ಬೆಂಗಳೂರು: ಆ. 19ರಂದು ನಿಗದಿಯಾಗಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬಳ್ಳಾರಿ ಜಿಲ್ಲಾ ಪ್ರವಾಸ ಮತ್ತು ಮಂತ್ರಾಲಯ ಭೇಟಿ ಕಾರ್ಯಕ್ರಮಗಳು ರದ್ದಾಗಿದೆ. ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಲು ನಾಳಿನ ಕಾರ್ಯಕ್ರಮಗಳನ್ನು ಸಿಎಂ ರದ್ದು ಮಾಡಿದ್ದಾರೆ.
ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಸಿಎಂ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೇ ನಾಳೆ ಹೈಕೋರ್ಟ್‌ನಲ್ಲಿ ಸಿಎಂ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ಸಿಂಘ್ವಿ ಮತ್ತು ಸಿಬಲ್ ಆಗಮಿಸಲಿದ್ದಾರೆ. ಸೋಮವಾರ ಬೆಳಗ್ಗೆ ವಕೀಲರ ಜೊತೆಗೆ ಸಿಎಂ ಸಿದ್ದರಾಮಯ್ಯ ಸುದೀರ್ಘ ಚರ್ಚೆ ಹಿನ್ನೆಲೆಯಲ್ಲಿ ನಾಳಿನ ಬಳ್ಳಾರಿ ಜಿಲ್ಲೆ ಮತ್ತು ಮಂತ್ರಾಲಯ ಭೇಟಿಯನ್ನು ಸಿಎಂ ರದ್ದು ಮಾಡಿದ್ದಾರೆ.
ಇದನ್ನೂ ಓದಿ | V Somanna : ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ಸಂಸದರ ಕಚೇರಿ ಉದ್ಘಾಟಿಸಿದ ವಿ ಸೋಮಣ್ಣ
ರಾಜ್ಯಪಾಲರ ನಡೆಗೆ ಕೆರಳಿದ ಕಾಂಗ್ರೆಸ್ ಪಡೆ; ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಸನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ಕೆರಳಿದ ಕಾಂಗ್ರೆಸ್ ಪಡೆ, ನಾಳೆ(ಆ.19) ಬೆಳಗ್ಗೆ 11 ಗಂಟೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆಗೆ (Congress Protest) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದು, ಪ್ರತಿಭಟನೆಯಲ್ಲಿ ಸಚಿವರು ಸ್ಥಳೀಯ ಶಾಸಕರು ಕೆಪಿಸಿಸಿ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗುವಂತೆ ಸೂಚನೆ ನೀಡಿದ್ದಾರೆ.
ನಾಳೆ ಪ್ರತಿಭಟನೆ ವಿಚಾರ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದೇವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇಲ್ಲಸಲ್ಲದ ಆರೋಪ ಮಾಡಲು ಹೊರಟಿದ್ದಾರೆ. ಹಾಗಾಗಿ ಮುಖಂಡರಿಗೆ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದೇವೆ. ಇದು ಶಾಂತಿಯುತ ಪ್ರತಿಭಟನೆ ಅಗಿದ್ದು, ಕೆಲ ಕಿಡಿಗೇಡಿಗಳು ಕಲ್ಲೊಡೆಯುವ ಕೆಲಸ ಮಾಡುತ್ತಾರೆ. ಹಾಗಾಗಿ ಸ್ವಲ್ಪ ಹುಷಾರಾಗಿ ಪ್ರತಿಭಟನೆ ಮಾಡಿ ಅಂತ ಹೇಳಿದ್ದೇನೆ. ನಮ್ಮದು ಗಾಂಧಿ ತತ್ವ, ಈ ದೇಶಕ್ಕೆ ಒಂದು ಸಂದೇಶ ಕೊಡಬೇಕು. ಎಐಸಿಸಿಗೆ ಪ್ರತಿಭಟನೆ ಬಗ್ಗೆ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಕೊಡಬೇಕು, ಹಾಗಾಗಿ ಭೇಟಿ ಮಾಡಿದ್ದೆ ಎಂದರು.
ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಬಗ್ಗೆ ಪ್ರತಿಕ್ರಿಯಿಸಿ, ಗೇಟ್ ಚೆನ್ನಾಗಿ ಅಳವಡಿಕೆ ಮಾಡಿದ್ದಾರೆ. ಬಿಜೆಪಿಯವರಿಗೆ ಇದು ಉತ್ತರವಾಗಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಕಾರಜೋಳ, ಅಶೋಕ್, ಕುಮಾರಸ್ವಾಮಿ ಏನು ಮಾತಾಡಿದರೋ ಗೊತ್ತಿದೆ ಎಂದರು.
ಸಿದ್ದರಾಮಯ್ಯ ಬೆನ್ನಿಗೆ ನಿಂತ ಕಾಂಗ್ರೆಸ್ ಹೈಕಮಾಂಡ್
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್ ನಿಂತಿದೆ. ಸಿದ್ದರಾಮಯ್ಯಗೆ ಕರೆ ಮಾಡಿ, ನಾವು ನಿಮ್ಮ ಜೊತೆಗಿದ್ದೇವೆ. ಕಾನೂನಿನ ಹೋರಾಟ ಮುಂದುವರಿಸಿ ಎಂದು ಹೈಕಮಾಂಡ್ ಧೈರ್ಯ ತುಂಬಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೂಚನೆ ಮೇರೆಗೆ ಕರೆ ಕೇಂದ್ರದ ನಾಯಕರು ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆತ್ಮವಿಶ್ವಾಸದಿಂದ ಕಾನೂನು ಹೋರಾಟಕ್ಕೆ ಸಿಎಂ ಸಜ್ಜಾಗಿದ್ದಾರೆ.