ಬೆಂಗಳೂರು: ಫೆಮಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ವಿದೇಶಕ್ಕೆ ಹಣ ರವಾನಿಸುತ್ತಿದ್ದ ಶವೊಮಿ ಇಂಡಿಯಾ (Xiaomi India) ಕಂಪನಿಯ 5551.21 ಕೋಟಿ ರೂ. ಜಪ್ತಿ ಮಾಡಿದ್ದ ಜಾರಿ ನಿರ್ದೇಶನಾಲಯ(ಇ.ಡಿ) ಕ್ರಮವನ್ನು ಸಕ್ಷಮ ಪ್ರಾಧಿಕಾರ ಅಧಿಕೃತಗೊಳಿಸಿದೆ. ಫೆಮಾ ಕಾಯ್ದೆಯ ಸೆಕ್ಷನ್ 37ರ ಅಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರವು ಈ ವಿಷಯದಲ್ಲಿ ಶಾಸನಬದ್ಧ ಅಧಿಕಾರವನ್ನು ಹೊಂದಿದೆ.
ಭಾರತದಲ್ಲಿ ಈವರೆಗೆ ಇ.ಡಿ ವಶಪಡಿಸಿಕೊಂಡಿರುವ ಅತಿ ಹೆಚ್ಚಿನ ಮೊತ್ತ ಇದಾಗಿದೆ ಎಂದು ಸಕ್ಷಮ ಪ್ರಾಧಿಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಶವೊಮಿ ಇಂಡಿಯಾ, ಚೀನಾ ಮೂಲದ ಎಂಐ ಮೊಬೈಲ್ ಕಂಪನಿಯ ಭಾಗವಾಗಿದೆ. ಫೆಮಾ ನಿಯಮ ಉಲ್ಲಂಘನೆ ಮಾಡಿ ಹಣವನ್ನು ವಿದೇಶಕ್ಕೆ ರವಾನಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ಇ.ಡಿ ಕಳೆದ ಫೆಬ್ರವರಿಯಿಂದಲೇ ತನಿಖೆ ನಡೆಸುತ್ತಿತ್ತು.
ಶವೊಮಿ ಇಂಡಿಯಾ ರಾಯಲ್ಟಿ ಹೆಸರಿನಲ್ಲಿ ಸಂಬಂಧವಿಲ್ಲದೇ ಮೂರು ಕಂಪನಿಗಳಿಗೆ 5551.21 ರೂಪಾಯಿಗೆ ಸಮನಾದ ವಿದೇಶ ಕರೆನ್ಸಿ ರವಾನಿಸಿತ್ತು ಎಬುದು ತನಿಖೆ ವೇಳೆ ಪತ್ತೆಯಾಗಿತ್ತು. ಚೀನಾದಲ್ಲಿರುವ ಮುಖ್ಯ ಕಚೇರಿಯ ಸೂಚನೆಯ ಮೇರೆಗೆ ಶವೊಮಿ ಇಂಡಿಯಾ ಈ ಹಣವನ್ನು ಕಳುಹಿಸುತ್ತಿತ್ತು .ಕಂಪನಿಗೆ ಯಾವುದೇ ರೀತಿಯಿಂದಲೂ ಸಂಬಂಧವೇ ಇರದ ಅಮೆರಿಕದ ಎರಡು ಕಂಪನಿಗಳಿಗೆ ಭಾರತದಲ್ಲಿ ಹಣ ರವಾನಿಸಲಾಗಿತ್ತು. ತನಿಖೆ ವೇಳೆ ಈ ಎಲ್ಲ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇ.ಡಿ ಬೃಹತ್ ಮೊತ್ತದ ಹಣದ ಜಪ್ತಿಗೆ ಆದೇಶಿಸಿತ್ತು.
2014ರಿಂದ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಶವೊಮಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಹಳ ವೇಗವಾಗಿ ಪ್ರವರ್ಧಮಾನಕ್ಕೆ ಬಂದಿತ್ತು. ಮಾರುಕಟ್ಟೆಯಲ್ಲಿ ಸಾಕಷ್ಟು ಪಾಲು ಪಡೆದುಕೊಂಡಿತ್ತು. ಲಾಭದಲ್ಲಿದ್ದ ಕಂಪನಿಯು ತೆರಿಗೆಯನ್ನು ತಪ್ಪಿಸುವುದಕ್ಕಾಗಿ 2015ರಿಂದಲೇ ರಾಯಲ್ಟಿ ಹೆಸರಿನಲ್ಲಿ ಹಣವನ್ನು ತನ್ನ ಮಾತೃ ಸಂಸ್ಥೆಗೆ ಕಳುಹಿಸುತ್ತಿತ್ತು.
ಜಾರಿ ನಿರ್ದೇಶನಾಲಯವು ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಶವೊಮಿ ಇಂಡಿಯಾ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿತ್ತು. ಆದರೆ, ಹೈಕೋರ್ಟ್, ಇ.ಡಿ ಆದೇಶವನ್ನು ಎತ್ತಿ ಹಿಡಿದು, ಕಂಪನಿಯ ಮನವಿಯನ್ನು ತಳ್ಳಿ ಹಾಕಿತ್ತು. ಇದರೊಂದಿಗೆ ಕಂಪನಿಗೆ ಭಾರೀ ಹಿನ್ನಡೆಯಾಗಿತ್ತು.
ಇದನ್ನೂ ಓದಿ | ಬೆಂಗಳೂರಿನಲ್ಲಿ ಚೀನಾ ಮೂಲದ ಶೆಲ್ ಕಂಪನಿ ಪತ್ತೆ, ಇ.ಡಿ ದಾಳಿ ವೇಳೆ 370 ಕೋಟಿ ಮೌಲ್ಯದ ಸಂಪತ್ತು ಫ್ರೀಜ್