Site icon Vistara News

Communal Harmony : ಗಣೇಶ ಬಪ್ಪ ಮೋರಯಾ ಎಂದ ಮುಸ್ಲಿಮರು; ಗಣಪನ ಶೋಭಾಯಾತ್ರೆಗಾಗಿ ಈದ್‌ ಮೆರವಣಿಗೆಯೇ ಮುಂದಕ್ಕೆ!

Communal harmony

ಮೈಸೂರು/ಆನೆಕಲ್‌/ಬೆಳಗಾವಿ: ಒಂದು ಕಡೆ ಸಮಾಜವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಪ್ರಯತ್ನಗಳು ನಡೆಯುತ್ತಿದ್ದರೂ ಇನ್ನೊಂದು ಕಡೆ ಅದೇ ಧರ್ಮದ ಮೂಲಕ ಜನರನ್ನು ಬೆಸೆಯುವ, ಸೌಹಾರ್ದದ ಸಂದೇಶವನ್ನು ಸಾರುವ ಕೆಲಸಗಳು (Communal Harmony) ಕೂಡಾ ನಡೆಯುತ್ತಿವೆ. ಈ ಮೂಲಕ ಹೊಸ ಭರವಸೆಯ ನಾಳೆಗಳನ್ನು ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮುಸ್ಲಿಮರು ಗಣೇಶನ ಹಬ್ಬದಲ್ಲಿ (Muslims in Ganesha Festival) ಸಕ್ರಿಯವಾಗಿ ಭಾಗಿಯಾಗಿದ್ದು ಮಾತ್ರವಲ್ಲ, ಗಣೇಶ ಬಪ್ಪ ಮೋರಯಾ (Ganapati Bappa Moraya) ಎಂದು ಜಯಕಾರ ಹಾಕಿದ್ದಾರೆ. ಕೆಲವು ಕಡೆಗಳಲ್ಲಿ ಮುಸ್ಲಿಮರೇ ಹಿಂದೂಗಳ ಮನೆಗೆ ಗೌರಿ ಗಣೇಶನ ಮೂರ್ತಿ ಕೊಟ್ಟು (Muslims distribute Ganesh idols to hindu homes) ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ, ಒಂದು ಕಡೆ ಗಣೇಶನ ಶೋಭಾಯಾತ್ರೆಗೆ (Ganesha Shobhayatre) ಯಾವ ಕಾರಣಕ್ಕೂ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಈದ್‌ ಮಿಲಾದ್‌ ಮೆರವಣಿಗೆಯನ್ನೇ (Eid Milad procession postpone) ಮುಂದಕ್ಕೆ ಹಾಕಿದ್ದಾರೆ. ಭಾರತದ ಸೌಹಾರ್ದ ಪರಂಪರೆಯ ಕೆಲವು ತುಣುಕುಗಳು ಇಲ್ಲಿವೆ.

ಮೈಸೂರಿನಲ್ಲಿ ಹಿಂದು-ಮುಸ್ಲಿಮರು ಒಟ್ಟಾಗಿ ಗೌರಿ-ಗಣೇಶ ಹಬ್ಬ ಆಚರಣೆ

ಮೈಸೂರು: ಇಲ್ಲಿನ ಅಗ್ರಹಾರದ ಕುಂದೂರು ಮಠದ ರಸ್ತೆಯಲ್ಲಿ ಹಿಂದು ಮುಸ್ಲಿಮರು ಜತೆಯಾಗಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಶ್ರೀ ಗಣಪತಿ ಯುವಕರ ಸಂಘದ ಪದಾಧಿಕಾರಿಗಳು ಆಯೋಜನೆ ಮಾಡಿದ ಹಬ್ಬದಲ್ಲಿ ಮುಸ್ಲಿಮರೂ ಸಡಗರದಿಂದ ಪಾಲ್ಗೊಂಡರು.

ಮೈಸೂರಿನ ಅಗ್ರಹಾರದ ಕುಂದೂರು ಮಠದ ರಸ್ತೆಯಲ್ಲಿ ಹಿಂದು-ಮುಸ್ಲಿಂ ಸೌಹಾರ್ದ ಗಣಪ

ಹಿಂದೂ ಮುಸ್ಲಿಮ್ ಯುವಕರು ಒಟ್ಟಾಗಿ ಗೌರಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರು. ಮುಸ್ಲಿಮರು ಪೂಜೆಗಳಲ್ಲೂ ಪಾಲ್ಗೊಂಡರು. ಗಣೇಶ ಬಪ್ಪ ಮೋರಯಾ ಅಂದಾಗ ಖುಷಿಯಿಂದ ಧ್ವನಿಗೂಡಿಸಿದರು. ಗಣೇಶನ ಅಂದ ಚಂದಗಳನ್ನು ವಿವರಿಸಿದಾಗ ಐಸಾ ಎಂದು ಸಂಭ್ರಮಿಸಿದರು.

