Site icon Vistara News

CM Siddaramaiah : ಸಾರೇ ಜಹಾಂ ಸೇ ಅಚ್ಛಾ ಹಾಡಿನ ಮೂಲಕ ತಿರುಗೇಟು ನೀಡಿದ ತನ್ವೀರ್‌ ಪೀರಾ

Thanveer Peera and Siddaramaiah

ವಿಜಯಪುರ: ಹುಬ್ಬಳ್ಳಿ‌ಯಲ್ಲಿ ಸೋಮವಾರ ನಡೆದಿದ್ದ‌ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ‌ ಸಿದ್ದರಾಮಯ್ಯ ‌(CM Siddaramaiah) ಅವರ ಜತೆ ವೇದಿಕೆ ಹಂಚಿಕೊಂಡಿದ್ದ ಮುಸ್ಲಿಂ ಮೌಲ್ವಿ ತನ್ವೀರ್‌ ಪೀರಾ ಅವರು ಹೊಸ ರೂಪದೊಂದಿಗೆ ಎದ್ದು ಬಂದಿದ್ದಾರೆ. ಮೌಲ್ವಿ ತನ್ವೀರ್‌ ಪೀರಾ (Moulvi thanveer Peera) ಐಸಿಸ್‌ ಸಂಘಟನೆ ಜತೆ ಸಂಪರ್ಕ ಹೊಂದಿರುವ ದೇಶ ವಿರೋಧಿ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda Pateel Yatnal) ಅವರ ಆರೋಪಕ್ಕೆ ಪ್ರತಿಕ್ರಿಯೆಯಾಗಿ ತಾನೂ ದೇಶಭಕ್ತ ಎಂಬುದನ್ನು ನಿರೂಪಿಸುವ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಸಾರೇ ಜಹಾಂ ಸೇ ಅಚ್ಛಾ ಹಾಡನ್ನು ಅವರು ತಾವೂ ಹಾಡುತ್ತಾರೆ, ಉಳಿದವರ ಮೂಲಕವೂ ಹಾಡಿಸುತ್ತಾರೆ.

ಸಿದ್ದರಾಮಯ್ಯ ಅವರು ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸುವ ವೇಳೆ ವಿಜಯಪುರ ಮೂಲದ ಮೌಲ್ವಿ ತನ್ವೀರ್‌ ಪೀರಾ ಕೂಡಾ ಜತೆಗಿದ್ದರು. ತನ್ವೀರ್‌ ಪೀರಾ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿರುವುದು ಮೊದಲೇನೂ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರೇ ಬಂದು ಭೇಟಿ ಮಾಡಿದ್ದರು. ಆದರೆ, ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಮತ್ತು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಇದೊಂದು ಅಸ್ತ್ರವಾಗಿದೆ.

ಬಸನ ಗೌಡ ಪಾಟೀಲ್‌ ಯತ್ನಾಳ್‌ ಅವರು ತನ್ವೀರ್‌ ಪೀರಾ ಅವರು ಐಸಿಸ್‌ ಜತೆಗೆ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದಲ್ಲದೆ ಅದಕ್ಕೆ ಸಂಬಂಧಿಸಿ ಹಲವು ಫೋಟೊ ಮತ್ತು ಮಾಹಿತಿಗಳನ್ನು ಬಿಡುಗಡೆ ಮಾಡಿದ್ದಾರೆ. ಜತೆ‌ಗೆ ಮೌಲ್ವಿ ಬಗ್ಗೆ ಎನ್‌ಐಎ ತನಿಖೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಪತ್ರ ಬರೆದಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಗಳೇನು?

