Site icon Vistara News

Compromise Politics : ಎಂ.ಬಿ ಪಾಟೀಲ್‌ ಜತೆ ಕಾಂಪ್ರೊಮೈಸ್‌ ಮಾಡಿಕೊಂಡ್ರಾ ಪ್ರತಾಪ್‌ಸಿಂಹ?

Pratapsimha MB Patil

#image_title

ಮೈಸೂರು: ಕೆಲವು ದಿನಗಳಿಂದ ರಾಜ್ಯದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಅವರು ಈಗ ಕಾಂಪ್ರೊಮೈಸ್‌ (Compromise Politics) ಮಾಡಿಕೊಂಡ್ರಾ?

ʻʻಸಚಿವ ಎಂ.ಬಿ ಪಾಟೀಲ್ ಅವರು ನನ್ನ ಬಗ್ಗೆ ಮಾತನಾಡಲಿಲ್ಲ ಅಂದ್ರೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲʼʼ ಎಂದು ಸಂಸದ ಪ್ರತಾಪ ಸಿಂಹ ಹೇಳಿರುವುದು ಈ ಸಂಶಯ ಮೂಡಿಸಿದೆ.

ರಾಜ್ಯದ ಬಿಜೆಪಿ ನಾಯಕರು ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದರಿಂದಲೇ ಪಕ್ಷ ಚುನಾವಣೆಯಲ್ಲಿ ಭಾರಿ ಸೋಲನ್ನು ಕಾಣುವಂತಾಯಿತು ಎಂದು ಹೇಳುವ ಮೂಲಕ ದೊಡ್ಡ ಬಾಂಬ್‌ ಸಿಡಿಸಿದ್ದ ಪ್ರತಾಪ್‌ ಸಿಂಹ ಅದಾದ ಬಳಿಕ ಯಾರ ಮುಲಾಜಿಗೂ ಒಳಗಾಗದೆ ಮಾತನಾಡಲು ಆರಂಭಿಸಿದ್ದರು. ಬಿಜೆಪಿ ನಾಯಕರ ವಿರುದ್ಧವೇ ಹರಿಹಾಯ್ದ ಅವರು ಹೊಂದಾಣಿಕೆ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಂದಾಣಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದರು.

ಈ ನಡುವೆ, ಕಾಂಗ್ರೆಸ್‌ ನಾಯಕರನ್ನು ಚೆನ್ನಾಗಿ ಬೆಂಡೆತ್ತುವ ಬಿಜೆಪಿ ನಾಯಕ ಎನ್ನುವ ಹೆಗ್ಗಳಿಕೆಯೂ ಅವರ ಹೆಗಲೇರಿತ್ತು. ಸಚಿವರಾದ ಎಚ್.ಸಿ. ಮಹದೇವಪ್ಪ, ಜಮೀರ್‌ ಅಹಮದ್‌ ಖಾನ್‌, ಎಂ.ಬಿ. ಪಾಟೀಲ್‌ ಮೊದಲಾದವರ ಮೇಲೆ ಮುಗಿಬಿದ್ದಿದ್ದರು.

ಅದರಲ್ಲೂ ಮುಖ್ಯವಾಗಿ ಬೃಹತ್‌ ನೀರಾವರಿ ಸಚಿವ ಎಂ.ಬಿ ಪಾಟೀಲ್‌ ಮತ್ತು ಪ್ರತಾಪ್‌ ಸಿಂಹ ಅವರ ನಡುವಿನ ವಾಗ್ಯುದ್ಧ ಕುತೂಹಲ ಕೆರಳಿಸಿತ್ತು. ಎಂ.ಬಿ. ಪಾಟೀಲ್‌ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ವಿರುದ್ಧ ಟ್ವೀಟ್‌ ಮಾಡಿದ ಬೆನ್ನಿಗೇ ಪ್ರತಾಪ್‌ ಸಿಂಹ ಅವರು ಎಂ.ಬಿ. ಪಾಟೀಲ್‌ ಅವರ ಬೆನ್ನು ಹತ್ತಿದ್ದರು.

