Site icon Vistara News

Attibele Fire Accident : ಪಟಾಕಿ ಗೋದಾಮಿನ ಮಾಲೀಕನ ಮೇಲೆ ಕ್ರಮ: ಸಿಎಂ ಸಿದ್ದರಾಮಯ್ಯ

Siddaramaiah statement on Attibele Fire Accident

ಮೈಸೂರು: ಆನೇಕಲ್‌ನ ಅತ್ತಿಬೆಲೆ ಪಟಾಕಿ ಗೋದಾಮೊಂದರಲ್ಲಿ (Attibele Fire Accident) ಶನಿವಾರ (ಅ.7) ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋದಾಮು ಮಾಲೀಕನ (Fireworks shop) ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಘಟನಾ ಸ್ಥಳಕ್ಕೆ ನಾನು ಹೋಗುತ್ತಿದ್ದೇನೆ. ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ಲೈಸೆನ್ಸ್ ಪಡೆದು ದಾಸ್ತಾನು (License for fireworks warehouse) ಮಾಡಿದ್ದಾರಾ? ಇಲ್ಲವೇ ಹಾಗೇ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ‌ ಕೈಗೊಳ್ಳಲಾಗುವುದು. ಈ ಸಂಬಂಧ ನಾನು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

20 ಕಾರ್ಮಿಕರಿದ್ದರು

ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್‌ ಮಾಡುವಾಗ ಈ ಅವಘಡ ಸಂಭವಿಸಿದೆ.

ಮೃತರಲ್ಲಿ ಏಳು ಜನ ಒಂದೇ ಗ್ರಾಮದವರು

ಅಗ್ನಿ ಅವಘಡದಲ್ಲಿ ಸಜೀವವಾಗಿ ದಹನಗೊಂಡ 14 ಜನರ ಪೈಕಿ ಏಳು ಮಂದಿ ಒಂದೇ ಗ್ರಾಮದವರು ಎಂದು ತಿಳಿದುಬಂದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಟಿ ಅಮ್ಮಾಪೇಟೆ ಎಂಬ ಗ್ರಾಮದ ಗಿರಿ, ಆದಿಕೇಶವನ್, ವಿಜಯ್ ರಾಘವನ್, ಇಲಂಬರದಿ, ಆಕಾಶ, ವೇಡಪನ್ ಸಚಿನ್ ಸೇರಿ ಏಳು ಯುವಕರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಹಿಂಭಾಗ ಕೊಠಡಿಯಲ್ಲಿ ಸಜೀವ ದಹನ

ಗೋದಾಮಿನ ಒಳಗಡೆ ಸಿಲುಕಿಕೊಂಡ ಕಾರ್ಮಿಕರಿಗೆ ಎಮರ್ಜೆನ್ಸಿ ಎಕ್ಸಿಟ್‌ ಡೋರ್‌ ಸಹ ಇರದೇ ಇದ್ದರಿಂದ ಹೊರಗೆ ಹೋಗುವ ದಾರಿ ಕಾಣದಂತಾಗಿತ್ತು. ಹೀಗಾಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಿಂಬದಿಗೆ ಓಡಿ ಹೋಗಿದ್ದರು. ಆದರೆ, ಹಿಂಬದಿ ಸಹ ಪಟಾಕಿಗಳ ರಾಶಿಯೇ ಇತ್ತು. ಅಲ್ಲಿ ಅವರಿಗೆ ತಪ್ಪಿಸಿಕೊಳ್ಳಲು ದ್ವಾರ ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಗೊಂಡರು.

ಇದನ್ನೂ ಓದಿ: Attibele Fire Accident : ಎಮರ್ಜೆನ್ಸಿ ಎಕ್ಸಿಟ್‌ ಇದ್ದಿದ್ದರೆ ಬದುಕುತ್ತಿದ್ದರು ಆ 14 ಮಂದಿ!

ಕೊನೆಗೆ ಅವರಿಗೆ ಕಾಣಿಸಿದ್ದೇ ಪಟಾಕಿ ಗೋದಾಮಿನ ಹಿಂಭಾಗ ಇರುವ ಕೊಠಡಿಯಾಗಿದೆ. ಎಲ್ಲರೂ ಅಲ್ಲಿಯೇ ಹೋಗಿ ಅವಿತು ಕುಳಿತುಕೊಂಡಿದ್ದರು. ಹೀಗಾಗಿ ಒಂದೇ ಜಾಗದಲ್ಲಿ ‌ಏಳು‌ ಜನ ಸ್ನೇಹಿತರು ಸುಟ್ಟು ಕರಕಲಾಗಿ ಹೋದರು. ಇನ್ನು ಪಟಾಕಿ ಸಂಗ್ರಹಿಸಲು ಗೋದಾಮು ಮಾಲೀಕರ ಬಳಿ ಪರವಾನಗಿಯೇ ಇಲ್ಲ ಎಂಬ ಮಾಹಿತಿ ಸಹ ಲಭ್ಯವಾಗಿದೆ.

Exit mobile version