ಕರಾವಳಿ ಕರ್ನಾಟಕ ತನ್ನ ಒಡಲಲ್ಲಿ ವಜ್ರದಂಥ ಪ್ರವಾಸಿ ತಾಣಗಳನ್ನು ಹುದುಗಿಸಿಟ್ಟುಕೊಂಡಿದೆ. ಬೇಸಿಗೆಯಲ್ಲಿ ಬಿಸಿಲಿನಿಂದ ಹೊಳೆಯುವ ಇವು, ಮಳೆಗಾಲದಲ್ಲಿ ಅಷ್ಟೇ ಹಸಿರಿನಿಂದ, ಅಲೆಗಳಿಂದ, ಥಳಥಳನೆ ಕಂಗೊಳಿಸುತ್ತವೆ. ಇಲ್ಲಿನ ನದಿಗಳು, ಸಮುದ್ರತೀರ, ಮರಳು, ತೆಂಗಿನ ಮರಗಳು, ಹಳೆಯ ಮನೆಗಳು ನಿಮ್ಮನ್ನು ಕೇರಳದ ಯಾವುದೋ ಹಳ್ಳಿಮೂಲೆಗೆ ಕರೆದೊಯ್ದಂತೆ ಭಾಸವಾಗುತ್ತವೆ. ಮಳೆಗಾಲದ ರಜೆಗಳನ್ನು ಆನಂದವಾಗಿ ಫ್ಯಾಮಿಲಿ ಸಮೇತ ಕಳೆಯಲು ಈ ಕೆಳಗಿನ ಕರಾವಳಿ ತಾಣಗಳು (Coastal Karnataka travel) ಬೆಸ್ಟ್. ಇಲ್ಲಿನ ಹಚ್ಚಹಸಿರು ಪ್ರಕೃತಿ, ನೀಲಿ ಸಮುದ್ರದ ಜತೆಗೆ ಸ್ಥಳೀಯ ಫುಡ್ ಐಟಮ್‌ಗಳು ಕೂಡ ನಿಮ್ಮನ್ನು ಖುಷಿಪಡಿಸುತ್ತವೆ.
ಮಂಗಳೂರು
ಮಂಗಳೂರು ಸುಂದರವಾದ ಕರಾವಳಿ ಪಟ್ಟಣ. ಬಾಯಲ್ಲಿ ನೀರೂರಿಸುವ ಆಹಾರದಿಂದ ಹಿಡಿದು ಸುಂದರವಾದ ಬೀಚ್‌ಗಳವರೆಗೆ ಇಲ್ಲಿದೆ. ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ಸ್ವಲ್ಪ ದೂರದಲ್ಲಿರುವ ಉಳ್ಳಾಲ, ಸೋಮೇಶ್ವರ ಬೀಚ್ ಆನಂದ ನೀಡುತ್ತವೆ. ಇಲ್ಲಿನ ಗೋಡಂಬಿ ಕಾರ್ಖಾನೆ, ಕದ್ರಿ ಮಂಜುನಾಥ ದೇವಸ್ಥಾನ, ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಸುಲ್ತಾನ್ ಬತ್ತೇರಿ, ಪಣಂಬೂರು ಬಂದರುಗಳ ಭೇಟಿ, ರಾಮ್‌ಪ್ರಸಾದ್ ಹೋಟೆಲ್ ತುಪ್ಪದೋಸೆ, ಪಬ್ಬಾಸ್‌ನಲ್ಲಿ ಐಸ್‌ಕ್ರೀಮ್ ಸವಿಯುವುದು ಮರೆಯಬೇಡಿ.
