Site icon Vistara News

CM siddaramaiah: ನನ್ನ ಲಿಸ್ಟೇ ಆಗಬೇಕು!‌ ಜನರ ಎದುರೇ ತಂದೆಗೆ ಫೋನ್‌ ಮಾಡಿ ಯತೀಂದ್ರ ತಾಕೀತು

yathindra siddaramiah

ಮೈಸೂರು: ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ (Yathindra Siddaramaiah) ಹಸ್ತಕ್ಷೇಪ ಬಹಳವಾಗಿದೆ ಎಂಬ ಆರೋಪಕ್ಕೆ ಸಾಕ್ಷಿ ಎಂಬಂತೆ, ಯತೀಂದ್ರ ಅವರು ಫೋನ್‌ನಲ್ಲಿ ತಂದೆಯ ಜತೆ ಮಾತಾಡಿ ತನ್ನ ಕೆಲಸ ಮಾತ್ರ ಆಗುವಂತೆ ತಾಕೀತು ಮಾಡುತ್ತಿರುವ ವಿಡಿಯೋ ವೈರಲ್‌ (viral video) ಆಗಿದೆ.

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ಪ್ರಸಂಗ ನಡೆಯಿತು. ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಯತೀಂದ್ರ ಅವರು ಜನ ಸಂಪರ್ಕ ಸಭೆಯಲ್ಲಿ ಮನವಿ ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಫೋನ್‌ನಲ್ಲಿ ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್‌ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸಿದರು.

ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ʼಮಹದೇವ್​ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿʼ ಅಂತ ಯತೀಂದ್ರ ಅವರು ಮಹದೇವರಿಗೆ ಸೂಚಿಸಿದ್ದಾರೆ.

ಇದೀಗ ಈ ವಿಡಿಯೋ ವೈರಲ್‌ ಆಗುತ್ತಿದೆ. ಡಾ.ಯತೀಂದ್ರ ಅವರು ರಾಜ್ಯ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ತಂದೆ ಸಿದ್ದರಾಮಯ್ಯನವರ ಬೆನ್ನ ಹಿಂದೆ ಆಡಳಿತ ಮಾಡುತ್ತಿರುವವರು ಪುತ್ರ ಯತೀಂದ್ರ, ರಾಜ್ಯದಲ್ಲಿ ವೈಎಸ್​ಟಿ ಕಲೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಮಾಡಿದ್ದರು.

ಇದನ್ನೂ ಓದಿ: CM Siddaramaiah : ಯತೀಂದ್ರರಿಂದ ವರ್ಗಾವಣೆ ಲೂಟಿ; ಕುರುಡು ಮಲೆಯಲ್ಲಿ ಸಿದ್ದರಾಮಯ್ಯ ಪ್ರಮಾಣಕ್ಕೆ ಈಶ್ವರಪ್ಪ ಸವಾಲು

Exit mobile version