Site icon Vistara News

Bank Fraud | ಕೋಆಪರೇಟಿವ್‌ ಬ್ಯಾಂಕ್‌ ಧೋಖಾ; ಠೇವಣಿ ಕೇಳಿದರೆ ಬ್ಯಾಂಕ್‌ನಿಂದ ಜೀವ ಬೆದರಿಕೆ

shusruti bank

ಬೆಂಗಳೂರು: ರಾಜ್ಯದಲ್ಲಿ ಸಹಕಾರ ಬ್ಯಾಂಕ್‌ಗಳ (Bank Fraud) ದೋಖಾ ಪ್ರಕರಣಗಳು ಹೆಚ್ಚುತ್ತಲಿದ್ದು, ಆ ಪಟ್ಟಿಗೆ ಈಗ ರಾಜಧಾನಿಯ ಶುಶೃತಿ ಸೌಹಾರ್ಧ ಸಹಕಾರ ಬ್ಯಾಂಕ್‌ ಸೇರ್ಪಡೆಗೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ಈ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದ್ದು, ಹಣ ವಾಪಸ್‌ ಕೇಳಿದರೆ ಧಮ್ಕಿ ಹಾಕಲಾಗುತ್ತಿದೆ ಎಂದು ದೂರು ದಾಖಲಾಗಿದೆ.

ಶುಶೃತಿ ಕೋಆಪರೇಟಿವ್‌ ಬ್ಯಾಂಕ್‌ ಮೇಲೆ ಈಗ ಬೆಂಗಳೂರಿನ ಹಲವು ಕಡೆ ದೂರು ದಾಖಲಾಗಿದೆ. ಹಣ ಕೇಳಿದವರಿಗೆ ಬೆದರಿಕೆ ಹಾಕಲಾಗುತ್ತಿದ್ದು, ಸಂತ್ರಸ್ತರು ಈಗ ಕಾನೂನಿನ ಮೊರೆ ಹೋಗಿದ್ದಾರೆ. ಈ ಮೊದಲು ವಿಲ್ಸನ್ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಸದಾಶಿವನಗರ, ಸಂಜಯ್ ನಗರ, ಯಲಹಂಕ‌,‌ ಕೊಡಿಗೇಹಳ್ಳಿ ಸೇರಿದಂತೆ ಹಲವೆಡೆ ವಂಚನೆ ದೂರು ದಾಖಲಾಗಿದೆ. ಶುಶೃತಿ ಬ್ಯಾಂಕ್‌ನ ಸ್ಥಾಪಕ‌ ಶ್ರೀನಿವಾಸ ಮೂರ್ತಿ, ಪುತ್ರಿ ಮೋಕ್ಷತಾರ, ಪತ್ನಿ ಧಾರಿಣಿದೇವಿ ಸೇರಿ ಏಳು ಜನರ ಮೇಲೆ ವಂಚನೆ ಪ್ರಕರಣ ದಾಖಲು ಮಾಡಲಾಗಿದೆ.

ಶುಶೃತಿ ಬ್ಯಾಂಕ್‌ನ ಸ್ಥಾಪಕ‌ ಶ್ರೀನಿವಾಸ ಮೂರ್ತಿ

ಹಣ ವಾಪಸ್‌ ಕೇಳಿದ್ದಕ್ಕೆ ಧಮ್ಕಿ
ಹನೀಫ್ ಎಂಬುವವರು 1.೫೪ ಕೋಟಿ‌ ರೂಪಾಯಿ ಠೇವಣಿ ಇಟ್ಟಿದ್ದರು. ಅವರು ತಮಗೆ ಅವಶ್ಯಕತೆ ಬಂದಿದ್ದಕ್ಕೆ ಠೇವಣಿ ಹಿಂಪಡೆಯುವುದಾಗಿ ಹೇಳಿದ್ದಾರೆ. ಆದರೆ, ಮೊದ ಮೊದಲು ಸತಾಯಿಸಿದ ಬ್ಯಾಂಕ್‌ನವರು ಬಳಿಕ ಧಮ್ಕಿ ಹಾಕಿದ್ದಾರೆ ಎಂದು ಹನೀಫ್‌ ದೂರು ನೀಡಿದ್ದಾರೆ. ಈಗ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bank Fraud | ಹೂಡಿಕೆ ಮಾಡಿದ್ದ ಹಣ ವಾಪಸ್‌ ಕೇಳಿದರೆ ಧಮ್ಕಿ; ಕೋಆಪರೇಟಿವ್‌ ಬ್ಯಾಂಕ್‌ನಿಂದ ವಂಚನೆ ಆರೋಪ

