Site icon Vistara News

Water Scarcity: 8 ಜಿಲ್ಲೆಗಳಲ್ಲಿ ಜಲ ಸಂಕಟ: ನೀರಿನ ಸಮಸ್ಯೆ ಬಗೆಹರಿಸಲು 24 ಗಂಟೆ ಡೆಡ್‌ಲೈನ್‌

Draught in Karnakata image

#image_title

ಬೆಂಗಳೂರು: ಮುಂಗಾರು ವಿಳಂಬವಾಗಿದ್ದರಿಂದ ಪ್ರಮುಖವಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ನೀರಿಗೆ ತತ್ವಾರವಾಗಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದರು. ರಾಜ್ಯದ 8 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲಜೀವನ್‌ ಮಿಷನ್ ಯೋಜನೆಯ ಪ್ರಗತಿಯ ಕುರಿತಂತೆ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅನೇಕ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

  1. ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಯಿತು.
  2. ರಾಜ್ಯದಲ್ಲಿ ಮುಂಗಾರು ಜೂನ್‌ 10 ರಂದು ಪ್ರಾರಂಭವಾಗಿದೆ. ಜೂನ್‌ 1 ರಿಂದ 11ರವರೆಗಿನ ಮಾಹಿತಿ ಪ್ರಕಾರ ರಾಜ್ಯದ ವಾಡಿಕೆ ಮಳೆಗಿಂತ ಶೇ. 67 ರಷ್ಟು ಕೊರತೆ ಇದೆ. ಮುಂದಿನ ದಿನಗಳಲ್ಲಿ ಇದು ವಾಡಿಕೆಯಷ್ಟು ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
  3. ಆದರೆ ಕಳೆದ ಕೆಲವು ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
  4. ರಾಜ್ಯದ 15 ಜಿಲ್ಲೆಗಳ 322 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಹಾಗೂ 148 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಒದಗಿಸಲಾಗುತ್ತಿದೆ.
  5. ಪೂರ್ವ ಮುಂಗಾರು ಕೊರತೆಯ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಮುಂಗಾರು ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.
  6. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇರದಿದ್ದರೂ ಕಲುಷಿತ ನೀರಿನ ಸಮಸ್ಯೆ ಉಂಟಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು. ಇದರ ವರದಿಯನ್ನಾಧರಿಸಿ, ತಪ್ಪಿತಸ್ಥರ ವಿರುದ್ಧ ಮುಖ್ಯ ಕಾರ್ಯದರ್ಶಿ ಕ್ರಮ ಕೈಗೊಳ್ಳಬೆಕು.
  7. ಜಿಲ್ಲಾ ಪಂಚಾಯಿತಿ ಸಿಇಒಗಳು ತಾಲ್ಲೂಕಿಗೆ ಭೇಟಿ ನೀಡಬೇಕು. ಪಿಡಿಒಗಳ ಕಾರ್ಯನಿರ್ವಹಣೆ ಬಗ್ಗೆ ನಿಗಾ ವಹಿಸಬೇಕು. ಜಲಜೀವನ್‌ ಮಿಷನ್‌ ಯೋಜನೆಯಡಿ ನೀರಿನ ಪೈಪ್‌ ಲೈನ್‌ ಅಳವಡಿಸಿರುವುದರ ಗುಣಮಟ್ಟ ಪರಿಶೀಲಿಸಿ. ಕೊಳವೆ ಒಡೆದುಹೋಗುವುದು ಮತ್ತಿತರ ಸಮಸ್ಯೆ ಉಂಟಾದರೆ ಕ್ರಮ ಕೈಗೊಳ್ಳಬೇಕು.
  8. ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನೀರಿನ ಸಮಸ್ಯೆ ಉದ್ಘವಿಸಿದ 24 ಗಂಟೆಯೊಳಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು.
  9. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಸಹ ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು.
  10. ಯಾವುದೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗಿದ್ದರೆ, ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಆಡಳಿತಾತ್ಮಕ ವಿಚಾರಗಳಿಗೆ ವಿಳಂಬ ಧೋರಣೆ ಸರಿಯಲ್ಲ.
  11. ಜಲಜೀವನ್‌ ಮಿಷನ್‌ ಮೂಲಕ ನೀರು ಒದಗಿಸಿದ ಗ್ರಾಮಗಳಲ್ಲಿ ಇಒ, ಎಂಜಿನಿಯರುಗಳು ತಪಾಸಣೆ ನಡೆಸಿ, ಪೈಪ್‌ ಲೈನ್‌ ಗಳನ್ನು ಪರಿಶೀಲಿಸಿ, ಸಮಸ್ಯೆಗಳಿದ್ದಲ್ಲಿ ಸರಿ ಪಡಿಸಬೇಕು. ಕಲುಷಿತ ನೀರು ಸೇವನೆ ಪ್ರಕರಣಗಳು ಮರುಕಳಿಸಬಾರದು.
  12. ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ನಿಮ್ಮ ಜವಾಬ್ದಾರಿ. ಅನುದಾನದ ಅಗತ್ಯವಿದ್ದರೆ ಒದಗಿಸಲಾಗುವುದು. ನೆಪ ಹೇಳಿ, ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಡಿ. ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಸೂಕ್ಷ್ಮ ವಿಷಯ. ಮಳೆ ಬಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಒಳ್ಳೆಯದು. ಇಲ್ಲವಾದರೆ, ಅಧಿಕಾರಿಗಳು ದಿನದ 24 ಗಂಟೆಯೂ ಜಾಗೃತರಾಗಿದ್ದು ನೀರಿನ ಸಮಸ್ಯೆ ಬಗೆಹರಿಸಬೇಕು. ಇದಕ್ಕಾಗಿ ನಿಮಗೆ ಒದಗಿಸಿದ ಸವಲತ್ತುಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಲಿ.
  13. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕದಲ್ಲಿದ್ದು ನೀರಿನ ಸಮಸ್ಯೆ ಕುರಿತು ಸರಿಯಾದ ಮಾಹಿತಿ ಒದಗಿಸಬೇಕು.
  14. ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು.
  15. ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ. ಸಮಸ್ಯೆ ಬಗೆಹರಿಸಲು ಎಲ್ಲ ಬೆಂಬಲ ನೀಡಲಾಗುವುಉದ. ತಪ್ಪು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: Health Benefits Of Raisin Water: ಒಣದ್ರಾಕ್ಷಿ ನೀರು ಕುಡಿಯಿರಿ, ಇದರ ಎಫೆಕ್ಟ್ ನೋಡಿ!

Exit mobile version