ಉಡುಪಿ
ಇದೂ ದೇವಾಲಯಗಳ ನಗರವೇ. ಉಡುಪಿಯ ಹೆಚ್ಚು ಜನನಿಬಿಡ ಸ್ಥಳಗಳೆಂದರೆ ದೇವಾಲಯಗಳು- ಉಡುಪಿ ಶ್ರೀ ಕೃಷ್ಣ ದೇವಸ್ಥಾನ, ಅನಂತೇಶ್ವರ ದೇವಸ್ಥಾನ ಇತ್ಯಾದಿ. ಇಲ್ಲಿಯೇ ಹತ್ತಿರದಲ್ಲಿರುವ ಶಿಕ್ಷಣ ಕಾಶಿ ಮಣಿಪಾಲವನ್ನೂ ವೀಕ್ಷಿಸಬಹುದು. ಅಲೆಗಳು ಇಲ್ಲದಿದ್ದರೆ ಸೇಂಟ್ ಮೇರಿಸ್ ದ್ವೀಪಕ್ಕೆ ತೆರಳಬಹುದು. ಸನಿಹದಲ್ಲಿ ಮಲ್ಪೆ ಬೀಚ್ ಹಾಗೂ ಕಾಪು ಬೀಚ್‌ಗಳಿವೆ. ಕಾಪು ದ್ವೀಪಸ್ತಂಭ ಮತ್ತು ಅಲ್ಲಿಂದ ಕಾಣುವ ನೋಟ ಮನೋಹರವಾಗಿವೆ.
ಗೋಕರ್ಣ
ಗೋಕರ್ಣವು ಇಡೀ ಭಾರತದ ಪ್ರಾಕೃತಿಕ ಸ್ವರ್ಗ. ಇದು ಬಡವರ ಗೋವಾ ಅಂತಲೂ ಜನಪ್ರಿಯ. ರಜಾದಿನಗಳಿಗೆ ಪರಿಪೂರ್ಣವಾದ ಶಾಂತಿಯುತ ಬೀಚ್ ಪಟ್ಟಣ. ಕಡಲತೀರಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿ. ಮಳೆಗಾಲದಲ್ಲಿ ಅಬ್ಬರಿಸುವ ಇಲ್ಲಿರುವ ಕೆಲವು ಪ್ರಸಿದ್ಧ ಕಡಲತೀರಗಳು- ಓಂ ಬೀಚ್, ಕುಡ್ಲೆ ಬೀಚ್, ಪ್ಯಾರಡೈಸ್ ಬೀಚ್, ಹಾಫ್ ಮೂನ್ ಬೀಚ್. ಮಹಾಬಲೇಶ್ವರ ದೇವಾಲಯದಲ್ಲಿ ಆಧ್ಯಾತ್ಮಿಕ ಅನುಭೂತಿಯನ್ನೂ ಅನುಭವಿಸಬಹುದು ಇಲ್ಲಿ. ಆತ್ಮಲಿಂಗದ ಮೂಲಕ ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸುತ್ತದೆ.
ಕುಮಟಾ
ಸುಂದರವಾದ ಕಡಲತೀರಗಳನ್ನು ಹೊಂದಿದ ಕುಮಟಾದ ಬೀದಿಗಳು ಹಾಗೂ ಬೀಚ್‌ಗಳು ಇನ್ನೂ ವಾಣಿಜ್ಯೀಕರಣಗೊಂಡಿಲ್ಲ. ಹೀಗಾಗಿ ಇಲ್ಲಿ ಪ್ರವಾಸಿಗರ ಹಾವಳಿಯೂ ಅಷ್ಟಿಲ್ಲ. ಹೀಗಾಗಿ ನೀವು ನಿಮ್ಮ ಖಾಸಗಿ ದ್ವೀಪದಲ್ಲಿದ್ದಂತೆ ಅನಿಸುತ್ತದೆ. ಸ್ಥಳೀಯರು ಮುಗ್ಧತೆ ಹಾಗೂ ಪ್ರೀತಿಯಿಂದ ನಿಮ್ಮನ್ನು ಸ್ವಾತಿಸುತ್ತಾರೆ. ನಿರ್ವಾಣ ಮುಂತಾದ ಬೀಚ್‌ಗಳು ಪರಿಶುಭ್ರವಾಗಿವೆ.
