ಮಾರುತಿ ಪಾವಗಡ, ಬೆಂಗಳೂರು
ರಾಜ್ಯದಲ್ಲಿ ಅನಿರೀಕ್ಷಿತವಾಗಿ ಆದ ನಾಯಕತ್ವ ಬದಲಾವಣೆಯ ಸನ್ನಿವೇಶದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಆದರೆ ಯಡಿಯೂರಪ್ಪ ಅವರ ಬಳಿಕ ಮುಂದೆ ಯಾರು ಎಂದು ವರಿಷ್ಠರು ತಲೆ ಕೆಡಿಸಿಕೊಂಡಾಗ, ಯೂಡಿಯೂರಪ್ಪ ಅವರೇ ಸ್ವತಃ ಬೊಮ್ಮಾಯಿ ಹೆಸರು ಸೂಚಿಸಿದ್ದರು. ಅದರಂತೆ ವರಿಷ್ಠರು ಬೊಮ್ಮಾಯಿಗೆ ರಾಜ್ಯ ಸರ್ಕಾರದ ನಾಯಕತ್ವ ಪಟ್ಟು ಕಟ್ಟಿ ದೆಹಲಿಗೆ ಹೋದರು.
ತಮ್ಮ ನಾಯಕ ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ತಮ್ಮ ಮೇಲೆ ಇಟ್ಟ ಗೌರವಕ್ಕೆ ಧಕ್ಕೆ ಬರದಂತೆ ತಮ್ಮ ಮುಂದೆ ಬಂದ ಹಲವು ಸವಾಲುಗಳನ್ನು ಎದುರಿಸಿ ಬೊಮ್ಮಾಯಿ ಗೆದ್ದು ಬೀಗಿದರು. ಅವರ ರಾಜ್ಯಾಡಳಿತಕ್ಕೆ ಈಗ ಒಂದು ವರ್ಷ.
ಅಂದು ಬೊಮ್ಮಾಯಿ ಸಿಎಂ ಆದಾಗ ಸ್ವಪಕ್ಷದ ಕೆಲ ನಾಯಕರೇ ಮೂಗು ಮುರಿದಿದ್ದರು. ʻಈ ಬೊಮ್ಮಾಯಿ ಜನತಾ ಪರಿವಾರದಿಂದ ಬಂದವರು. ಪಕ್ಷಕ್ಕೆ ಸೇರ್ಪಡೆಯಾಗಿ 13 ವರ್ಷಗಳಾಗಿವೆ ಅಷ್ಟೆ. ಇವರು ಬಿಜೆಪಿ ಸಿದ್ಧಾಂತಕ್ಕೆ ಒಗ್ಗಿಕೊಳ್ಳುವುದು ಕಷ್ಟ. ರಾಜ್ಯದ ನಾಯಕತ್ವ ಗುರುತಿಸುವಲ್ಲಿ ವಿಫಲವಾದೆವು ಎಂಬುದು ವರಿಷ್ಠರಿಗೆ ಕೆಲವೇ ತಿಂಗಳಲ್ಲಿ ಮನವರಿಕೆ ಆಗುತ್ತದೆ. ಮತ್ತೆ ಅವಕಾಶ ಬಂದಾಗ ಸೂಟ್ ಬೂಟ್ ಹಾಕಿಕೊಂಡು ರೆಡಿಯಾಗಿರೋಣʼ ಎಂದುಕೊಂಡವರೇ ಹೆಚ್ಚು! ಆದರೆ ಬೊಮ್ಮಾಯಿ ವಿರುದ್ಧ ಮಾತನಾಡಿದವರೇ ಕಳೆದ ಒಂದು ವರ್ಷದಲ್ಲಿ ಅವರ ನಾಯಕತ್ವ ಒಪ್ಪುವಷ್ಟರ ಮಟ್ಟಿಗೆ ದೆಹಲಿ ನಾಯಕರ ಮುಂದೆ ಭೇಷ್ ಎನ್ನಿಸಿಕೊಂಡಿದ್ದಾರೆ.
ಬೊಮ್ಮಾಯಿ ಮಾಡಿದ ಮ್ಯಾಜಿಕ್ ಏನು?
ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಸಾಥ್ ಇದ್ದರೂ ಇತರೆ ನಾಯಕರ ಭಯ ಕಾಡುತ್ತಲೇ ಇತ್ತು. ಸಿಎಂ ಕುರ್ಚಿಯ ಮೇಲೆ ಟವೆಲ್ ಹಾಕಿದ್ದ ನಾಯಕರು ಎಲ್ಲಿ ದೆಹಲಿ ನಾಯಕರಿಗೆ ಏನು ಹೇಳಿಬಿಡುತ್ತಾರೆಯೋ ಎನ್ನುವ ಭಯದಿಂದಲೇ ಕೆಲಸ ಶುರು ಮಾಡಿದರು. ತಮ್ಮ ಅವಧಿಯಲ್ಲಿ ಮೊದಲ ಟಾಸ್ಕ್ ಎಂದು ಬಂದಿದ್ದು ಕೊರೋನಾ ಮತ್ತು ನೆರೆ ನಿರ್ವಹಣೆ. ಈ ಎರಡು ಸಮಸ್ಯೆಗಳನ್ನು ಬಹಳ ದಿಟ್ಟತನದಿಂದ ನಿರ್ವಹಿಸಿದರು. ಯಡಿಯೂರಪ್ಪ ಸಮಯದಲ್ಲಿ ಒತ್ತಡ ಹೆಚ್ಚಾಗಿದ್ದಾಗ ಕೊರೋನಾ ನಿರ್ವಹಣೆ ದೋಷಗಳು ಮೂರನೇ ಅಲೆಯಲ್ಲಿ ಆಗದಂತೆ ಯಶಸ್ವಿಯಾಗಿ ನಿರ್ವಹಣೆ ಮಾಡಿ ಸಾವು ನೋವುಗಳನ್ನು ಕಡಿಮೆ ಮಾಡಿದರು. ಅಷ್ಟರ ವೇಳೆಗೆ ಜನರಲ್ಲಿ ಮೂಡಿದ್ದ ಜಾಗೃತಿ, ಔಷಧ ಅಭಿವೃದ್ಧಿಯೂ ಬೊಮ್ಮಾಯಿ ಅವರ ಸಹಾಯಕ್ಕೆ ಬಂದವು. ಕೊರೋನಾ ಸಮಯದಲ್ಲಿ ಪ್ರಧಾನಿ ನಡೆಸಿದ ಮುಖ್ಯಮಂತ್ರಿಗಳ ಕಾನ್ಫರೆನ್ಸ್ಲ್ಲಿ ಕರ್ನಾಟಕ ಮಾಡೆಲ್ ಕುರಿತು ಒತ್ತಿ ಹೇಳುವಷ್ಟರ ಮಟ್ಟಿಗೆ ಬೊಮ್ಮಾಯಿ ಗಮನ ಸೆಳೆದರು.
ಇದನ್ನೂ ಓದಿ | ಬೊಮ್ಮಾಯಿ ವರ್ಷೋತ್ಸವ: ಸಿಎಂ ಮಾತು ಕೇಳಬೇಕೆಂದರೆ ರಾಜಕೀಯೇತರ ಕಾರ್ಯಕ್ರಮಕ್ಕೆ ಹೋಗಬೇಕು
ಕೊರೋನಾ ಬಳಿಕ ಮಲೆನಾಡು ಭಾಗದಲ್ಲಿ ನೆರೆ ಕಾಣಿಸಿಕೊಂಡಿತ್ತು. ಉತ್ತರ ಕರ್ನಾಟಕದ ಬಾಗದ ಕೆಲ ಜಿಲ್ಲೆಗಳಲ್ಲೂ ಹಿಂಗಾರು ಮಳೆಯ ಅಬ್ಬರದಿಂದಾಗಿ ರೈತರು ಬೆಳೆದ ಬೆಳೆ ಭಾರಿ ನಷ್ಟವಾಯಿತು. ಕೂಡಲೇ ಎಚ್ಚೆತ್ತುಕೊಂಡ ಸಿಎಂ ಸ್ಥಳಕ್ಕೆ ಭೇಟಿ ನೀಡಿದಷ್ಟೇ ಅಲ್ಲ, ಕೂಡಲೇ ಪರಿಹಾರ ಘೋಷಣೆ ಮಾಡಿದರು. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ಒದಗಿಸಿದರು. ಸಿಎಂ ಬೊಮ್ಮಾಯಿ ಅವರ ಈ ನಡೆ ರಾಜ್ಯದ ಜನರಲ್ಲಿ ಸರ್ಕಾರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಬರುವಂತೆ ಮಾಡಿತು.
ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಮಳೆಗೆ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿತು. ಆಗ ನಗರ ಪ್ರದಕ್ಷಿಣೆ ಮಾಡುವ ಮೂಲಕ ಬೊಮ್ಮಾಯಿ ನಗರದ ಸಮಸ್ಯೆಗಳನ್ನು ಆಲಿಸಿದರು. ಬಿಬಿಎಂಪಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಹೀಗಾಗಿ ನಗರದ ಜನತೆ ಸಿಎಂ ಸಕ್ರಿಯವಾಗಿ ಕೆಲಸ ಮಾಡ್ತಿದ್ದಾರೆ ಎನ್ನುವ ಭಾವನೆ ಬರಲು ಕಾರಣವಾಯಿತು.
ಬಿಜೆಪಿ ವರಿಷ್ಠರು ಕಾಲಕಾಲಕ್ಕೆ ಸರ್ಕಾರದ ಬಗ್ಗೆ ರಾಜ್ಯ ಘಟಕದಿಂದ ಮಾಹಿತಿ ಪಡೆದಿದ್ದಾರೆ. ಕೆಲಸ ಹೆಚ್ಚು ಮಾಡಿ ಮಾತು ಕಡಿಮೆ ಆಡುವುದು ಬೊಮ್ಮಾಯಿ ಸ್ಟೈಲ್. ಎಲ್ಲವನ್ನೂ ನಾನೇ ಮಾಡಿದೆ, ನನ್ನಿಂದಲೇ ಎಲ್ಲವೂ ಎನ್ನುವ ಮನಸ್ಥಿತಿ ಬೊಮ್ಮಾಯಿಗೆ ಇಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಗುಣ ಸಿಎಂ ಬೊಮ್ಮಾಯಿ ಅವರಲ್ಲಿದೆ ಎನ್ನುವುದು ವರಿಷ್ಠರು ಪಡೆದ ರಿಪೋರ್ಟ್ ಸಾರ. ಇದಕ್ಕೆ ಪೂರಕವಾಗಿ ಬೊಮ್ಮಾಯಿ ಅವರು ಸಿಎಂ ಆದ ಬಳಿಕ 12 ತಿಂಗಳಲ್ಲಿ 12 ಬಾರಿ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡಿದ್ದಾರೆ ಎನ್ನುತ್ತಾರೆ ಬಿಜೆಪಿಯ ಕೆಲವು ಹಿರಿಯರು.
ದೆಹಲಿಯಲ್ಲಿ ಬೊಮ್ಮಾಯಿ ಸಮನ್ವಯ ಸರಾಗ
ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಹಲವರಿಗೆ ದೆಹಲಿಯಲ್ಲಿ ತೊಡಕಾಗುತ್ತಿದ್ದುದು ಹಿಂದಿ ಭಾಷೆ. ಆದರೆ ಈ ಸಮಸ್ಯೆ ಬೊಮ್ಮಾಯಿಗಿಲ್ಲ. ಬೊಮ್ಮಾಯಿ ಅವರು ಕನ್ನಡ, ಇಂಗ್ಲಿಷ್ನಷ್ಟೆ ಸರಾಗವಾಗಿ ಹಿಂದಿ ಮಾತನಾಡಬಲ್ಲರು. ಇದೇ ಕಾರಣಕ್ಕೆ, ಬೊಮ್ಮಾಯಿ ಅವರು ಕೇಳಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ಸಿಕ್ಕಿಬಿಡುತ್ತದೆ.