ಬ್ರಾಹ್ಮಣರ ಮೇಲೆ ಯಾಕಿಷ್ಟು ಸಿಟ್ಟು ಎಂದು ಕೇಳಿದ್ದ ಪ್ರತಾಪ್‌ ಸಿಂಹ

ಎಂ.ಬಿ. ಪಾಟೀಲ್‌ ಅವರು ʻರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಅದಾನಿ ಕಂಪನಿಯನ್ನೂ ಸ್ವಾಗತಿಸುತ್ತೇವೆʼʼ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ ಬಿ.ಎಲ್‌. ಸಂತೋಷ್‌ ಅವರು, ಎಂ.ಬಿ. ಪಾಟೀಲರು ರಾಹುಲ್‌ ಗಾಂಧಿ ಅವರಿಗೆ ಸರಿಯಾದ ಜಾಗ ತೋರಿಸಿದ್ದಾರೆʼʼ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಎಂ.ಬಿ. ಪಾಟೀಲ್‌ ಕೂಡಾ ಪ್ರತಿಕ್ರಿಯಿಸಿದ್ದರು.

ಇದರ ಮಧ್ಯೆ ಪ್ರವೇಶ ಮಾಡಿದ ಪ್ರತಾಪ್‌ ಸಿಂಹ, ಎಂ.ಬಿ. ಪಾಟೀಲರೇ ದಿನ ಬೆಳಗಾದರೆ ಬ್ರಾಹ್ಮಣರ ವಿರುದ್ಧ ದಾಳಿ ಮಾಡ್ತೀರಲ್ಲಾ.. ನೀವು ನಿಜಕ್ಕೂ ಲಿಂಗಾಯತರಾ ಎಂದು ಪ್ರಶ್ನೆ ಮಾಡಿದ್ದರು. ಇದರು ಎಂ.ಬಿ. ಪಾಟೀಲರನ್ನು ಕೆರಳಿಸಿದ್ದರೂ ಸಾವಧಾನದಿಂದ ಉತ್ತರಿಸಿ ಬ್ರಾಹ್ಮಣರ ಜತೆಗೆ ತಮಗಿರುವ ಸಂಬಂಧವನ್ನು ವಿವರಿಸಿದ್ದರು. ಇದರ ಜತೆಗೆ ಒಂದು ಕಟುವಾದ ಟ್ವೀಟ್‌ ಕೂಡಾ ಮಾಡಿದ್ದರು.

10 ತಿಂಗಳಲ್ಲಿ ಚುನಾವಣೆ ಬರುತ್ತದೆ ನೆನಪಿರಲಿ ಎಂದ ಎಂಬಿ ಪಾಟೀಲ್‌

ಈ ನಡುವೆ, ಎಂ.ಬಿ. ಪಾಟೀಲ್‌ ಮಾಡಿದ ಟ್ವೀಟ್‌ನಲ್ಲಿ ಪ್ರತಾಪ್‌ ಸಿಂಹ ಅವರ ಹೆಸರನ್ನು ಉಲ್ಲೇಖಿಸದೆಯೇ ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದಾರೆ.