ಮುರುಡೇಶ್ವರ
ಕಡಲ ತೀರದ ಈ ಪಟ್ಟಣ ಭಗವಾನ್ ಶಿವನ ಬೃಹತ್ ಪ್ರತಿಮೆಗೆ ನೆಲೆ. ವಿಶ್ವದ ಎರಡನೇ ಅತಿ ದೊಡ್ಡ ಶಿವನ ಪ್ರತಿಮೆ ಇದು. ಮುರುಡೇಶ್ವರ ದೇವಾಲಯ ರಾಜ್ಯದ ಭವ್ಯ ದೇವಾಲಯಗಳಲ್ಲಿ ಒಂದು. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಇಲ್ಲಿನ ಬೀಚ್, ಮಿರ್ಜಾನ್ ಕೋಟೆ, ಪ್ರತಿಮೆ ಪಾರ್ಕ್ ಹೆಚ್ಚು ಭೇಟಿ ಕಾಣುವ ಪ್ರವಾಸಿ ತಾಣಗಳು. ಇಲ್ಲಿಂದ ನೇತ್ರಾಣಿ ದ್ವೀಪಕ್ಕೂ ಹೋಗಬಹುದು. ಆದರೆ ಮಳೆ ಜೋರಿದ್ದರೆ ಸಾಧ್ಯವಿಲ್ಲ.
ಇದನ್ನೂ ಓದಿ: Monsoon Travel Tips: ʻಮಳೆಗಾಲದಲ್ಲಿ ಪ್ರವಾಸʼ ಎಂಬ ದಿವ್ಯಾನುಭೂತಿ: ಹೊರಡುವಾಗ ಇವಿಷ್ಟು ನೆನಪಿರಲಿ!
ಕಾರವಾರ
ಇಲ್ಲಿ ಕಾಳಿ ನದಿಯು ಅರಬಿ ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ. ಕಾರವಾರವು ಕಡಲ ತೀರವೂ ಶಾಂತ ಹಾಗೂ ಶುದ್ಧವಾಗಿದೆ. ತನ್ನ ಅಧಿಕೃತ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹೋದರೆ ಮೀನಿನ ಖಾದ್ಯ ಸೇವಿಸುವುದು ಮರೆಯಬೇಡಿ. ಹಲವು ದೇವಾಲಯಗಳೂ ಇವೆ. ಇಲ್ಲಿನ ಟಾಗೋರ್ ಬೀಚ್‌ನಲ್ಲಿ, ರವೀಂದ್ರನಾಥ್ ಟಾಗೋರ್ ಅವರು ಹಲವು ಕಾಲ ತಂಗಿದ್ದು, ವಿಹರಿಸಿದ್ದರು. ಕಾರವಾರದ ಪ್ರಸಿದ್ಧ ದೇವಾಲಯಗಳಲ್ಲಿ ನಾಗನಾಥ ದೇವಾಲಯವೂ ಒಂದು.
ಮರವಂತೆ
ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿದೆ. ಪ್ರಕೃತಿಯ ಅದ್ಭುತವನ್ನು ವೀಕ್ಷಿಸಲು ಸೂಕ್ತ ತಾಣವಿದು. ಹೆದ್ದಾರಿಯ ಒಂದು ಬದಿಗೆ ಅಬ್ಬರಿಸುವ ಅರಬ್ಬಿ ಕಡಲು, ಇನ್ನೊಂದು ಬದಿಗೆ ಸೌಮ್ಯವಾಗಿ ಹರಿಯುವ ಸೌಪರ್ಣಿಕಾ ನದಿ. ಸುಂದರವಾದ ಕೊಡಚಾದ್ರಿ ಬೆಟ್ಟಗಳನ್ನು ಹಿನ್ನೆಲೆಯಲ್ಲಿ ವೀಕ್ಷಿಸಬಹುದು. ಇಲ್ಲಿ ರೈಡ್ ಹೋಗಬಹುದು ಅಥವಾ ಶಾಂತವಾಗಿ ಸಮಯ ಕಳೆಯಬಹುದು.
ಇದನ್ನೂ ಓದಿ: Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!