ಬೆಂಗಳೂರು: ಮುಡಾ ಹಗರಣದಲ್ಲಿ ದೂರು ದಾಖಲಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೆರಡು ದೂರು ದಾಖಲಾಗಿವೆ. 2018 ಮತ್ತು 2023ರ ವಿಧಾನಸಭಾ ಚುನಾವಣೆ ಆಫಿಡವಿಟ್‌ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಸಾಮಾಜಿಕ ಹೋರಾಟಗಾರ, ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ.ಅಬ್ರಹಾಂ ಎರಡು ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.
2018ರ ಚುನಾವಣೆ ವೇಳೆ ಪಾರ್ವತಿ ಸಿದ್ದರಾಮಯ್ಯ ಬಳಿ ಇರುವ 3 ಎಕರೆ 16 ಗುಂಟೆ ಕೃಷಿ ಜಮೀನು ಎಂದು ಅಫಿಡವಿಟ್‌ನಲ್ಲಿ ನಮೂದು ಮಾಡಲಾಗಿದೆ ಇದರ ಮೌಲ್ಯ ಕೇವಲ 25 ಲಕ್ಷ ಎಂದು ನಮೂದಿಸಲಾಗಿತ್ತು. ಆದರೆ 2005 ರಲ್ಲಿಯೇ ಜಮೀನು ಪರಿವರ್ತನೆ ಮಾಡಿಸಿದ್ದ ದಾಖಲೆ ನೀಡಿ, ಮೊದಲ ದೂರು ಸಲ್ಲಿಸಲಾಗಿದೆ.
ಇನ್ನು 2023ರ ಚುನಾವಣೆ ವೇಳೆ 14 ಮುಡಾ ಸೈಟುಗಳ ಮೌಲ್ಯ ಕೇವಲ 8 ಕೋಟಿ ಎಂದು ಅಫಿಡವಿಟ್‌ನಲ್ಲಿ ನಮೂದು ಮಾಡಲಾಗಿದೆ. ಆದರೆ, 14 ಸೈಟುಗಳ ಅಸಲಿ ಮಾರುಕಟ್ಟೆ ಮೌಲ್ಯ 34 ಕೋಟಿಯಾಗಿದ್ದು, ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಮಾಹಿತಿ ತಪ್ಪು ನೀಡಿದ್ದಾರೆ ಎಂದು ಎರಡನೇ ದೂರು ನೀಡಲಾಗಿದೆ.
ಸಿಎಂ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010ರಲ್ಲಿ ಈ ಜಾಗವನ್ನು ಗಿಫ್ಟ್ ಡೀಡ್ ಆಗಿ ನೋಂದಣಿ ಮಾಡಿದ್ದಾರೆ. ಈ ಜಾಗದ ಮೂಲ ಮಾಲೀಕರು ದೇವರಾಜು ಮತ್ತು ಕುಟುಂಬಸ್ಥರು ಆಗಿದ್ದು. 2004ರ ಆಗಸ್ಟ್ 25ರಂದು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಈ ಜಾಗವನ್ನು ಮಾರಾಟ ಮಾಡಿದ್ದಾರೆ. 2013ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ವಾರ್ಷಿಕ ರಿಟರ್ನ್ ಲೋಕಾಯುಕ್ತಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಪತ್ನಿ ಬಳಿ ಇದ್ದ ನಿವೇಶನದ ವಿವರವನ್ನು ಉಲ್ಲೇಖಿಸಿದ್ದಾರೆ. ಆದರೆ 2013ರ ಚುನಾವಣೆಯ ಅಫಿಡವಿಟ್ ಸಲ್ಲಿಸುವಾಗ ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡಿಲ್ಲ.
ಇದನ್ನೂ ಓದಿ | 7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ
ಕೃಷಿ ಭೂಮಿಯ ಬಗ್ಗೆಯ ಮಾಹಿತಿ ನೀಡದೇ ಸುಳ್ಳು ಅಫಿಡವಿಟ್ ಸಲ್ಲಿಸಿದ್ದು, ಜನಪ್ರತಿ ನಿಧಿ ಕಾಯ್ದೆ ಸೆಕ್ಷನ್ 125 ಎ ಮತ್ತು ಸೆಕ್ಷನ್ 8 ಉಲ್ಲಂಘನೆ. ಸುಳ್ಳು ದಾಖಲೆ ಸಲ್ಲಿಸಿದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ 227, 229, 231, 236, 202 ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಟಿಜೆ ಅಬ್ರಹಾಂ ಮನವಿ ಮಾಡಿದ್ದಾರೆ.
ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಏಳನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಈ ಆಯೋಗ (7th Pay Commission) ವರದಿಯನ್ನು ನೀಡಿದ್ದು, ಆಗಸ್ಟ್ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಜಾರಿ ಮಾಡಲಾಗುತ್ತದೆ. ಶೇ. 31ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದ್ದು, ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭಾ ಕಲಾಪದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಷ್ಕರಿಸಲು 2022ರ ನ.19ರಂದು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು. ಅದರಂತೆ, ವೇತನ ಆಯೋಗವು 2024ರ ಮಾರ್ಚ್ 24ರಂದು ಅಂತಿಮ ವರದಿ ಸಲ್ಲಿಸಿದೆ.
7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ಇದೇ ಆಗಸ್ಟ್ 1ರಿಂದ ಅನುಷ್ಠಾನಗೊಳಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದರಂತೆ, 01.07.2022ಕ್ಕೆ ನೌಕರರ ಮೂಲ ವೇತನಕ್ಕೆ ಶೇಕಡ 31ರಷ್ಟು ತುಟ್ಟಿ ಭತ್ಯೆ ಮತ್ತು ಶೇ. 27.50 ರಷ್ಟು ಫಿಟ್‌ಮೆಂಟ್ ಸೇರಿಸಿ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ 58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | 7th Pay Commission: ರಜೆ, ಪಿಂಚಣಿ, ಬಡ್ತಿ; 7ನೇ ವೇತನ ಆಯೋಗದ ಜಾರಿ ಬಳಿಕ ಸಂಬಳದ ಜತೆ ಏನೆಲ್ಲ ಸೌಲಭ್ಯ ಸಿಗಲಿವೆ? ಇಲ್ಲಿದೆ ಮಾಹಿತಿ
ನೌಕರರ ಕನಿಷ್ಠ ಮೂಲವೇತನವು 17,000 ರಿಂದ ರೂ. 27,000ಕ್ಕೆ, ಗರಿಷ್ಠ ವೇತನವು 1,50,600 ರಿಂದ 2,41,200 ಗಳಿಗೆ ಪರಿಷ್ಕರಣೆಯಾಗುತ್ತದೆ. ನೌಕರರ ಕನಿಷ್ಠ ಪಿಂಚಣಿಯು 8,500 ರಿಂದ 13,500ಕ್ಕೆ ಮತ್ತು ಗರಿಷ್ಠ ಪಿಂಚಣಿಯು 75,300 ರಿಂದ ರೂ. 1,20,600ಕ್ಕೆ ಪರಿಷ್ಕರಣೆಗೊಳ್ಳುತ್ತದೆ. ಈ ಪರಿಷ್ಕರಣೆಯು, ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ.
ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 20,208 ರೂ. ಕೋಟಿಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.