Site icon Vistara News

Power Point with HPK : ಕೆಜಿ ಹಳ್ಳಿ ಗಲಭೆ ಕೇಸ್‌ ವಾಪಸ್‌ ಹಿಂದೆ ಸಿಎಂ ಸಿದ್ದರಾಮಯ್ಯ: ಆರಗ ಜ್ಞಾನೇಂದ್ರ

Araga Gyanendra in Power Point with HPK

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ (KG Halli and DJ Halli riot cases) ಆರೋಪಿಗಳನ್ನು ಬಿಡುಗಡೆ ಮಾಡಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಇದು ಈಗ ಶಾಸಕ ತನ್ವೀರ್‌ ಸೇಠ್‌ (MLA Tanveer Sait) ಬರೆದಿರುವ ಪತ್ರವು ಈ ಸರ್ಕಾರದ ಪ್ರೀ ಪ್ಲ್ಯಾನ್ ಆಗಿದೆ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಗುಡುಗಿದ್ದಾರೆ.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈ ಪ್ರಕರಣದಲ್ಲಿ ಬಂಧಿತರಾದವರು “ಅಮಾಯಕರು” ಎಂದು ಕೇವಲ ಶಾಸಕ ತನ್ವೀರ್‌ ಸೇಠ್‌ ಪತ್ರ ಬರೆಯಲಿಲ್ಲ. ಗೃಹ ಸಚಿವ ಪರಮೇಶ್ವರ್‌ ಅದಕ್ಕೆ ಕ್ರಮ ವಹಿಸಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಹೇಳಲಿಲ್ಲ. ನೀನು ಪತ್ರ ಬರಿ ಎಂದು ತನ್ವೀರ್‌ ಸೇಠ್‌ ಅವರಿಗೆ ಹೇಳಿಸಿ, ಗೃಹ ಸಚಿವರಿಂದ ಕ್ರಮವಹಿಸಲು ಆದೇಶ ನೀಡಿಸಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರದ ಭಾಗವಾಗಿದೆ ಎಂದು ಆರೋಪ ಮಾಡಿದರು.

ಇದನ್ನೂ ಓದಿ: Karnataka Politics : ಸಚಿವರ ವಿರುದ್ಧದ ಪತ್ರಕ್ಕೆ ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ: ಬಿ.ಆರ್.‌ ಪಾಟೀಲ್

ಇದು ಬಹಳ ದುರದೃಷ್ಟಕರ ಸಂಗತಿಯಾಗಿದೆ. ತಮ್ಮ ವೋಟ್‌ ಬ್ಯಾಂಕ್‌ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ನಾವು ಎನ್‌ಐಎಗೆ ವಹಿಸಿದ್ದೇವೆ. ಪ್ರತಿಯೊಬ್ಬರ ಮೇಲೆ ಚಾರ್ಜ್‌ಶೀಟ್‌ ಆಗಿದೆ. ಎನ್‌ಐಎ ಈ ಪ್ರಕರಣವನ್ನು ಈಗ ಮುನ್ನಡೆಸುತ್ತಿದೆ. ನನಗೆ ಗೊತ್ತಿರುವಂತೆ ಈ ಪ್ರಕರಣವನ್ನು ವಾಪಸ್‌ ಪಡೆಯಲು ಬರುವುದಿಲ್ಲ. ಆದರೆ, ಈ ಪ್ರಕರಣದಲ್ಲಿರುವವರನ್ನು ಇವರು ಯಾವುದಾದರೂ ಒಂದು ಮಾರ್ಗದಲ್ಲಿ ವಾಪಸ್‌ ಕರೆತರುವ ಸಾಧ್ಯತೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಸರ್ಕಾರದ ಈ ಕ್ರಮಕ್ಕೆ ಏನರ್ಥ?

ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣವು ಮೀಡಿಯಾದಲ್ಲಿ ಬಿತ್ತರವಾಗಿದೆ. ಅಂದು ಅರ್ಧ ಬೆಂಗಳೂರು ಹೊತ್ತಿ ಉರಿಯಿತು. ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ್ದರು. ಕಾಂಗ್ರೆಸ್‌ನ ಒಬ್ಬ ದಲಿತ ಶಾಸಕನ ಮನೆಗೆ ಬೆಂಕಿ ಇಡಲಾಯಿತು. ಅವರು ಅಂದು ಯಾವ ರೀತಿ ತಪ್ಪಿಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಅಂದು ಉಟ್ಟ ಬಟ್ಟೆಯಲ್ಲಿ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದರು. ಇಂಥ ಒಂದು ಭಯಾನಕವಾದ ಪರಿಸ್ಥಿತಿಯನ್ನು ನೋಡಿಯೂ ಸಹ ಶಾಸಕ ತನ್ವೀರ್‌ ಸೇಠ್‌ ಅವರು ಬಂಧಿತರಾದವರು ಅಮಾಯಕರು ಎಂದು ಪತ್ರ ಬರೆಯುತ್ತಾರೆ. ಅದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಇದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡುತ್ತಾರೆ ಎಂದರೆ ಏನರ್ಥ? ಮಂತ್ರಿಯೊಬ್ಬರು ಬರೆಯುವ ಒಂದೊಂದು ಶಬ್ದಕ್ಕೆ ಅರ್ಥ ಇರುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಈ ಪ್ರಕರಣದಲ್ಲಿ ಒಬ್ಬರೇ ಒಬ್ಬ ಅಮಾಯಕರಿದ್ದರೆ ಜನರು ಹೇಳಲಿ. ಅಂದು ನಡೆದ ವಿಡಿಯೊ ನೋಡಿದರೇ ಎಲ್ಲರಿಗೂ ತಿಳಿಯುತ್ತದೆ. ಅಂದು ನಡೆದ ಘಟನಾವಳಿಯ ವಿಡಿಯೊ ಚಿತ್ರೀಕರಣವನ್ನು ಇಟ್ಟುಕೊಂಡು ಅದರಲ್ಲಿ ಕಂಡುಬಂದವರನ್ನು ಕರೆಸಿ ಅವರ ಬಳಿಯೇ ಕೇಳಿದ್ದೇವೆ. ಅಲ್ಲಿರುವುದು, ಕಲ್ಲು ಹೊಡೆದಿರುವುದು ತಾವೇ ಎಂದು ಆರೋಪಿಗಳು ಬಾಯಿ ಬಿಟ್ಟ ಬಳಿಕವೇ ನಾವು ಅಂಥವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಆದರೆ, ಈ ಸರ್ಕಾರ ಬಂದ ಮೇಲೆ ಅಪರಾಧ ಕೃತ್ಯ ಮಾಡಿದವರಿಗೆ ಬಿಡುಗಡೆ ಮಾಡಲಾಗುತ್ತದೆ ಎಂಬ “ಗ್ಯಾರಂಟಿ” ಸಿಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ದಲಿತ ಶಾಸಕನ ಜೀವಂತ ಸಮಾಧಿಗೆ ನಡೆದಿತ್ತು ಪ್ಲ್ಯಾನ್!‌

ಈ ಘಟನೆಯನ್ನು ಸಂಘಟಿತವಾಗಿ ಮಾಡಿದ್ದು, ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಹಾಗೂ ಕುಟುಂಬವನ್ನು ಜೀವಂತವಾಗಿ ಸುಟ್ಟುಹಾಕುವ ಹುನ್ನಾರ ಇತ್ತು. ಸುದೈವ ವಶಾತ್‌ ಪೊಲೀಸರು ಅವರ ಮನೆಗೆ ನುಗ್ಗಿ ರಕ್ಷಣೆ ಮಾಡಿದರು. ಇಲ್ಲದಿದ್ದರೆ ಈ ಪ್ರಕರಣ ನಿಯಂತ್ರಣಕ್ಕೆ ತಕ್ಷಣ ಬರುತ್ತಿರಲಿಲ್ಲ. ಗಲಭೆಕೋರರು ಪೊಲೀಸರು ಬಾರದಂತೆ ತಡೆಯೊಡ್ಡಿದ್ದರು. ಈ ಎಲ್ಲವೂ ಇದಕ್ಕೆ ಪುಷ್ಟಿ ನೀಡುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇಂಥ ಗಲಭೆಗಳು ಪ್ರತಿ ಊರಿನಲ್ಲಿಯೂ ನಡೆಯಬಹುದು