ʻʻಓರ್ವ ಸಂಸದ ಲಘುವಾಗಿ ಲಂಗು-ಲಗಾಮಿಲ್ಲದೆ ಏನೇನೊ ಮಾತನಾಡುತ್ತಿದ್ದಾರೆ. ಸ್ವಪಕ್ಷ-ವಿಪಕ್ಷದವರಿಗೂ ಬೇಕಾಬಿಟ್ಟಿ ಮಾತನಾಡಿಕೊಂಡು ದಿನ ಕಳೆಯುವುದೇ ಇವರ ದಿನಚರಿಯಾಗಿದೆ. ಇವರು ಹಾಗೂ 2-3 ಭಾಷಣಕಾರರ ಮಂಡಳಿಯ ಸದಸ್ಯರು ತಮ್ಮದೇ ಪಕ್ಷದ ನಾಯಕರಾದ ಯಡಿಯೂರಪ್ಪನವರು ಏನು ಮಾಡಿದ್ದಾರೆ, ಅವರ ಕೊಡುಗೆ ಏನು ಎಂದು ಪ್ರಶ್ನಿಸುವ ದಾಟಿಯಲ್ಲಿ ಮಾತನಾಡಿ, ಅವರನ್ನು ಅಧಿಕಾರದಿಂದಲೂ ಇಳಿಸಿದರು. ಲಘುವಾಗಿ ಮಾತನಾಡಿ ಮಾತನಾಡಿ ಅವರ ಪಕ್ಷದ ಪರಿಸ್ಥಿತಿ ಏನಾಗಿದೆ ಎಂದು ರಾಜ್ಯ ಕಂಡಿದೆ. ನಾನು ಸುಮಾರು 20 ವರ್ಷಗಳ ಹಿಂದೆ ನನ್ನ 33ನೇ ವಯಸ್ಸಿಗೆ ಸಂಸದನಾದವನು. ನಾನು ಗಾಳಿಯಲ್ಲಿ ಗೆದ್ದು ಸಂಸದನಾದವನಲ್ಲ, ವಾಜಪೇಯಿ ಅಲೆಯಲ್ಲಿಯೂ ಸಹ ಗೆದ್ದ ಉತ್ತರಕರ್ನಾಟಕ ಭಾಗದ ಏಕೈಕ ಕಾಂಗ್ರೆಸ್ ಸಂಸದ. ತಮ್ಮ ಸ್ಥಾನ ಶಾಶ್ವತ ಎಂದು ತಿಳಿದಂತಿದೆ ಹಾಗೂ ಕೇವಲ ಇನ್ನು 10 ತಿಂಗಳುಗಳಲ್ಲಿ ಚುನಾವಣೆ ಬರಲಿದ್ದು ಜನರ ಮುಂದೆ ಹೋಗಲಿದ್ದಾರೆ ಎಂಬುದನ್ನು ಮರೆತಿರಬಹುದು. ನೆನಪಿರಲಿ “Every day is not a Sunday”!ʼʼ ಎಂದು ಪಾಟೀಲ್‌ ಟ್ವೀಟ್‌ ಮಾಡಿದ್ದರು.

ಕಾಂಪ್ರೊಮೈಸ್‌ ಮಾತನಾಡಿದ ಪ್ರತಾಪ್‌ ಸಿಂಹ

ಈ ನಡುವೆ, ಬುಧವಾರ ಪತ್ರಕರ್ತರ ಜತೆ ಮಾತನಾಡುವ ವೇಳೆ ಎಂ.ಬಿ. ಪಾಟೀಲ್‌ ವಿಷಯದಲ್ಲಿ ಕಾಂಪ್ರೊಮೈಸ್‌ ಸೂತ್ರ ಅನುಸರಿಸಿದಂತೆ ಕಂಡುಬಂತು.

ʻʻಸಚಿವ ಎಂ.ಬಿ ಪಾಟೀಲ್ ಅವರು ನನ್ನ ಬಗ್ಗೆ ಮಾತನಾಡಲಿಲ್ಲ ಅಂದ್ರೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲʼʼ ಎಂದು ಹೇಳಿದರು ಸಂಸದ ಪ್ರತಾಪ ಸಿಂಹ.
ʻʻಅವರ ಬಗ್ಗೆ ಅಪಾರವಾದ ಗೌರವ ಇದೆ. ರಾಜ್ಯದ ನೀರಾವರಿ ಸಚಿವರು, ನಾನು ಸಹ ಅವರ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರ ಬಗ್ಗೆ ಜನರು ಅಪಾರವಾದ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಮ್ಮ ಕೆಲಸಗಳು ಮಾತನಾಡಬೇಕು, ಮಾತನಾಡುವುದು ಸಾಧನೆಯಾಗಬಾರದುʼʼ ಎಂದು ನುಡಿದರು.

ಇದನ್ನೂ ಓದಿ: MP Pratapsimha: ಶಾಸಕ ಪ್ರದೀಪ್‌ ಈಶ್ವರ್‌ಗೆ ಓರಿಯೆಂಟೇಷನ್‌ ಅಗತ್ಯವಿದೆ ಎಂದ ಪ್ರತಾಪ್‌ಸಿಂಹ

Exit mobile version