Site icon Vistara News

ಬಿಜೆಪಿಯ ಯದುವೀರ್‌ ವಿರುದ್ಧ ಒಂದೇ ಒಂದು ಟೀಕೆ ಮಾಡದ ಸಿದ್ದರಾಮಯ್ಯ; ಏಕಿಷ್ಟು ಸಾಫ್ಟ್‌ ಕಾರ್ನರ್?

Siddaramaiah And Yaduveer

CM Siddaramaiah Is Not Spoken A Single Word Against Yaduveer Wadiyar

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ರಾಜವಂಶಸ್ಥ, ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Krishnadatta Chamaraja Wadiyar) ಮೇಲೆ ಇರುವ ಸಾಫ್ಟ್‌ ಕಾರ್ನರ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮುಂದುವರಿಸಿದ್ದಾರೆ. ಮೈಸೂರಿನಲ್ಲಿ (Mysore) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ, ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ, ಯದುವೀರ್‌ ವಿರುದ್ಧ ಅವರು ಒಂದೇ ಒಂದು ಪದ ಬಳಸಲಿಲ್ಲ ಎಂಬುದು ವಿಶೇಷವಾಗಿದೆ.

ಎದುರಾಳಿ ಪಕ್ಷದ ನಾಯಕರು, ಚುನಾವಣೆ ವೇಳೆ ಅಭ್ಯರ್ಥಿಗಳ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸುತ್ತಾರೆ. ವ್ಯಂಗ್ಯ, ಚಾಟಿ, ಆರೋಪ, ಕಟು ಶಬ್ದಗಳಿಂದ ಅವರು ತಿವಿಯುತ್ತಾರೆ. ಆದರೆ, ರಾಜ್ಯದ ಗಮನ ಸೆಳೆದಿರುವ, ತಮ್ಮ ತವರು ಜಿಲ್ಲೆಯ ಅಭ್ಯರ್ಥಿ ಯದುವೀರ್‌ ವಿರುದ್ಧ ಅವರು ಒಂದೇ ಒಂದು ಮಾತನಾಡಿಲ್ಲ. ಮೈಸೂರಿನ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ ಸಿಂಹ ಸೇರಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು ಮಾತ್ರ ಯದುವೀರ್‌ ಕುರಿತು ತುಟಿಕ್‌ ಪಿಟಿಕ್‌ ಎನ್ನಲಿಲ್ಲ.

ಲಕ್ಷ್ಮಣ್‌ ಗೆದ್ದರೆ ನಾನೇ ಗೆದ್ದಂತೆ

“ಮೈಸೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎಂ. ಲಕ್ಷ್ಮಣ್‌ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅವರಿಗೆ ರಾಜಕೀಯದ ಬಗ್ಗೆ ಜ್ಞಾನ ಇದೆ. ಅವರನ್ನು ಗೆಲ್ಲಿಸಿ ಕಳುಹಿಸಿದರೆ ನಿಮ್ಮ ಪರವಾಗಿ ಮಾತನಾಡುತ್ತಾರೆ. ಮೈಸೂರಿನಲ್ಲಿ ಎಂ. ಲಕ್ಷ್ಮಣ್‌ ಗೆದ್ದರೆ ನಾನೇ ಗೆದ್ದಂತೆ” ಎಂದು ಹೇಳಿದರು. ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. “ಜೆಡಿಎಸ್‌ನವರು ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ದೇವೇಗೌಡರು ಅಳಿಯನನ್ನು ಬಿಜೆಪಿಗೆ ಕಳುಹಿಸಿದ್ದಾರೆ. ಇವರು ಕರ್ನಾಟಕದಲ್ಲಿ ಸೋಲಿನ ಭೀತಿಯಿಂದ ಒಂದಾಗಿದ್ದಾರೆ” ಎಂದು ಹರಿಹಾಯ್ದರು.

“ಸೋಲುವ ಭೀತಿಯಿಂದ ಒಂದಾದವರನ್ನು ಸೋಲಿಸಿ ಕಳುಹಿಸಬೇಕು. ಬಿಜೆಪಿಯವರು ಎಂದರೆ ಲೂಟಿಕೋರರು. ಬಿಜೆಪಿಯವರು ಎಂದರೆ ಸುಳ್ಳುಕೋರರು. ಮೈಸೂರಿನಲ್ಲಿ ಜನರ ಪರ ಕೆಲಸ ಆಗಬೇಕು, ನಿಮ್ಮ ಹಕ್ಕುಗಳ ಪರವಾಗಿ ಕೆಲಸ ಮಾಡುವವರು ಬೇಕು ಎಂದರೆ ಎಂ. ಲಕ್ಷ್ಮಣ್‌ ಅವರನ್ನು ಗೆಲ್ಲಿಸಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Lok Sabha Election 2024: ಪ್ರತಾಪ್ ಸಿಂಹಗಿಂತಲೂ ಯದುವೀರ್‌ ಉತ್ತಮ‌ ಅಭ್ಯರ್ಥಿ ಎಂದ ರಾಧಾಮೋಹನ್ ದಾಸ್

ಯದುವೀರ್‌ ಟಾರ್ಗೆಟ್‌ ಬೇಡ ಎಂದಿರುವ ಸಿಎಂ

ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರುದ್ಧ ಯಾರೂ ಮಾತನಾಡಬಾರದು. ಅವರನ್ನು ಟಾರ್ಗೆಟ್‌ ಮಾಡಬಾರದು ಎಂಬುದಾಗಿ ಈಗಾಗಲೇ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೂರು ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, “ಭಾಷಣ ಮಾಡುವಾಗ ಎಚ್ಚರ ಇರಲಿ. ಯದುವೀರ್ ಒಡೆಯರ್‌ ವಿರುದ್ಧ ಸಿಕ್ಕ ಸಿಕ್ಕಂತೆ ಹೇಳಿಕೆ ಕೊಡಬೇಡಿ. ಎಮೋಷನಲ್ ವಿಚಾರವನ್ನು ತಿರುಗಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಬಿಜೆಪಿಯವರಿಗೆ ನಿಮ್ಮ ಹೇಳಿಕೆ ಆಹಾರವಾಗಬಾರದು. ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ” ಎಂದು ಕಿವಿಮಾತು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version