  1. ತನ್ವೀರ್ ಪೀರಾ ಅನ್ನೋ ಐಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಹೀಗಾಗಿ ಈ ಪ್ರಕರಣವನ್ನು ಎನ್‌ಐಗೆ ವಹಿಸುವುದು ಸೂಕ್ತ.
  2. ತನ್ವೀರ್‌ ಪೀರಾ ಎಂಬ ವ್ಯಕ್ತಿ ಐಸಿಸ್ ನಾಯಕರನ್ನು ಭೇಟಿ ಮಾಡಿದ ಉದ್ದೇಶವನ್ನು ಕಂಡುಹಿಡಿಯಲು, ಅವರ ಪ್ರಯಾಣದ ಖರ್ಚು ವೆಚ್ಚಗಳ ಮೂಲಗಳನ್ನು ಕಂಡುಕೊಳ್ಳಲು, ಹಣಕಾಸು ನಿರ್ವಹಣೆಯಲ್ಲಿ ಆ ವ್ಯಕ್ತಿಯ ಪಾತ್ರ ಏನು ಎಂಬ ಬಗ್ಗೆ ತಿಳಿತಬೇಕಿದೆ.
  3. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವಾರು ಸಭೆಗಳಲ್ಲಿ ಪೀರಾ ಕಾಣಿಸಿಕೊಂಡಿದ್ದು, ಎಲ್ಲ ವಿಷಯಗಳ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಎನ್ಐಎಗೆ ವಹಿಸಬೇಕು.
  4. ಪೀರಾ ಈ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಿನ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯ ನಾಯಕರನ್ನು ಭೇಟಿಯಾಗಿರುವ ಬಗ್ಗೆ ನನಗೆ ತಿಳಿದಿದೆ.
  5. ನಮ್ಮ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಪೀರಾ ಮುಸ್ಲಿಂ ದೇಶಗಳಿಂದ ಹಣವನ್ನು ತರುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯೊಂದು ನನಗೆ ಸಿಕ್ಕಿದೆ.
  6. ಸಿಎಂ ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಇಲ್ಲವೇ, ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪೀರಾ ಅವರನ್ನು ಉದ್ದೇಶಪೂರ್ವಕವಾಗಿ ಭೇಟಿ ಮಾಡಲು ಅನುವು ‌ಮಾಡಿಕೊಟ್ಟಿದ್ದಾರೆ.
  7. ಭಯೋತ್ಪಾದನೆಯ ಪರವಾಗಿ ಇರುವ ವ್ಯಕ್ತಿಗಳು ಉನ್ನತ ಮಟ್ಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಈ ಭೇಟಿಗಳು ನಡೆಯುತ್ತವೆ.
  8. ಪೀರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ಸ್ಥಳೀಯ ಪೊಲೀಸರು ಮುಂದಾಗುವುದಿಲ್ಲ. ಕಾರಣ, ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬುದು ನನ್ನ ಅನುಮಾನವಾಗಿದೆ. ಹೀಗಾಗಿ ಪೀರಾ ಅವರನ್ನು ಎನ್‌ಐಎ ತನಿಖೆ ಆಗಲಿ.

ತಾನೂ ದೇಶಭಕ್ತ ಎಂದು ವಿಡಿಯೊ ಬಿಡುಗಡೆ ಮಾಡಿದ ಪೀರಾ

ಈ ನಡುವೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ತಮಗೆ ಐಸಿಸ್ ನಂಟಿದೆ ಆರೋಪದ ಬೆನ್ನಲ್ಲೇ ಸಿಡಿದೆದ್ದ ಮೌಲ್ವಿ ತನ್ವೀರ್ ಪೀರಾ ಅವರು ದೇಶಭಕ್ತಿ ಗೀತೆಯ ಮೂಲಕ ತಿರುಗೇಟು ನೀಡಿದ್ದಾರೆ.

ತಾವು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ʻಸಾರೇ ಜಹಾಂಸೇ ಅಚ್ಛಾʼ ಹಾಡನ್ನು ಹಾಡಿದ್ದಲ್ಲದೆ ಅಲ್ಲಿದ್ದವರ ಮೂಲಕವೂ ಹಾಡಿಸಿದ್ದಾರೆ. ದೇಶ, ಹಿಂದೂ ಎಂಬ ಪದಗಳ ಬಗ್ಗೆ ಪ್ರೀತಿಯಿಂದ ಆಡಿದ ಮಾತುಗಳು ಇಲ್ಲಿವೆ. ದೇಶಭಕ್ತಿ ಗೀತೆ ಹಾಡಿ ತನ್ನ Hafiz Khwaja ಪೇಸ್ಬುಕ್‌ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ ತನ್ವೀರ್ ಪೀರಾ ಅವರು ಯತ್ನಾಳ್‌ ಅವರಿಗೆ ಮೌನವಾಗಿ ಸವಾಲು ಹಾಕಿದ್ದಾರೆ.

Hafiz Khwaja ಅಕೌಂಟ್‌ನಲ್ಲಿ ಅವರು ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಭೇಟಿ ಮಾಡಿದ ಮತ್ತು ಸ್ವಾಮೀಜಿಗಳ ಜತೆಗೆ ಇರುವ ಚಿತ್ರಗಳೂ ಇವೆ. ಜತೆಗೆ ಅವರು ವಿಶ್ವಕಪ್‌ ಪಂದ್ಯಗಳಲ್ಲಿ ಭಾರತದ ಗೆಲುವನ್ನು ಸಂಭ್ರಮಿಸಿದ್ದು ಹಾಗೂ ಫೈನಲ್‌ನಲ್ಲಿ ಸೋತಾಗ ಸಾಂತ್ವನ ಹೇಳಿದ ಚಿತ್ರಗಳು ಇವೆ. ಇದಕ್ಕೆ ಯತ್ನಾಳ್‌ ಅವರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕು.

Exit mobile version