ಎಲೆಕ್ಷನ್ ಗೆದ್ದ ಬೊಮ್ಮಾಯಿ…
ರಾಜ್ಯದಲ್ಲಿ ಯಡಿಯೂರಪ್ಪ ಬದಲಾವಣೆಯ ಬಳಿಕ ನಡೆದ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತದೆ ಎಂದು ಕಾಂಗ್ರೆಸ್ ಲೆಕ್ಕ ಹಾಕಿತ್ತು. ಕೆಲವು ಬಿಜೆಪಿ ನಾಯಕರೂ ಇದೇ ಧಾಟಿಯಲ್ಲಿ ಮಾತನಾಡುತ್ತಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೊಮ್ಮಾಯಿ ನಾಯಕತ್ವದಲ್ಲಿ ಬಿಜೆಪಿ ಎದುರಿಸಿದ ಬಹುತೇಕ ಚುನಾವಣೆಗಳಲ್ಲಿ ಗೆಲುವು ಸಿಕ್ಕಿತು. ಸಿಂಧಗಿ ಹಾಗೂ ಬಸವಕಲ್ಯಾಣದಲ್ಲಿ ಬೊಮ್ಮಾಯಿ ನಾಯಕತ್ವದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಮತಗಳ ಅಂತರದಿಂದ ಗೆದ್ದು ಬೀಗಿದರು. ಸ್ಥಳೀಯ ಸಂಸ್ಥೆಗಳಿಂದ ಪರಿಷತ್ಗೆ ನಡೆದ ಚುನಾವಣೆಯಲ್ಲೂ ಬಿಜೆಪಿ ಹೆಚ್ಚು ಸ್ಥಾನ ಗೆದ್ದುಕೊಂಡಿತು. ಬೊಮ್ಮಾಯಿ ಮಾಸ್ ಲೀಡರ್ ಅಲ್ಲ ಎಂಬ ಟಿಪ್ಪಣಿಯನ್ನು ಚುನಾವಣೆ ಗೆಲುವು ಸುಳ್ಳು ಮಾಡಿತು.
ರಾಜ್ಯಸಭೆಯಲ್ಲಿ ಕಾಂಗ್ರೆಸ್ಗೆ ಚೆಕ್ ಮೇಟ್: ಮೋದಿ, ಶಾ, ನಡ್ಡಾರಿಂದ ಶ್ಲಾಘನೆ
ಎರಡು ತಿಂಗಳ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬರೀ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲುವಷ್ಟು ಶಕ್ತಿ ಇತ್ತು. ಆದರೆ ಅಚ್ಚರಿ ಎಂಬಂತೆ ಮೂರನೇ ಅಭ್ಯರ್ಥಿ ಗೆಲುವಿನ ದಡ ಸೇರುವಂತೆ ಮಾಡಿತ್ತು. ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಜತೆಗೆ ಲೆಹರ್ ಸಿಂಗ್ ಕೂಡ ಮೂರನೇ ಅಭ್ಯರ್ಥಿಯಾಗಿ ಗೆದ್ದರು. ಈ ಚಾಣಾಕ್ಷ ನಡೆಗೆ ಪಿಎಂ ಮೋದಿ, ಅಮಿತ್ ಶಾ, ನಡ್ಡಾ ಅವರೇ ಖುಷಿಗೊಂಡು ಬೊಮ್ಮಾಯಿ ಅವರಿಗೆ ಕರೆ ಮಾಡಿ ಸಂತಸ ವ್ಯಕ್ತಪಡಿಸಿದರು.
2023ರ ಚುನಾವಣೆಗೆ ಬೊಮ್ಮಾಯಿ ನಾಯಕತ್ವ: ಮೋದಿ, ಶಾ ಅಭಯ
ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿ ಎಂದು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಾಜ್ಯ ಘಟಕಕ್ಕೆ ಸೂಚನೆ ನೀಡಿದ್ದಾರೆ. ಕಾಮನ್ ಮ್ಯಾನ್ ಸಿಎಂ ಎಂಬ ಹೆಗ್ಗಳಿಕೆ, ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ ಇಲ್ಲದಿರುವುದು ಮತ್ತು ಜನಪರ ಆಡಳಿತ…ಇವು ಬಸವರಾಜ ಬೊಮ್ಮಾಯಿ ಅವರಿಗೆ ಪ್ಲಸ್ ಪಾಯಿಂಟ್‌ಗಳಾಗಿವೆ.
ಇದನ್ನೂ ಓದಿ | ಬೊಮ್ಮಾಯಿ ಆಡಳಿತಕ್ಕೆ ವರ್ಷ| ಎಲ್ಲರನ್ನೂ ಪ್ರೀತಿಸುವ ಮಾತೃ ಹೃದಯಿ ಕಾಮನ್‌ಮ್ಯಾನ್ ಸಿಎಂ