ಮಂಗಳೂರು: ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಯದ್ದೇ ಭಾರಿ ಚರ್ಚೆಗೆ ಕಾರಣವಾಗಿದೆ. ಜತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಕೆಸರೆರಚಾಟ ನಡೆದಿದೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಅವರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದ ಸಿ.ಟಿ. ರವಿ, “ಆಡದೇ ಮಾಡುವವನು ಉತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಡ್ಯಾಶ್… ಡ್ಯಾಶ್..” ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ, ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕನ್ನಡದ ಹಳೇ ಗಾದೆ ಮಾತಿನ ಮೂಲಕ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Video Viral: 4 ನೈಂಟಿ ಕೊಡುವೆನೆಂದು ಹಣ ಪಡೆದು ಎರಡೇ ಕೊಟ್ಟವನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಟ್ಟಿದ ನಾರಿಯರು!
ನರೇಂದ್ರ ಮೋದಿಯವರು ನೂರಾರು ಯೋಜನೆಯನ್ನು ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಿಮಗೆ ಅದು ಕೊಡುತ್ತೇವೆ, ಇದು ಕೊಡುತ್ತೇವೆ ಎಂದು ಘೋಷಣೆ ಮಾಡಲಿಲ್ಲ. ಚುನಾವಣೆ ಬಳಿಕ ಗೆದ್ದು ಬಂದ ಮೇಲೆ ಜನರಿಗೆ ನಿಜವಾಗಿಯೂ ಯಾವುದು ಅವಶ್ಯಕತೆ ಇದೆಯೋ ಅದನ್ನು ಜಾರಿ ಮಾಡಿದ್ದಾರೆ. ಇದನ್ನು ಯಾವುದೇ ಜಾತಿ, ಧರ್ಮವನ್ನು ನೋಡದೇ ಜಾರಿಗೆ ತಂದರು ಎಂದು ಸಿ.ಟಿ. ರವಿ ಹೇಳಿದರು.
ಗರೀಬಿ ಕಲ್ಯಾಣ ಅನ್ನ ಯೋಜನೆ ಮೂಲಕ ಭಾರತ ಸರ್ಕಾರ ಕೋವಿಡ್ ಕಾಲದಲ್ಲಿ 10 ಕೆ.ಜಿ. ಅಕ್ಕಿ ಕೊಟ್ಟಿತು. ಈಗ 5 ಕೆ.ಜಿ. ಅಕ್ಕಿ ಕೊಡುತ್ತಿದೆ. ಈ ಹಿಂದೆಯೂ ಸಹ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು. ಆಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತು. ಯಾವತ್ತಾದರೂ ಸಿದ್ದರಾಮಯ್ಯ ಅವರು, ಮೋದಿ ಸರ್ಕಾರ ಕೇಂದ್ರದಿಂದ 5 ಕೆ.ಜಿ. ಅಕ್ಕಿ ಕೊಡುತ್ತಿದೆ ಎಂದು ಹೇಳಿದ್ದರಾ? ಎಂದು ಪ್ರಶ್ನೆ ಮಾಡಿದ ಸಿ.ಟಿ. ರವಿ, ನಾನು ಕೊಟ್ಟೆ, ನಾನು ಕೊಟ್ಟೆ ಎಂದು ಹೇಳಿಕೊಂಡಿದ್ದರು ಎಂದು ತಿವಿದರು.
ಈಗ ಭಾರತ ಸರ್ಕಾರದಲ್ಲಿ ನೀತಿ ನಿಯಮಾವಳಿ ಬದಲಾಗಿದೆ. ಹೀಗಾಗಿ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ದಾಸ್ತಾನು ಮಾಡಲಾಗುತ್ತಿದೆ. ಅಕ್ಕಿಗಾಗಿ ಮಧ್ಯಪ್ರದೇಶ, ಉತ್ತರ ಪ್ರದೇಶವೂ ಬೇಡಿಕೆ ಇಟ್ಟಿತ್ತು. ಯಾವುದೇ ರಾಜ್ಯಗಳಿಗೆ ನಾವು ಕೊಟ್ಟಿಲ್ಲ. ಕಾರಣ ಆಹಾರ ಭದ್ರತಾ ಕಾಯ್ದೆ ಅನ್ವಯ ಯಾವುದೇ ಸರ್ಕಾರಕ್ಕೂ ನಾವು ಅಕ್ಕಿಯನ್ನು ಕೊಟ್ಟಿಲ್ಲ. ಮಳೆ ಹಾಗೂ ಅಂದಾಜು ಬೆಳೆಯನ್ನು ಖಾತ್ರಿ ಪಡಿಸಿಕೊಂಡ ಬಳಿಕ ಅಕ್ಕಿಯನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹೀಗಾಗಿ ಈಗ ಸಿದ್ದರಾಮಯ್ಯ ಮಾಡುತ್ತಿರುವುದು ರಾಜಕೀಯ ಆರೋಪವಾಗಿದೆ ಎಂದು ಸಿ.ಟಿ. ರವಿ ಹೇಳಿದರು.
ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ನವರು!
ಸದ್ಯ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಯು ಮುಂದೆ ಬೇರೆ ರೀತಿ ತಿರುಗಬಹುದು. ಕೇಂದ್ರದವರು ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ. ಹಾಗಾಗಿ ಹುಚ್ಚುಚ್ಚು ಹೇಳಿಕೆ ಕೊಡುತ್ತಿದ್ದೇವೆ ಎನ್ನಬಹುದು. ಸದ್ಯ ಇವರದ್ದು ಹುಚ್ಚುಚ್ಚು ಹೇಳಿಕೆಗಳು ಎಂದಷ್ಟೇ ಹೇಳಬಹುದು. ಇದರಲ್ಲಿ ವ್ಯತ್ಯಾಸ ಇಲ್ಲ ಎಂದು ಸೇವಾಸಿಂಧು ವೆಬ್‌ಸೈಟ್ ಅನ್ನು ಕೇಂದ್ರ ಹ್ಯಾಕ್ ಮಾಡಿದೆ ಎಂದು ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Video Viral: ಮುಗಿಯದ ʼಶಕ್ತಿʼ ಹುಚ್ಚಾಟ; ಸಾರಿಗೆ ಸಿಬ್ಬಂದಿಗೆ ಪೀಕಲಾಟ! ಸೀಟು ಇಲ್ಲ ಎಂದ ಕಂಡಕ್ಟರ್‌ಗೆ ಏಟು!
ದೇಶ ಗೆಲ್ಲಬೇಕು ಅನ್ನೋರು ಮೋದಿ ಗೆಲ್ಲಿಸುತ್ತಾರೆ
ಆಮ್ ಆದ್ಮಿ ಸರ್ಕಾರವು ಉಚಿತ ಯೋಜನೆಯನ್ನು ಆರಂಭಿಸಿತು. ಕಾಂಗ್ರೆಸ್ ಸಹ ಈ ಫ್ರೀ ಸ್ಕೀಂ ಜೋಡಿಸಿಕೊಂಡಿತು. ನಮ್ಮ ಸರ್ಕಾರ ಆತ್ಮನಿರ್ಭರ ಯೋಜನೆ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ಕೊಡುತ್ತಿದೆ. ನಮ್ಮ ಮತ ಕಡಿಮೆ ಆಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು, ಆದರೆ ಇದೇ ಜನ ಲೋಕಸಭೆಗೆ ಬಿಜೆಪಿಯನ್ನು ಗೆಲ್ಲಿಸಿದ್ದರು. ಆಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ನಾವು ಗೆಲ್ಲಲ್ಲ ಅಂದಿದ್ದರು. ಆದರೆ ಜನ ಲೋಕಸಭೆಯಲ್ಲಿ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದರು. ದೇಶ ಗೆಲ್ಲಬೇಕು ಅನ್ನೋರು ಮೋದಿಯವರನ್ನು ಗೆಲ್ಲಿಸುತ್ತಾರೆ. ದೇಶ ಹಾಳಾಗಬೇಕು ಅನ್ನುವ ತುಕಡೆ ಗ್ಯಾಂಗ್‌ಗಳು ದೇಶ ಸೋಲಬೇಕು ಎಂದು ಹೇಳುತ್ತಾರೆ. ನಾವು ರಾಜ್ಯದ ಸೋಲು ಒಪ್ಪಿಕೊಳ್ಳುತ್ತೇವೆ. ಆದರೆ, ಹೀನಾಯ ಸೋಲು ಇದಲ್ಲ ಎಂದು ಸಿ.ಟಿ. ರವಿ ಹೇಳಿದರು.