಗ್ ಪಡೆಯಲಿ: ಅಶೋಕ್‌ಗೆ ಪ್ರದೀಪ್ ಈಶ್ವರ್ ಸಲಹೆ
ಸ್ವಾಮೀಜಿ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಯಾರು ಬೇಕಾದ್ರು ಅವರ ಅಭಿಪ್ರಾಯ ಹೇಳಬಹುದು. ಹೈ ಕಮಾಂಡ್ ತೀರ್ಮಾನ ಮಾಡಿ ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದಾರೆ. ಎಲ್ಲಾ ಸಮುದಾಯದವರೂ ಸಿಎಂ ಸ್ಥಾನ ಕೇಳುತ್ತಾರೆ, ಅದು ಅವರವರ ಅಭಿಪ್ರಾಯ. ಸಿಎಂ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ ಎಂದು ತಿಳಿಸಿದ್ದಾರೆ.