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವು ಒಂದು ವ್ಯವಸ್ಥಿತ, ಸಂಘಟಿತ ಪಿತೂರಿಯಾಗಿದೆ. ಈ ಕೃತ್ಯಕ್ಕೆ ಮುಂಚೆ ಅವರು ದೂರವಾಣಿ ಸಂಭಾಷಣೆಯಲ್ಲಿ ತೊಡಗಿರುವುದರ ಬಗ್ಗೆ ನ್ಯಾಯಾಲಯದಲ್ಲಿಯೂ ದಾಖಲೆ ಸಲ್ಲಿಕೆಯಾಗಿದೆ. ತಮ್ಮ ವಿರುದ್ಧ ಹೆಚ್ಚುಕಡಿಮೆಯಾದರೆ ನಾವು ಏನು ಎಂಬುದನ್ನು ತೋರಿಸಬೇಕು ಎಂದು ನಡೆದಿದ್ದ ಕೃತ್ಯ ಅದಾಗಿತ್ತು. ಹಾಗಾಗಿ ಮುಂದೆ ಈ ರೀತಿ ಆಗಬಾರದು ಎಂಬ ಕಾರಣಕ್ಕಾಗಿ ಇಂಥವರನ್ನು ಎಷ್ಟು ಮಟ್ಟ ಹಾಕಬೇಕೋ ಆ ಕೆಲಸವನ್ನು ನಾವು ಮಾಡಿದ್ದೇವೆ. ಆದರೆ, ಈಗ ಈ ಸರ್ಕಾರ ಮಾಡುತ್ತಿರುವ ರೀತಿಯನ್ನು ನೋಡಿದರೆ, ಇಂಥ ಗಲಭೆಗಳು ಪ್ರತಿ ಊರಿನಲ್ಲಿಯೂ ನಡೆಯಬಹುದು ಎಂದು ಆರಗ ಹೇಳಿದರು.

ಹರಿಪ್ರಕಾಶ್‌ ಕೋಣೆಮನೆ ಅವರೊಂದಿಗೆ ಆರಗ ಜ್ಞಾನೇಂದ್ರ ಅವರ ನೇರ ಮಾತು; ವಿಡಿಯೊ ಇಲ್ಲಿದೆ

ನಾವು ಕೈಬಿಟ್ಟಿದ್ದೇ ಬೇರೆ ಪ್ರಕರಣಗಳು

ಎಲ್ಲ ಸರ್ಕಾರಗಳೂ ಪ್ರಕರಣವನ್ನು ಕೈಬಿಡುತ್ತವೆ. ಆದರೆ, ಕೈಬಿಟ್ಟಿರುವ ಪ್ರಕರಣ ಯಾವುದು ಎಂಬುದನ್ನು ನೋಡಬೇಕು. ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರ ಅಧಿಕಾರಕ್ಕೆ ಮೊದಲ ಕ್ಯಾಬಿನೆಟ್‌ನಲ್ಲಿ ಪಿಎಫ್‌ಐ ಸಂಘಟನೆಯವರ ಮೇಲಿದ್ದ ಕೇಸ್‌ ಅನ್ನು ವಾಪಸ್‌ ಪಡೆಯಿತು. ಈಗ ಹೀಗೆ ಮಾಡುತ್ತಿದೆ. ಆದರೆ, ನಮ್ಮ ಸರ್ಕಾರ ಇದ್ದಾಗ ಕನ್ನಡ ಪರ ಸಂಘಟನೆಯವರ ಮೇಲಿನ ಕೇಸ್‌, ಗಣಪತಿ ಉತ್ಸವದಲ್ಲಿ ಡಿಜೆ ಹಾಕಿದವರ ಮೇಲೆ ಹಾಕಿದಂತಹ ಕೇಸ್‌ಗಳನ್ನು ವಾಪಸ್‌ ಪಡೆದಿದ್ದೇವೆ. ಅದು ಬಿಟ್ಟು ಹೀಗೆ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದವರನ್ನು, ಸಾರ್ವಜನಿಕರ ಆಸ್ತಿ ಪಾಸ್ತಿಯನ್ನು ಹಾನಿ ಮಾಡಿದವರ ಮೇಲಿನ ಕೇಸ್‌ ಅನ್ನು ನಾವು ವಾಪಸ್‌ ಪಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಕೇಸಲ್ಲಿ ಒಬ್ಬನನ್ನು ಕೈಬಿಟ್ಟರೂ ಬೇರೆಯ ಸಂದೇಶವೇ ಹೋಗುತ್ತದೆ. ಒಂದು ಮನೆಗೆ, ಪೊಲೀಸ್‌ ಠಾಣೆಗೆ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದು ಅಪರಾಧಿ ಕೃತ್ಯ ಮಾಡುವವರಿಗೆ ಬೇರೆ ಸಂದೇಶವನ್ನು ಕೊಟ್ಟಂತೆ ಆಗುತ್ತದೆ. ಈ ಸಂಬಂಧ ಬಿಜೆಪಿ ಈಗಾಗಲೇ ಪ್ರತಿಭಟನೆ ನಡೆಸಿದೆ. ಮತ್ತೂ ಹೋರಾಟ ಮುಂದುವರಿಯಲಿದೆ. ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಘಟನೆ ನಡೆದು ಮೂರ್ನಾಲ್ಕು ದಿನವಾದರೂ ಯಾವುದೇ ಒಬ್ಬ ಕಾಂಗ್ರೆಸ್‌ ನಾಯಕರು ಹೋಗಿಲ್ಲ. ಇದರ ಅರ್ಥ ಏನು? ಇಷ್ಟೆಲ್ಲ ಘಟನೆ ನಡೆದ ಮೇಲೆಯೂ ಮುಸ್ಲಿಂ ಸಮುದಾಯದ ಓಲೈಕೆ, ತುಷ್ಟೀಕರಣಕ್ಕೆ ಇವರು ಮುಂದಾಗಿರುವುದು ಎಷ್ಟು ಸರಿ? ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು.

