ಬೆಂಗಳೂರು: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Tour) ಅವರು ಸೋಮವಾರ (ಆ.೧) ಭೇಟಿ ನೀಡಲಿದ್ದು, ಜಿಲ್ಲಾಡಳಿತದ ಜತೆಗೆ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
ಸೋಮವಾರ ದಾವಣಗೆರೆ, ಕೊಪ್ಪಳ ಜಿಲ್ಲಾ ಪ್ರವಾಸವನ್ನು ಕೈಗೊಂಡಿರುವ ಸಿಎಂ ಬೊಮ್ಮಾಯಿ ಅವರು ಅಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮೇಶ್ವರ ರಥ ವಜ್ರ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 12 ಗಂಟೆ ವೇಳೆಗೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಭೇಟಿ ನೀಡಲಿದ್ದಾರೆ.
ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಚರ್ಚೆ
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಬಗ್ಗೆ ಜಿಲ್ಲಾಡಳಿತದ ಜತೆ ಸಭೆ ನಡೆಸಲಿರುವ ಸಿಎಂ ಬೊಮ್ಮಾಯಿ, ಅಗತ್ಯ ಸಲಹೆ, ಸೂಚನೆಗಳನ್ನು ನೀಡುವುದಲ್ಲದೆ, ಯೋಜನೆ ಅನುಷ್ಠಾನ ಸಂಬಂಧ ಸ್ಥಳೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಂಜನಾದ್ರಿ ಅಭಿವೃದ್ಧಿಗಾಗಿ ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂಪಾಯಿಯನ್ನು ಸಿಎಂ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಸಭೆ ಭಾರಿ ಮಹತ್ವವನ್ನು ಪಡೆದುಕೊಂಡಿದೆ.
ಅಯೋಧ್ಯೆ ಮಾದರಿ ಹನುಮ ಜನ್ಮಭೂಮಿ
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ನಿರ್ಮಾಣ ಮಾಡಿದಂತೆ ಕೊಪ್ಪಳದ ಅಂಜನಾದ್ರಿಯಲ್ಲಿ ಹನುಮ ಜನ್ಮಭೂಮಿ ಅಭಿವೃದ್ಧಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಹೇಳಿದ್ದರು. ಹನುಮಂತನ ಜನ್ಮಭೂಮಿಯ ಅಭಿವೃದ್ಧಿ ಮಾಡುವುದರಿಂದ ಧಾರ್ಮಿಕ ಕ್ಷೇತ್ರಕ್ಕೆ ಇನ್ನಷ್ಟು ಮನ್ನಣೆ ದೊರೆಯುವುದರ ಜತೆಗೆ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಆಸ್ಪತ್ರೆ ಉದ್ಘಾಟನೆ
ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಬಳಿಕ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಸಂಜೆ 5 ಗಂಟೆಗೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಇದನ್ನೂ ಓದಿ | ವೇದವಾಕ್ಯ ಅಲ್ಲ ಅವನು ಹೇಳಿದ್ದು: ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಸಿಎಂ ಬೊಮ್ಮಾಯಿ