ಹೊಸದಿಲ್ಲಿ: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಭೇಟಿಯಾಗಲಿದ್ದಾರೆ. ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಸಂಸತ್ ಭವನದಲ್ಲಿ ಭೇಟಿಯಾಗಲಿದ್ದು, ಬರ ಪರಿಹಾರ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರ (Drought) ಪರಿಸ್ಥಿತಿ ಇದೆ. ಕೃಷಿ ನಷ್ಟ, ಬರಪರಿಸ್ಥಿತಿ ನಿರ್ವಹಣೆಗೆ ಬೇಕಾಗಿರುವ ಕೇಂದ್ರದ ನೆರವಿನ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದಿಂದ ಹದಿನೆಂಟು ಸಾವಿರ ಕೋಟಿ ರೂ. ನೆರವು ಕೇಳಿದೆ. ಈ ಹಿಂದೆ ರಾಜ್ಯದ ಸಚಿವರು ಕೇಂದ್ರ ಕೃಷಿ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈವರೆಗೂ ನೆರವು ಸಿಕ್ಕಿಲ್ಲದ ಹಿನ್ನೆಲೆಯಲ್ಲಿ ಎರಡನೇ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Seetharaman) ಅವರನ್ನು ಭೇಟಿಯಾಗಿ ಮನವಿ ಮಾಡಲಿದ್ದಾರೆ.
ಇಂದು ಪ್ರಧಾನಿಯವರನ್ನು ಭೇಟಿಯಾಗಿ ಪರಿಹಾರ ಬಿಡುಗಡೆಗೆ ಮನವಿ ಮಾಡುವುದರೊಂದಿಗೆ ಸಿದ್ದರಾಮಯ್ಯನವರು ಮನರೇಗಾ ಯೋಜನೆಯಡಿ ಕೆಲಸದ ದಿನವನ್ನು 150 ದಿನಗಳಿಗೆ ಏರಿಕೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸಾಧ್ಯತೆ ಇದೆ. ಬರ ಪರಿಹಾರ ಬಿಡುಗಡೆ ಸಮಿತಿಯ ಅಧ್ಯಕ್ಷರಾಗಿರುವ ಅಮಿತ್ ಶಾ (Amit Shah) ಅವರನ್ನು ಸಂಸತ್‌ನಲ್ಲಿ ಅವಕಾಶ ಸಿಕ್ಕಲ್ಲಿ ಭೇಟಿಯಾಗಿ ರೈತರ ಸಂಕಷ್ಟಕ್ಕೆ ಶೀಘ್ರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಲಿದ್ದಾರೆ.
ನಿಗಮ ಮಂಡಳಿ ನೇಮಕಾತಿ
ಇದೇ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷ ನೇಮಕಾತಿ ವಿಚಾರದಲ್ಲೂ ಇಂದು ಹೈಕಮಾಂಡ್ ಜೊತೆಗೆ ಸಿಎಂ- ಡಿಸಿಎಂ ಚರ್ಚೆ ಮಾಡಲಿದ್ದಾರೆ. ಇದರ ನೇಮಕಾತಿ ಪ್ರಕ್ರಿಯೆ ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದು, ಇಂದು ವರಿಷ್ಠರ ಜೊತೆಗೆ ಚರ್ಚಿಸಿ ನೇಮಕಕ್ಕೆ ಅನುಮೋದನೆ ಪಡೆಯುವ ಸಾಧ್ಯತೆ ಇದೆ.
ಮೊದಲ ಪಟ್ಟಿಯಲ್ಲಿ 39 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಿರಿ ಸಿಗುವ ಸಾಧ್ಯತೆ ಇದೆ. ಪಟ್ಟಿ ಈಗಾಗಲೇ ಹೈಕಮಾಂಡ್ ಕೈ ಸೇರಿದೆ. ಕಳೆದ 15 ದಿನಗಳ ಹಿಂದೆಯೇ ಬೆಂಗಳೂರಿನಲ್ಲಿ ಸಭೆ ನಡೆಸಿ ಪಟ್ಟಿಯೊಂದನ್ನು ಸಿದ್ಧ ಮಾಡಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಡೆಯಿಂದ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಪಟ್ಟಿಯನ್ನು ಇಂದು ಹೈಕಮಾಂಡ್ ನಾಯಕರು ಪರಿಶೀಲಿಸಲಿದ್ದಾರೆ. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ತಡವಾಗಿದೆ. ಮುಂದಿನ 2-3 ದಿನಗಳಲ್ಲಿ ಪಟ್ಟಿಯನ್ನು ಬಿಡುಗಡೆ ಸಾಧ್ಯತೆ ಇದೆ.
“ನಿಗಮ ಮಂಡಳಿ ವಿಚಾರ ಪ್ರಕ್ರಿಯೆ ಫೈನಲ್ ಮಾಡ್ತೇವೆ. ಖಂಡಿತವಾಗಿಯೂ ಅದನ್ನು ಮಾಡಲೇಬೇಕು. ಎಷ್ಟು ದಿನ ಅಂತ ನಾವು ಮುಂದೂಡಲು ಸಾಧ್ಯ? ಶಾಸಕರದ್ದು ಮೊದಲ ಪಟ್ಟಿಯಲ್ಲಿ ಮಾಡಿ ಮುಗಿಸುತ್ತೇವೆ. 3 ಹಂತದಲ್ಲಿ ನಿಗಮ ಮಂಡಳಿ ಫೈನಲ್ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ- ಶೆಟ್ಟರ್ ರಹಸ್ಯ ಮಾತುಕತೆ; ಲೋಕಸಭೆಗೆ ಮಾಜಿ ಸಿಎಂ?