Ganesha Idols to hindu Families by Muslims

ಹಿಂದು-ಮುಸ್ಲಿಮರು ಅಣ್ಣ ತಮ್ಮಂದಿರು ಎಂಬ ಸಂದೇಶವನ್ನು ಸಾರುವ ಕಾರಣಕ್ಕಾಗಿಯೇ, ಸಮಾಜಕ್ಕೆ ಉತ್ತಮ ಸಂದೇಶ ತಲುಪಿಸುವುದಕ್ಕಾಗಿ ಮುಸ್ಲಿಂ ಸಮಾಜದ ಹಿರಿಯರೆಲ್ಲ ಸೇರಿ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದರು. ಜತೆಗೆ ಮುಸ್ಲಿಮ್‌ ಯುವಕರು, ಮಕ್ಕಳು ಕೂಡಾ ಬಂದು ಗಣೇಶನಿಗೆ ಜಯಕಾರ ಹಾಕಿದರು.

ಪರಸ್ಪರ ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಪರಸ್ಪರ ಸಿಹಿ ತಿನಿಸಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶ ರವಾನೆ ಮಾಡಿದರು.

ಕೃಷ್ಣಗಿರಿಯಲ್ಲಿ ಮುಸ್ಲಿಮರಿಂದ ಮನೆಮನೆಗೆ ಗಣೇಶ ಮೂರ್ತಿ

ಆನೇಕಲ್: ರಾಜ್ಯ ಗಡಿಭಾಗ ಕೃಷ್ಣಗಿರಿಯಲ್ಲಿ ಮುಸ್ಲಿಮ್‌ ಯುವಕರ ತಂಡ ಮನೆ ಮನೆಗೆ ಗಣೇಶ ಮೂರ್ತಿ ನೀಡುವ ಮೂಲಕ ಹಬ್ಬದಲ್ಲಿ ಭಾಗಿಯಾಯಿತು. ಸುಮಾರು 20 ಮಂದಿ ಮುಸ್ಲಿಂ ಯುವಕರ ತಂಡ ಮನೆಗಳಿಗೆ ಹೋಗಿ ಗಣೇಶನ ಮೂರ್ತಿ ಮತ್ತು ಪೂಜಾ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ ಅನ್ನು ನೀಡಿತು.

ಹಿಂದೂಗಳ ಮನೆಗೆ ಗಣೇಶ ಮೂರ್ತಿ ನೀಡಿ ಸಂಭ್ರಮಿಸಿದ ಮುಸ್ಲಿಮರು

ಹಿಂದೂಗಳ ಮನೆಗಳಿಗೆ ತೆರಳಿ ಅಲ್ಲಿ ಅವರಿಗೆ ಶುಭಾಶಯಗಳನ್ನು ಕೋರಿದ ತಂಡ ಗಣೇಶ ಮೂರ್ತಿ ಹಾಗೂ ಪೂಜಾ ಸಾಮಗ್ರಿ ನೀಡಿತು. ನಾವು ಯಾವತ್ತಿದ್ದರೂ ಜತೆಯಾಗಿ ಬಾಳಬೇಕು, ಯಾವತ್ತೂ ನಮ್ಮ ನಡುವೆ ಭಿನ್ನಾಭಿಪ್ರಾಯ ಬರಬಾರದು. ನಾವು ಅಣ್ಣ-ತಮ್ಮಂದಿರಂತೆ ಇರಬೇಕು ಎಂದು ಹೇಳಿದರು ಹುಡುಗರು.

Ganesha Idols to hindu Families by Muslims

ಅಸ್ಲಾಂ ಎಂಬವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮುಸ್ಲಿಂ ಹುಡುಗರು ಸೇರಿ ಈ ಹೊಸ ಸೌಹಾರ್ದ ಪರಂಪರೆಗೆ ನಾಂದಿ ಹಾಡಿದ್ದಾರೆ.