ನಿವೃತ್ತದಾರರ ಠೇವಣಿಯೇ ಹೆಚ್ಚು
ವಿಲ್ಸನ್ ಗಾರ್ಡನ್, ಪೀಣ್ಯಾ, ಚಿಕ್ಕಲಸಂದ್ರ, ರಾಜಗೋಪಾಲನಗರದಲ್ಲಿ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ಶಾಖೆ ಹೊಂದಿದ್ದು, ಸಾವಿರಾರು ಮಂದಿ ಠೇವಣಿದಾರರನ್ನು ಹೊಂದಲಾಗಿದೆ. ಮುಖ್ಯವಾಗಿ ಹಣ ಹೂಡಿಕೆದಾರರ ಪೈಕಿ ಹಿರಿಯ ನಾಗರಿಕರು, ನಿವೃತ್ತ ಸರ್ಕಾರಿ ಅಧಿಕಾರಿಗಳೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಬಡ್ಡಿ ಆಮಿಷ
ಬೇರೆ ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ಶುಶೃತಿ ಬ್ಯಾಂಕ್‌ ಆಮಿಷವೊಡ್ಡಿತ್ತು. ಆರಂಭದಲ್ಲಿ ವಾರ್ಷಿಕ ಶೇ.೯ ಬಡ್ಡಿ ನೀಡಲಾಗುತ್ತಿತ್ತು. ಆ ಬಳಿಕ ಶೇ. ೪ಕ್ಕೆ ಬಡ್ಡಿಯನ್ನು ಸೀಮಿತಗೊಳಿಸಲಾಗಿತ್ತು. ಇದರಿಂದ ಬೇಸರಗೊಂಡ ಹಲವರು ಹಣವನ್ನು ವಾಪಸ್‌ ಪಡೆಯಲು ಮುಂದಾಗಿದ್ದರು. ಆಗ ಬ್ಯಾಂಕ್‌ನವರ ಅಸಲಿಯತ್ತು ಹೊರಬಂದಿದ್ದು, ಹಣ ವಾಪಸ್‌ ಕೇಳಿದ್ದಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಹಕಾರ ಬ್ಯಾಂಕ್‌ಗಳ ಅವ್ಯವಹಾರ
ಬೆಂಗಳೂರಿನಲ್ಲಿ ಗುರು ರಾಘವೇಂದ್ರ ಕೋಆಪರೇಟಿವ್‌ ಬ್ಯಾಂಕ್‌, ವಶಿಷ್ಠ ಕೋಆಪರೇಟಿವ್‌ ಬ್ಯಾಂಕ್‌ ಹಾಗೂ ಸಿರಿ ವೈಭವ ಪತ್ತಿನ ಸಹಕಾರಿ ಬ್ಯಾಂಕ್‌, ಯಾದಗಿರಿಯ ಶ್ರೀ ರೇವಣಸಿದ್ದೇಶ್ವರ ವಿವಿಧೋದ್ದೇಶ ಸಹಕಾರ ಸಂಘ ನಿ. ಬ್ಯಾಂಕ್‌ಗಳಲ್ಲಿ ಈಗಾಗಲೇ ವಂಚನೆಯಾಗಿದ್ದು, ಈ ಸಾಲಿಗೆ ಈಗ ಶುಶೃತಿ ಕೋಆಪರೇಟಿವ್‌ ಬ್ಯಾಂಕ್‌ ಸೇರಿದೆ.

ಇದನ್ನೂ ಓದಿ | Fraud Case | ಪ್ರೇಯಸಿಯ ಪ್ರೀತಿಯ ಲೆಕ್ಕದಲ್ಲಿ ಗೆದ್ದ, ಆಡಿಟಿಂಗ್‌ ವೇಳೆ SDA ಅಧಿಕಾರಿ ಸಿಕ್ಕಿಬಿದ್ದ!

Exit mobile version