ಪೊಲೀಸ್‌ ಇಂಟಲಿಜೆನ್ಸ್‌ಗೆ ವಿಶೇಷ ತರಬೇತಿ ಬೇಕು!

ಎಲ್ಲಿಯೂ ಸಲ್ಲದವನು ಇಂಟೆಲಿಜೆನ್ಸಿಯಲ್ಲಿರುತ್ತಾನೆ. ಟ್ರಾನ್ಸ್‌ಫರ್‌ ಮಾಡಿಸಿಕೊಳ್ಳಲು ಶಕ್ತಿ ಇಲ್ಲದವರು ಅನೇಕರು ಅಲ್ಲಿಗೆ ಹೋಗುತ್ತಾರೆ. ಎಲ್ಲರೂ ಹಾಗೇ ಎಂದು ನಾನು ಹೇಳುವುದಿಲ್ಲ. ಕೆಲವರು ಇಲ್ಲಿ ಸಮರ್ಥರೂ ಇರುತ್ತಾರೆ. ಆದರೆ, ಅವರು ಎಷ್ಟರಮಟ್ಟಿಗೆ ಮಾಹಿತಿಯನ್ನು ಸಂಗ್ರಹಿಸಬಹುದೋ ಅಷ್ಟನ್ನು ಸಂಗ್ರಹ ಮಾಡುತ್ತಾರೆ. ಹೀಗಾಗಿ ಇಲ್ಲಿ ಸಂಘಟನಾ ಪ್ರಯತ್ನ ಬೇಕು. ಈ ವ್ಯವಸ್ಥೆಯನ್ನು ಪುನರ್‌ ಬಲಪಡಿಸುವ ಕೆಲಸ ಮಾಡಬೇಕಿದೆ. ಇಲ್ಲಿ ದುಡಿಯುವ ಅಪೇಕ್ಷೆ ಇದ್ದವನನ್ನು ಅಲ್ಲಿಗೆ ಹಾಕಬೇಕು ಎಂಬುವವರನ್ನು ಅಲ್ಲಿಗೆ ನೇಮಕ ಮಾಡಬೇಕು. ಕೆಲವರಿಗೆ ಇಂಟೆಲಿಜನ್ಸ್‌ ಪೊಲೀಸ್‌ ನೌಕರಿಯೇ ಅಲ್ಲ, ಪೊಲೀಸ್‌ ಸಮವಸ್ತ್ರ ಹಾಕಿದರೆ ಮಾತ್ರವೇ ಅದು ಉದ್ಯೋಗ ಎಂಬ ಭಾವನೆ ಇದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇದನ್ನೂ ಓದಿ: Pradeep Eshwar : ಆಟೋ ಡ್ರೈವರ್‌ ಆದ ಪ್ರದೀಪ್‌ ಈಶ್ವರ್;‌ ಪ್ರತಿ ವರ್ಷ 5000 ಧನಸಹಾಯ!

ಪೊಲೀಸ್‌ ಇಂಟಲಿಜೆನ್ಸ್‌ಗೆ ಪ್ರತ್ಯೇಕವಾದ ಘಟಕವನ್ನು ಮಾಡಬೇಕು. ಅವರಿಗೆ ವಿಶೇಷವಾದ ತರಬೇತಿ ಕೊಡಬೇಕಿದೆ. ಉದಾಹರಣೆಗೆ ಕೇಂದ್ರ ಸರ್ಕಾರದಲ್ಲಿನ ಎನ್‌ಐಎ ಸೇರಿದಂತೆ ಇತರ ಘಟಕಗಳಿಗೆ ನೀಡುವ ವಿಶೇಷ ತರಬೇತಿಯಂತೆ ಇವರಿಗೂ ಪರಿಣಿತಿ ಸಾಧಿಸಲು ಟ್ರೈನಿಂಗ್‌ ಕೊಡಬೇಕಿದೆ. ಆಗ ಕೆಜಿ ಹಳ್ಳಿ, ಡಿಜೆ ಹಳ್ಳಿಯಂತಹ ಘಟನೆಗಳನ್ನು ತಪ್ಪಿಸಬಹುದು ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

Exit mobile version