ಬೆಳಗಾವಿಯಲ್ಲಿ ಈದ್‌ ಮೆರವಣಿಗೆಯನ್ನೇ ಮುಂದಕ್ಕೆ ಹಾಕಿದ ಮುಸ್ಲಿಮರು

ಬೆಳಗಾವಿ: ಬೆಳಗಾವಿಯಲ್ಲಿ ಗಣೇಶನ ವೈಭವದ ಶೋಭಾಯಾತ್ರೆ ಮತ್ತು ಈದ್‌ ಮಿಲಾದ್‌ ಮೆರವಣಿಗೆ ಒಂದೇ ದಿನ ಬರುತ್ತದೆ. ಅಂದರೆ ಸೆ. 28ರಂದೇ ಎರಡೂ ಕಾರ್ಯಕ್ರಮಗಳು ನಡೆಯುತ್ತವೆ. ಎರಡೂ ಕಾರ್ಯಕ್ರಮಗಳು ಭಾರಿ ಜನಸಂದಣಿಯೊಂದಿಗೆ ಅದ್ದೂರಿಯಾಗಿ ನಡೆಯುತ್ತವೆ. ಹೀಗಾಗಿ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮುಸ್ಲಿಮರು ಈದ್‌ ಮೆರವಣಿಗೆಯನ್ನೇ ಮುಂದಕ್ಕೆ ಹಾಕಿದ್ದಾರೆ

ಒಂದೇ ದಿನ ಎರಡೂ ಮೆರವಣಿಗೆಗಳು ನಡೆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಜತೆಗೆ ಸಮಾಜ ವಿರೋಧಿ ಶಕ್ತಿಗಳು ಇದರ ದುರ್ಲಾಭ ಪಡೆಯುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ ಮುಸ್ಲಿಂ ಧರ್ಮಗುರುಗಳು , ಅಂಜುಮನ್ -ಏ-ಇಸ್ಲಾಂ ಸಂಸ್ಥೆಯವರು ಸಭೆ ನಡೆಸಿ ತಮ್ಮ ಹಬ್ಬವನ್ನು ಅಕ್ಟೋಬರ್ 1 ರಂದು ಆಚರಿಸಲು ನಿರ್ಧರಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅಂಜುಮನ್ -ಏ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ಸಿರತ್ ಕಮಿಟಿ, ಅಂಜುಮನ್ ಸಂಸ್ಥೆ ಎಲ್ಲ ಜಮಾತ್ ಧರ್ಮಗುರುಗಳು ಸೇರಿಕೊಂಡು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ ಈದ್ ಮಿಲಾದ್ ಮುಂದೂಡಲಾಗಿದೆ. ಗಣೇಶೋತ್ಸವ ಮೆರವಣಿಗೆಗೆ ನಾವು ಹೋಗುತ್ತೇವೆ. ನಮ್ಮ ಹಬ್ಬಕ್ಕೆ ಹಿಂದೂ ಸಮಾಜ ಬಾಂಧವರನ್ನೂ ಆಹ್ವಾನಿಸುತ್ತೇವೆ. ಇದರಿಂದ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Ganesha Chathurhti : ಮುಂಬಯಿಯ ಈ ಗಣೇಶ ಜಗತ್ತಿಗೇ ಶ್ರೀಮಂತ; ಮೈಮೇಲೆ ಇದೆ 69 ಕೆ.ಜಿ ಚಿನ್ನ, 336 ಕೆ. ಜಿ ಬೆಳ್ಳಿ

ಗಣೇಶ ಮಂಡಳಿ ಮುಖಂಡ ವಿಕಾಸ ಕಲಘಟಗಿ ಮಾತನಾಡಿ, ಮುಸ್ಲಿಂ ಬಾಂಧವರು ಕೈಗೊಂಡಿರುವುದು ಐತಿಹಾಸಿಕ ನಿರ್ಧಾರ. ಎರಡು ಸಮಾಜದವರು ಒಗ್ಗಟ್ಟಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಯಶಸ್ವಿಗೊಳಿಸುತ್ತೇವೆ ಎಂದು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಕೂಡಾ ಈದ್‌ ಮಿಲಾದ್ ಮೆರವಣಿಗೆಯನ್ನು ಮುಂದೂಡಬೇಕು ಎಂಬ ಪ್ರಸ್ತಾಪ ಇತ್ತಾದರೂ ಸೌಹಾರ್ದಯುತವಾಗಿ ನಡೆಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅದೇ ದಿನ ನಡೆಯಲಿದೆ. ಅಲ್ಲಿ ಒಂದೇ ದಿನ ನಡೆಸಿದರೂ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಸಂಕಲ್ಪ ಮಾಡಿದ್ದು ಕೂಡಾ ವಿಶೇಷವೆ.

Exit mobile version