Site icon Vistara News

CM Siddaramaiah : ರಾಮನಿಂದ ಸೀತೆಯನ್ನು ದೂರ ಮಾಡಿದ ಬಿಜೆಪಿ; ಮತ್ತೆ ಜೈ ಶ್ರೀರಾಮ್‌ ಎಂದ ಸಿದ್ದರಾಮಯ್ಯ

Rama Mandir Siddaramaiah

ಪಿರಿಯಾಪಟ್ಟಣ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ (Rama Mandira) ಲೋಕಾರ್ಪಣೆಯ ದಿನವೇ ಬೆಂಗಳೂರಿನಲ್ಲಿ ರಾಮ ಮಂದಿರವೊಂದನ್ನು ಉದ್ಘಾಟನೆ ಮಾಡಿ ಜೈ ಶ್ರೀರಾಮ್‌ ಎಂದು ಘೋಷಣೆ (Jai Shri Rama Slogan) ಕೂಗಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇದೀಗ ಮತ್ತೆ ಜೈ ಶ್ರೀರಾಮ್‌ ಎಂದು ಘೋಷಣೆ ಮೊಳಗಿಸಿದ್ದಾರೆ. ಜತೆಗೆ ಬಿಜೆಪಿಯವರು ರಾಮನಿಂದ ಸೀತೆಯನ್ನು ಬೇರ್ಪಡಿಸಿದ್ದಾರೆ (BJP divided between Rama and Seetha) ಎಂದು ಹೇಳಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಮತ್ತು ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು ಮುತ್ತಿನಮುಳುಸೋಗೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಮಾತ್ರ ಹಿಂದುಗಳಾ? ನಾವ್ಯಾರೂ ಹಿಂದುಗಳಲ್ವಾ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ʻʻಬಿಜೆಪಿಯವರು ಜನರನ್ನು ಮರಳು ಮಾಡುತ್ತಿದ್ದಾರೆ. ಹಿಂದುತ್ವದ ಹೆಸರಲ್ಲಿ ಅಧಿಕಾರ ಹಿಡಿದು ಕುಳಿತಿದ್ದಾರೆ.
ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ, ವ್ರತ ಮಾಡುತ್ತಾರಂತೆ. ನಾವು ರಾಮನ ಪೂಜೆ ಮಾಡಲ್ವ ?
ರಾಮನ ಭಜನೆ ಮಾಡಲ್ವ? ಧನುರ್ ಮಾಸದಲ್ಲಿ ನಾನೂ ಬೆಳಗ್ಗೆ ಎದ್ದು ದೇವಸ್ಥಾನಕ್ಕೆ ಹೋಗಿ ರಾಮನ ಭಜನೆ ಹಾಡುತ್ತಿದ್ದೆ. ಮೊನ್ನೆ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದೆ. ಜೈ ಶ್ರೀರಾಮ್ ಅಂತ ಘೋಷಣೆ ಕೂಗಿಸಿದೆʼʼ ಎಂದು ಹೇಳಿದ ಸಿದ್ದರಾಮಯ್ಯ ಇಲ್ಲೂ ಜೈ ಶ್ರೀರಾಮ್‌ ಘೋಷಣೆ ಮೊಳಗಿಸಿದರು.

ನಮ್ಮ ಕುಟುಂಬದ ಎಲ್ಲರ ಹೆಸರಲ್ಲೂ ರಾಮನಿದ್ದಾನೆ

ʻʻನನ್ನ ಹೆಸರು ಸಿದ್ದರಾಮಯ್ಯ. ನನ್ನ ಹೆಸರಲ್ಲೇ ರಾಮ ಇದ್ದಾನೆ. ನಮ್ಮಪ್ಪನ ಹೆಸರು ಸಿದ್ದರಾಮೇಗೌಡ. ತಮ್ಮಂದಿರ ಹೆಸರು ರಾಮೇಗೌಡ, ಸಿದ್ದೇಗೌಡ, ಸಿದ್ದರಾಮೇಗೌಡʼʼ ಎಂದು ಹೇಳಿದ ಅವರು ರಾಮನ ಹೆಸರನ್ನೇ ಇಟ್ಟುಕೊಂಡಿರುವ ನಾವ್ಯಾರೂ ಹಿಂದೂಗಳಲ್ವಾʼʼ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: CM Siddaramaiah: ವೈಫಲ್ಯ ಮುಚ್ಚಿಕೊಳ್ಳಲು ಶ್ರೀರಾಮನನ್ನು ಮುಂದಿಟ್ಟ ಮೋದಿ: ಸಿದ್ದರಾಮಯ್ಯ ಲೇವಡಿ

ರಾಮನನ್ನು ಸೀತೆಯಿಂದ ಬೇರ್ಪಡಿಸಿದ್ದಾರೆ ಎಂದ ಸಿದ್ದರಾಮಯ್ಯ

ʻʻನಾವು ಮಹಾತ್ಮ ಗಾಂಧಿ ಹೇಳುವ ರಾಮನ ಮೇಲೆ ನಂಬಿಕೆ ಇಟ್ಟಿದ್ದೇವೆ. ರಘುಪತಿ ರಾಘವ ರಾಜಾರಾಮ್, ಪತೀತ‌ ಪಾವನ ಸೀತಾರಾಮ್ ಅಂತ ಹೇಳಿದ್ದಾರೆ. ನಾವು ಪೂಜಿಸುವ ರಾಮನ ಜತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಅಂತ ಕರೆಯುತ್ತೇವೆ. ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ.
ಆದ್ದರಿಂದಲೇ ಸೀತೆ, ಲಕ್ಷ್ಮಣ, ಹನುಮಂತನನ್ನು ಬೇರ್ಪಡಿಸಿದ್ದಾರೆ. ರಾಮ‌ನನ್ನು ಮಾತ್ರ ಉಳಿಸಿಕೊಂಡಿದ್ದಾರೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ಏನೂ ಕೆಲಸ ಮಾಡದ ನರೇಂದ್ರ ಮೋದಿ: ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ʻʻನರೇಂದ್ರ ಮೋದಿ ಕೆಲಸ ಮಾಡಿಲ್ಲ. ಎರಡು ಕೋಟಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿದವರು ಕೆಲಸ ಕೊಡಿಸಲಿಲ್ಲ. ಪೆಟ್ರೋಲ್, ಡೀಸೆಲ್, ಗೊಬ್ಬರದ ಬೆಲೆ ಬಗ್ಗೆ ಅವರು ಮಾತನಾಡುವುದಿಲ್ಲ. ಈಗ ರಾಮ ರಾಮ ಅಂತಿದ್ದಾರೆ. ಜನ ಬುದ್ಧಿವಂತರಾಗಿದ್ದಾರೆ., ಎಲ್ಲವೂ ಅರ್ಥ ಆಗುತ್ತದೆʼʼ ಎಂದು ‌ ಹೇಳಿದರು.

Exit mobile version